More

    ಗುರಿ, ಅಧ್ಯಯನದಿಂದಲೇ ಬದುಕು ಕಟ್ಟಿಕೊಳ್ಳಬೇಕು; ಅದೃಷ್ಟದಿಂದ ಅಲ್ಲ

    ಮೈಸೂರು: ಸಾಧನೆ ಎನ್ನುವುದು ಸುಲಭವಾಗಿ ಬರುವುದಿಲ್ಲ. ಅದಕ್ಕೆ ನಗರಪ್ರದೇಶ, ಗ್ರಾಮೀಣ ಎನ್ನುವ ತಾರತಮ್ಯ ಇಲ್ಲ. ಸತತವಾಗಿ ಅಧ್ಯಯನ ಮಾಡಿ ಗುರಿ ಸಾಧನೆಯಿಂದ ಹಿಂದೆ ಸರಿಯದವರು ಖಂಡಿತ ಯಶಸ್ವಿಯಾಗುತ್ತಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಜಯಕರ ಶೆಟ್ಟಿ ಹೇಳಿದರು.


    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆ-ಸಿಇಟಿ ಮತ್ತು ನೀಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು

    ಎಲ್ಲರಲ್ಲೂ ಜಾಣತನ ಇದ್ದೇ ಇರುತ್ತದೆ. ಇದರೊಟ್ಟಿಗೆ ನಿಮ್ಮ ಆಯ್ಕೆಗಳು ಸರಿಯಾಗಿರಲಿ. ಅಧ್ಯಾಪಕನೋ, ಇಂಜಿನಿಯರೋ, ವೈದ್ಯನೋ ಅಥವಾ ಸಾರ್ವಜನಿಕ ಸೇವಕನೋ ಎನ್ನುವುದನ್ನು ನಿರ್ಧರಿಸಿಕೊಂಡು ತಯಾರಿ ಮಾಡಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು

    ನಾನು ಹಳ್ಳಿಯಿಂದ ಬಂದವನು. ಸರ್ಕಾರಿ ಶಾಲೆಯಲ್ಲೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವನು. ಆಂಗ್ಲ ಭಾಷೆಯ ಸಮಸ್ಯೆಯು ನನಗಿತ್ತು. ಸತತ ಪರಿಶ್ರಮದಿಂದ ನಾನು ದಂತ ವೈದ್ಯ ಕಾಲೇಜಿಗೆ ಪ್ರವೇಶ ಪಡೆದು ದಂತ ವೈದ್ಯ ಪದವಿಯನ್ನು ಪಡೆದುಕೊಂಡೆ. ಆದ್ದರಿಂದ ನಿಮ್ಮ ಗುರಿ, ಅಧ್ಯಯನದ ಕ್ರಮದಿಂದಲೇ ಬದುಕು ಕಟ್ಟಿಕೊಳ್ಳಬಹುದೇ ಹೊರತು ಅದೃಷ್ಟದಿಂದ ಅಲ್ಲವೇ ಅಲ್ಲ ಎಂದು ಹುರಿದುಂಬಿಸಿದರು.

    ಗೂಗಲ್ ಎನ್ನುವುದು ಈಗ ಜ್ಞಾನದ ಆಗರ. ಇಂಟರ್‌ನೆಟ್ ಇದಕ್ಕೆ ಬೇಕಾದ ಪೂರಕ ಮಾರ್ಗ. ಹಿಂದೆಯೆಲ್ಲ ಮಾಹಿತಿಗೆ ಗ್ರಂಥಾಲಯಗಳಿಗೆ ಹೋಗಿ ಅಧ್ಯಯನ ಮಾಡಬೇಕಾಗಿತ್ತು. ತಂದೆ-ತಾಯಿಯರನ್ನು ಬಿಟ್ಟು ಬೇರೆಲ್ಲವೂ ಇಂಟರ್‌ನೆಟ್‌ನಲ್ಲೇ ಸಿಗುತ್ತದೆ ಎನ್ನುವ ಪರಿಸ್ಥಿತಿಯಿದೆ. ಈಗ ಬೆರಳ ತುದಿಯಲ್ಲೇ ಮಾಹಿತಿ ಸಿಗುವುದರಿಂದ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಮ್ಮ ಕೌಶಲಗಳು ನಿಂತ ನೀರಾಗದಿರಲಿ ಎಂದರು.


    ಪಿಯುಸಿ ಹಂತದಲ್ಲೇ ಮುಂದೆ ಯಾವ ಕೋರ್ಸ್ ಮಾಡುತ್ತೇನೆ ಎನ್ನುವ ನಿರ್ಣಯ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ತಿಳಿದುಕೊಂಡು ತಯಾರಿ ಆರಂಭಿಸಬೇಕು ಎಂದು ಹೇಳಿದರು

    ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಅರಿವೇ ಗುರು ಎಂಬ ಬಸವಣ್ಣನವರ ಉಕ್ತಿಯಂತೆ ನೀವು ಬದುಕಿನಲ್ಲಿ ಸತತ ಪ್ರಯತ್ನ ಮಾಡಿದರೆ ಫಲ ಸಿಗುತ್ತದೆ. ಯಾವುದೇ ಪರೀಕ್ಷೆ ಎದುರಿಸುವ ಮುನ್ನ ತಯಾರಿ ಮಾಡಿಕೊಳ್ಳಬೇಕು. ಜತೆಗೆ ವಿಶ್ಲೇಷಣಾತ್ಮಕವಾಗಿ ನೋಡುವುದನ್ನು ರೂಢಿಸಿಕೊಳ್ಳಬೇಕು. ಬದ್ಧ್ದತೆ ಇದ್ದರೆ ಯಶಸ್ಸು ನಿಮ್ಮದೇ ಎಂದರು.

    ಕುಲಸಚಿವ ಪ್ರೊ. ಕೆ.ಬಿ.ಪ್ರವೀಣ, ಡೀನ್‌ಗಳಾದ ಪ್ರೊ. ಲಕ್ಷ್ಮೀ, ಪ್ರೊ.ರಮಾನಾಥಂ ನಾಯ್ಡು, ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts