More

    Web Exclusive | ದಾಖಲೆಯತ್ತ ವಜೂಭಾಯಿ ವಾಲಾ ಆಳ್ವಿಕೆ; ದೀರ್ಘಾವಧಿ ರಾಜ್ಯಪಾಲರಾಗಿ ಮುಂದುವರಿಕೆ

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    • ಖುರ್ಷಿದ್ ಆಲಂ ಖಾನ್​ಗೆ ಅತಿ ಹೆಚ್ಚುಕಾಲ ರಾಜಭವನ ಆತಿಥ್ಯ

    ಗುಜರಾತ್ ಮೂಲದ ವಜೂಭಾಯಿ ವಾಲಾ ಅವರು ರಾಜ್ಯಪಾಲರಾಗಿ ದಾಖಲೆ ಬರೆಯುವತ್ತ ಹೊರಟಿದ್ದಾರೆ. ಕರ್ನಾಟಕ ರಾಜಭವನದ ಇತಿಹಾಸ ಪುಟಗಳನ್ನು ತಿರುವಿದರೆ ಖುರ್ಷಿದ್ ಆಲಂ ಖಾನ್ ಅತಿ ದೀರ್ಘಾವಧಿ ರಾಜ್ಯಪಾಲರಾಗಿದ್ದರು. ಅವರನ್ನು ಹೊರತುಪಡಿಸಿದರೆ ಜಯಚಾಮರಾಜೇಂದ್ರ ಒಡೆಯರ್ ಎರಡನೇ ದೀರ್ಘಾವಧಿ ರಾಜ್ಯಪಾಲರು. ಇನ್ನೆರಡು ತಿಂಗಳು ಕಳೆದರೆ ವಜುಭಾಯಿ ವಾಲಾ ಎರಡನೇ ದೀರ್ಘಾವಧಿ ರಾಜ್ಯಪಾಲ ಎನಿಸಿಕೊಳ್ಳುವರು.

    1956ರಿಂದ ಇಲ್ಲಿಯವರೆಗೆ 18 ರಾಜ್ಯಪಾಲರ ಮಾರ್ಗದರ್ಶನ ರಾಜ್ಯಕ್ಕೆ ಸಿಕ್ಕಿದೆ. 11 ಮಂದಿ ಮೂರು ವರ್ಷಕ್ಕಿಂತ ಕಡಿಮೆ ಅವಧಿ ಕಾರ್ಯನಿರ್ವಹಿಸಿದ್ದಾರೆ. ನಾಲ್ವರು ನಾಲ್ಕೂವರೆ ವರ್ಷದಿಂದ ಐದು ವರ್ಷದ ಅವಧಿ ಇದ್ದರು. 82 ವರ್ಷದ ವಿ.ಆರ್.ವಾಲಾ 2014ರ ಸೆಪ್ಟೆಂಬರ್ 1ರಂದು ರಾಜ್ಯಪಾಲರಾಗಿ ನೇಮಕಗೊಂಡರು. ಇದೀಗ ಅವರ ಅಧಿಕಾರಾವಧಿ 6 ವರ್ಷ ಮುಕ್ತಾಯವಾಗಿದೆ. 1956ರ ನವೆಂಬರ್ 1ರಂದು ಜಯಚಾಮರಾಜೇಂದ್ರ ಒಡೆಯರ್ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿ 6 ವರ್ಷ 184 ದಿನ ಕರ್ತವ್ಯ ನಿಭಾಯಿಸಿದ್ದರು. ಇದೀಗ ವಾಲಾ ಅವರು ಒಡೆಯರ್ ದಾಖಲೆಯನ್ನು ಹಿಂದಿಕ್ಕುವ ದಿನಗಳು ಸಮೀಪಿಸಿದೆ.

    ಇಷ್ಟೊಂದು ದೀರ್ಘಾವಧಿಗೆ ರಾಜ್ಯಪಾಲರನ್ನು ಮುಂದುವರಿಸುವ ಪ್ರಕರಣಗಳು ಕಡಿಮೆಯೇ. ಆದರೂ ಐದು ವರ್ಷ ಪೂರ್ಣಗೊಂಡ ಬಳಿಕ ರಾಜ್ಯಪಾಲರ ಸ್ಥಾನಕ್ಕೆ ದೆಹಲಿ ಮಟ್ಟದಲ್ಲಿ ಬೇರೆ ಬೇರೆ ಹೆಸರುಗಳು ಕೇಳಿಬಂದಿತ್ತು. ಆದರೆ ವಿ.ಆರ್.ವಾಲಾ ಪ್ರಭಾವ ಬಳಸಿ ಮುಂದುವರಿದು ಒಂದು ವರ್ಷವೇ ಕಳೆಯಿತು. 1992ರ ಜನವರಿ 6ರಂದು ರಾಜ್ಯಪಾಲರಾಗಿ ನೇಮಕಗೊಂಡ ಖುರ್ಷಿದ್ ಆಲಂ ಖಾನ್ 1999 ಡಿಸೆಂಬರ್ 2ವರೆಗೂ ಇದ್ದೂ ಬರೋಬ್ಬರಿ 7 ವರ್ಷ 330 ದಿನ ರಾಜಭವನದ ಆತಿಥ್ಯ ಅನುಭವಿಸಿದರು. ಈಗ ವಾಲಾ ಈ ಹಾದಿಯತ್ತ ಸಾಗಿರುವುದು ವಿಶೇಷ.

