More

    ಆತಂಕದ ಮಧ್ಯೆ ಆತ್ಮವಿಶ್ವಾಸ ಹೆಚ್ಚಿಸಿದ ಕವಿತೆಗಳು

    ವಿಜಯಪುರ: ಕರೊನಾ ಆತಂಕದ ನಡುವೆಯೂ ಇಲ್ಲಿನ ಸಾಹಿತಿಗಳ ಬಳಗವೊಂದು ಆನ್‌ಲೈನ್‌ನಲ್ಲೇ ಕವಿಗೋಷ್ಠಿ ಹಮ್ಮಿಕೊಂಡು ಕವನಗಳ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವ ಸತ್ಕಾರ್ಯ ಮಾಡಿದೆ.
    ಭೃಂಗಿಮಠ ಸಾಮಾಜಿಕ ಕಾನೂನು ಕ್ರಿಯಾತ್ಮಕ ವೇದಿಕೆಯಿಂದ ಬುಧವಾರ ಯುಗಾದಿ ಹಬ್ಬದ ನಿಮಿತ್ತ ‘ಕರೊನಾ ಕಹಿ-ಯುಗಾದಿ ಸಿಹಿ’ ಎಂಬ ಆನ್‌ಲೈನ್ ಕವಿಗೋಷ್ಠಿ ಹಮ್ಮಿಕೊಳ್ಳಲಾಯಿತು.
    ಬಾಲಕಿ ಆರಾಧ್ಯ ಕುಂಬಾರ ಆನ್‌ಲೈನ್‌ನಲ್ಲೇ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲ ಕವಿಗಳು ಮನೆಯಿಂದಲೇ ಕವನ ವಾಚಿಸಿದ ವಿಡಿಯೋ ತುಣುಕುಗಳನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಿದರು. ಕೆಲವರು ಲೈವ್‌ನಲ್ಲೇ ಕವನ ವಾಚಿಸಿ ಗಮನ ಸೆಳೆದರು. ಇನ್ನು ಕೆಲವರು ಕೇವಲ ಧ್ವನಿಸುರುಳಿ ಮೂಲಕ ಕವನಗಳನ್ನು ಕಳುಹಿಸಿಕೊಟ್ಟಿದ್ದು ವಿಶೇಷವಾಗಿತ್ತು.
    ಬಸವನಬಾಗೇವಾಡಿಯ ಕವಿ ಡಾ. ಮುರುಗೇಶ ಸಂಗಮ ‘ಹಬ್ಬ’ ಕವಿತೆ ಮೂಲಕ ಯುಗಾದಿ ಮಹತ್ವ ಸಾರಿದರು. ಯುವ ಕವಿ ರಾಜು ಹಿರೇಮಠ ಕಲಬುರಗಿ ‘ಮನೆಯಿಂದನೇ ಯುಗಾದಿ’ ಎಂಬ ಕವನದ ಮೂಲಕ ಯುಗಾದಿಯ ಇತಿಹಾಸ, ವರ್ತಮಾನ ಮತ್ತು ಭವಿಷ್ಯ ಕುರಿತು ತಿಳಿಸಿದರು. ಕವಯಿತ್ರಿ ಡಾ. ಸುಜಾತಾ ಚಲವಾದಿ ‘ಜವರಾಯನ ಗಂಟೆ ಸದ್ದು’ ಕವಿತೆ ಮೂಲಕ ವೈರಸ್ ಎಂಬ ಮಹಾದುರುಳರನ್ನು ಹೊಡೆದೋಡಿಸೋಣ ಎಂದು ಸಾರಿದರು. ಹಿರಿಯ ಕವಿ ಜಂಬುನಾಥ ಕಂಚ್ಯಾಣಿ ಅವರ ‘ರಕ್ಕಸ ಕೋವಿಡ್’ ಕವಿತೆ ವುಹಾನ್‌ದಿಂದ ಬಂದ ಕರೊನಾದ ಕರಾಳ ಸನ್ನಿವೇಶವನ್ನು ಸಾದರಪಡಿಸಿತು. ಪ್ರಕಾಶ ಕುಂಬಾರ ಅವರ ‘ಕರೊನಾ ಮತ್ತು ಯುಗಾದಿ’ ಕವಿತೆಯಲ್ಲಿನ ಎಲ್ಲರ ಬದುಕಲಿ ಕೂಗಲಿ ಕೋಗಿಲೆ ಎಂಬ ಆಶಯ ಮೆಚ್ಚುಗೆಗೆ ಪಾತ್ರವಾಯಿತು. ಹಿರಿಯ ಕವಯಿತ್ರಿ ಇಂದುಮತಿ ಲಮಾಣಿ ಅವರ ‘ವಿಜಯಪುರ’, ಮಲ್ಲಿಕಾರ್ಜುನ ಮಠಪತಿ ನರನಾಳ, ಡಾ ಚನ್ನವೀರ ಬೆಂಗಳೂರ, ಸಂಗಮೇಶ ಬದಾಮಿ, ರಾಜಶೇಖರ ಹಿರೇಮಠ, ರಮೇಶ ಕೋಟ್ಯಾಳ, ಸಂತೋಷಕುಮಾರ ನಿಗಡಿ, ಮಲ್ಲಿಕಾರ್ಜುನ ಭೃಂಗಿಮಠ, ರುಕ್ಷ್ಮಿಣಿ ಚವಾಣ್, ಶ್ರೇಯಾ ಮಣ್ಣೂರ, ಮೋಹನ ಮೇಟಿ ಮುಂತಾದವರ ಕವಿತೆಗಳು ಭರವಸೆಯ ಬೆಳಕು ಚೆಲ್ಲಿದವು. ಪ್ರಜ್ವಲಕುಮಾರ ಮಠ ಸ್ವಾಗತಿಸಿದರು. ಕೊನೆಗೆ ತ್ರಿವೇಣಿ ಬಿ.ವಂದಿಸಿದರು.

    ಆತಂಕದ ಮಧ್ಯೆ ಆತ್ಮವಿಶ್ವಾಸ ಹೆಚ್ಚಿಸಿದ ಕವಿತೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts