More

    ಕರೊನಾ ಮುಂಜಾಗ್ರತೆ ವಹಿಸಿ

    ವಿಜಯಪುರ: ಜಿಲ್ಲೆ ವ್ಯಾಪ್ತಿಯಲ್ಲಿ ಕರೊನಾ ವೈರಸ್ ಸಾಂಕ್ರಾಮಿಕವಾಗಿ ತಡೆಗಟ್ಟುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮುತುವರ್ಜಿವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರೊನಾ ವೈರಸ್ (ಕೋವಿಡ್-19) ಕುರಿತ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಸೋಂಕು ಹರಡದಂತೆ ತಜ್ಞ ವೈದ್ಯರನ್ನೊಳಗೊಂಡ ಜಾಗೃತಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

    ಜಾಗೃತಿ ಸಮಿತಿ ರಚನೆ

    ಕರೊನಾ ವೈರಸ್ ತಡೆಗಟ್ಟಲು ಜಾಗೃತಿ ಸಮಿತಿ ರಚಿಸಲಾಗಿದೆ. ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಎಸ್.ಎಲ್. ಲಕ್ಕಣ್ಣನವರ ಅವರನ್ನು ವಿಜಯಪುರ ನಗರ, ಜಿಲ್ಲಾ ಕುಷ್ಠರೋಗ ನಿರ್ವಹಣಾಧಿಕಾರಿ ಡಾ. ಸಂಪತ್ ಗುಣಾರೆ ಅವರನ್ನು ವಿಜಯಪುರ ಗ್ರಾಮೀಣ, ಬ. ಬಾಗೇವಾಡಿ, ಮುದ್ದೇಬಿಹಾಳ ತಾಲೂಕುಗಳನ್ನು ನೀಡಲಾಗಿದೆ. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಈರಣ್ಣ ಧಾರವಾಡಕರ ಅವರನ್ನು ಇಂಡಿ ಹಾಗೂ ಸಿಂದಗಿ ತಾಲೂಕುಗಳಲ್ಲಿ ಜಾಗೃತಿ ಮೂಡಿಸಲು ನೇಮಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸರ್ವೇಕ್ಷಣಾಧಿಕಾರಿ ಮುಕುಂದ ಗಲಗಲಿ ಅವರನ್ನು ಜಾಗೃತಿ ಸಮಿತಿಯ ವೈದ್ಯಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

    ನಿರ್ಲಕ್ಷ್ಯಿಸಿದರೆ ಕ್ರಮ

    ಕರೊನಾ ಸೋಂಕು ತಗಲಿದ ಅಥವಾ ಶಂಕಿತ ವ್ಯಕ್ತಿಗಳ ಮೇಲೆ ನಿಗಾ ಇಡಬೇಕು. ಅದಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪ್ಸೆ ಅವರನ್ನು ಮೇಲುಸ್ತುವಾರಿಯಾಗಿ ನೇಮಿಸಲಾಗಿದೆ. ಎಲ್ಲಾ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತವಾಗಿಟ್ಟುಕೊಳ್ಳಬೇಕು.ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

    ಸುಳ್ಳು ಸುದ್ದಿಗೆ ಬ್ರೇಕ್

    ಜಿಲ್ಲೆಯ ಕೇಂದ್ರ ಸಾರಿಗೆ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಹೆಲ್ಪ್‌ಡೆಸ್ಕ್ ತೆರೆಯಬೇಕು. ಅದರ ನಿರ್ವಹಣೆಯನ್ನು ಸಂಬಂಧಿಸಿದ ಆರೋಗ್ಯ ಅಧಿಕಾರಿಗಳು ಪ್ರತಿದಿನವೂ ಕಾರ್ಯನಿರ್ವಹಿಸಬೇಕು. ವಿದೇಶದಿಂದ ಬರುವ ವ್ಯಕ್ತಿಗಳಲ್ಲಿ ಕರೊನಾ ವೈರಸ್ ಸಂಬಂಧಿಸಿದ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತ ಮುಂಜಾಗ್ರತೆ ವಹಿಸಿ ಆಸ್ಪತ್ರೆ ಹಾಗೂ ಮನೆಯಲ್ಲಿ ಚಿಕಿತ್ಸೆ ನೀಡಬೇಕು. ಕರೊನಾ ವೈರಸ್‌ಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದಲ್ಲಿ ನಿಗಾವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹಬ್ಬದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    ಸೋಂಕಿತರ ಮೇಲೆ ನಿಗಾ

    ಬೆಲ್ಜಿಯಂ ದೇಶದಿಂದ ಬಂದಿರುವ ಇಬ್ಬರು ವ್ಯಕ್ತಿಗಳಲ್ಲಿ ಕರೊನಾ ವೈರಸ್‌ಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯ ಕದ ಮಾದರಿಯನ್ನು ಕಳುಹಿಸಲಾಗಿದೆ. ವಿಜಯಪುರದಿಂದ ಹಜ್‌ಯಾತ್ರೆಗೆ ಹೋಗಿರುವ 10 ಜನರ ಮಾಹಿತಿಯನ್ನು ಹಜ್ ಕಮಿಟಿಯಿಂದ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಪಂ ಸಿಇಒ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಾಮ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪ್ಸೆ, ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ವಿಶ್ವ ಆರೋಗ್ಯ ಸಂಸ್ಥೆ ಸರ್ವೇಕ್ಷಣಾಧಿಕಾರಿ ಮುಕುಂದ ಗಲಗಲಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

    ಕರೊನಾ ಮುಂಜಾಗ್ರತೆ ವಹಿಸಿ
    ಕರೊನಾ ಮುಂಜಾಗ್ರತೆ ವಹಿಸಿ
    ಕರೊನಾ ಮುಂಜಾಗ್ರತೆ ವಹಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts