ಐಗಳಿ: ಮೊದಲು ನಾವು ಭಾರತೀಯರು, ನಂತರ ನಮ್ಮ ಧರ್ಮ. ಇಸ್ಲಾಂ ಸರಿಯಾಗಿ ಅರ್ಥ ಮಾಡಿಕೊಳ್ಳಿ. ಕರೊನಾಗೆ ಜಾತಿಯ ಭೇದವಿಲ್ಲ. ರಂಜಾನ್ ವಿಧಿ-ವಿಧಾನಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳಿ ಎಂದು ಮಾಜಿ ಶಾಸಕ ಶಹಜಾನ್ ಡೊಂಗರಗಾಂವ ಹೇಳಿದ್ದಾರೆ.
ಐಗಳಿ ಗ್ರಾಮದ ಹೊರವಲಯದಲ್ಲಿರುವ ಹಾಜಿಸಾಬ ದರ್ಗಾ ಆವರಣದಲ್ಲಿ ಸೋಮವಾರ ರಂಜಾನ್ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತಾಲೂಕಿನ ವಿವಿಧ ಗ್ರಾಮಗಳ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದರು. ಸಮಸ್ತ ಮನುಕುಲ ಗೌರವಿಸುವುದನ್ನು ಇಸ್ಲಾಂ ಹೇಳುತ್ತದೆ. ನಾವು ಬದುಕಿದ್ದರೆ ಮಾತ್ರ ನಮ್ಮ ಧರ್ಮ ಆಚರಣೆಗಳೆಲ್ಲ ಇರುತ್ತವೆ. ಇಂದು ಬಂದಿರುವ ಸಂಕಟದಿಂದ ಪಾರಾದರೆ ಮುಂದೆ ನಮಾಜ್, ಮಸೀದಿ, ಜೀವನ. ಆದ್ದರಿಂದ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯ ಎಂದರು.
ರಂಜಾನ್ ವಿಧಿ-ವಿಧಾನವನ್ನು ಮನೆಯಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಿಸುವುದು ಹಾಗೂ ಕರೊನಾ ಸೋಂಕು ಸಮಸ್ಯೆ ಬಗೆಹರಿಯುವವರೆಗೆ ಮಸೀದಿಗೆ ಬೀಗ ಹಾಕಿ ಕಾನೂನು ಪಾಲನೆ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಪಿಎಸ್‌ಐ ಕೆ.ಎಸ್.ಕೊಚರಿ ಮಾತನಾಡಿದರು. ಹಾಫೀಸಾಬ್ ರಿಜ್ವಾನ್ ಮೀರಾಗೋಳ, ನೂರಹ್ಮದ ಡೊಂಗರಗಾವ, ಅಬ್ದುಲ್‌ಖಯೂಮ್ ಮುಜಾವರ್, ಅಕ್ರಂಸಾಬ ಮುಜಾವರ, ಹಾಸೀಂಫೀರ್ ಮುಜಾವರ್, ಮುಬಾರಕ್ ಮುಜಾವರ್, ಅಲ್ಲಾಭಕ್ಷ ನದಾಫ್, ಮುನ್ನಾ ಕರಜಗಿ, ಶೌಕತ್‌ಅಲಿ ಮುಜಾವರ್ ಇತರರು ಇದ್ದರು.