    ವಜೂಭಾಯಿ ವಾಲಾ ಈ ಮುನ್ನ ಜನಸಂಘ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆ ಇದ್ದು, ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಕೂಡ ಅನುಭವಿಸಿದ್ದರು. ರಾಜಕೋಟ್ ಮೇಯರ್ ಆಗಿ, ಬಳಿಕ ಶಾಸಕರಾಗಿ, 2012ರಿಂದ 2014ರವರೆಗೆ ಗುಜರಾತ್ ವಿಧಾನಸಭೆ ಸ್ಪೀಕರ್ ಕೂಡ ಆಗಿದ್ದವರು. ಅದಕ್ಕೂ ಮುನ್ನ ಎರಡು ಭಾರಿ ಆ ರಾಜ್ಯದ ಹಣಕಾಸು ಸಚಿವರಾಗಿದ್ದವರು. ಈ ಅನುಭವ ಅವರನ್ನು ರಾಜ್ಯಪಾಲರ ಹುದ್ದೆಗೆ ಏರುವಂತೆ ಮಾಡಿತ್ತು. 5 ವರ್ಷದ ಬಳಿಕವೂ ಅವರನ್ನು ರಾಜ್ಯಪಾಲರ ಹುದ್ದೆಯಲ್ಲಿ ಮುಂದುವರಿಕೆಗೆ ‘ಗುಜರಾತ್ ನಂಟು’ ಕಾರಣ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಅವರ ಆರು ವರ್ಷದ ಅವಧಿಯಲ್ಲಿ ಮೂರು ಬಾರಿ ಬದಲಾವಣೆ ಕುರಿತು ಚರ್ಚೆಗಳು ನಡೆದಿತ್ತು. ಆದರೂ ಅವರ ಹಿರಿತನ, ಸಂಪರ್ಕಗಳು ಈ ಹುದ್ದೆಯಲ್ಲಿ ಮುಂದುವರಿಯುವಂತೆ ಮಾಡಿದೆ ಎಂದು ರಾಜ್ಯ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

    ಕರ್ನಾಟಕದವರಿಗೆ ಸಿಗದ ಅವಕಾಶ

    ಅನ್ಯರಾಜ್ಯದವರೇ ರಾಜ್ಯಪಾಲರಾಗಬೇಕೆಂಬುದು ನಿಯಮ. ಅಂತೆಯೇ ಕರ್ನಾಟಕದಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಮಂದಿಗೆ ರಾಜ್ಯಪಾಲರಾಗುವ ಅವಕಾಶ ದೊರೆತಿಲ್ಲ. ಇತ್ತಿಚಿನ ಅಂದರೆ, ಯುಪಿಎ ಅವಧಿಯಲ್ಲಿ ಮಾರ್ಗರೇಟ್ ಆಳ್ವಾ, ಎಸ್.ಎಂ.ಕೃಷ್ಣ ಮತ್ತು ಎನ್​ಡಿಎ ಅವಧಿಯಲ್ಲಿ ರಾಮಜೋಯಿಸ್ ರಾಜ್ಯಪಾಲರಾಗಿದ್ದರು. ಇವರನ್ನು ಹೊರತುಪಡಿಸಿ ರಾಜ್ಯಪಾಲರಾಗುವ ಅರ್ಹತೆ ಹೊಂದಿದವರು ಒಂದಷ್ಟು ಮಂದಿ ಇದ್ದರೂ ಅವಕಾಶಗಳು ಸಿಗುತ್ತಿಲ್ಲ. ಉತ್ತರ ಭಾರತದ ಲಾಭಿಯಿಂದ ಇಲ್ಲಿನವರಿಗೆ ಅವಕಾಶಗಳು ಕೈತಪ್ಪಿಹೋಗುತ್ತಿವೆ. ಅಲ್ಲದೆ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದಾಗ ಇಂಥ ನೇಮಕ ಸಲೀಸು. ಆದರೂ ರಾಜ್ಯ ಘಟಕದಿಂದಲೇ ಈ ಪ್ರಯತ್ನ ನಡೆಯುತ್ತಿಲ್ಲ ಎಂಬ ಚರ್ಚೆ ಸಹ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts