More

    ಕಾವೇರಿ ಮಡಿಲಲ್ಲಿ ನೀರಿಗೆ ತತ್ವಾರ

    ಮಡಿಕೇರಿ:

    ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ಕ್ಷೀಣಿಸುತ್ತಿದ್ದಂತೆಯೇ ನದಿಯಂಚಿನ ಜನವಸತಿ ಪ್ರದೇಶಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಜಿಲ್ಲೆಯ ಪ್ರಮುಖ ಪಟ್ಟಣ ಕುಶಾಲನಗರದಲ್ಲಿ ದಿನಂಪ್ರತಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, ಬೇಡಿಕೆಯ ಪ್ರಮಾಣದಲ್ಲಿ ಮನೆ ಮನೆಗಳಿಗೆ ಜೀವಜಲ ತಲುಪಿಸಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ನದಿ ಪಕ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇದೇ ಪರಿಸ್ಥಿತಿ ಇದ್ದು, ಲೋಕಸಭಾ ಚುನಾವಣೆ ಬಿಸಿಯ ಮಧ್ಯೆ ಕುಡಿಯು ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.

    ಹಲವು ದಶಕಗಳ ನಂತರ ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಬೀಕರ ಬರದ ಅನುಭವ ಆಗುತ್ತಿದೆ. ಒಂದು ಕಡೆ ಲೋಕಸಭಾ ಚುನಾವಣೆಯ ಪ್ರಚಾರ ಕಾವು ಬಿರುಸು ಪಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಜಿಲ್ಲೆಯ ಬಹುತೇಕ ಭಾಗಗಳು ಕುಡಿಯುವ ನೀರಿನ ದೊಡ್ಡ ಸಮಸ್ಯೆ ಎದುರಿಸುತ್ತಿವೆ. ನೀರಿಗಾಗಿ ನದಿ ಮೂಲವನ್ನೇ ನಂಬಿಕೊಂಡಿರುವ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ಹೆಗ್ಗಳಿಕೆಯ ಕುಶಾಲನಗರದಲ್ಲಿ ಮೊದಲು ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಇದೀಗ ಇದು ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿದ್ದು, ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲೂ ಕೊಳವೆ ಬಾವಿ ಅವಲಂಬನೆ ಅನಿವಾರ್ಯವಾಗಿದೆ.

    ಈ ಮುಂಗಾರಿನಲ್ಲಿ ಮಳೆಯ ಕೊರತೆ ಮತ್ತು ಇದರ ಪರಿಣಾಮದಿಂದ ಅಂತರ್ಜಲ ಕುಸಿತದ ಕಾರಣದಿಂದ ಕಾವೇರಿ, ಹಾರಂಗಿ, ಲಕ್ಷ್ಮಣತೀರ್ಥ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸಿದ್ದು, ಕೆಲವು ಭಾಗಗಳಲ್ಲಂತೂ ಸಂಪೂರ್ಣ ಹರಿವು ನಿಂತುಹೋಗಿದೆ. ಮಳೆಗಾಲದಲ್ಲಿ ಮೈತುಂಬಿಸಿಕೊಂಡು ರುದ್ರರಮಣೀಯವಾಗಿ ಹರಿಯುವ ನದಿಗಳ ಪರಿಸ್ಥಿತಿ ಈಗ ನೋಡಿದರೆ ಅಚ್ಚರಿಯಾಗುತ್ತದೆ, ಹಿರಿಯರ ಅನುಭವದ ಮಾತಿನ ಪ್ರಕಾರ ಈ ಮೊದಲೆಲ್ಲಾ ಬೇಸಿಗೆಯಲ್ಲಿ ನದಿಯ ನೀರು ಕಡಿಮೆ ಆಗುತ್ತಿತ್ತೇ ಹೊರತೂ ಈ ಮಟ್ಟಕ್ಕೆ ಬತ್ತಿಹೋಗಿರಲಿಲ್ಲ ಎನ್ನುತ್ತಾರೆ.

    ಕುಶಾಲನಗರ ಪುರಸಭೆ ವ್ಯಾಪ್ತಿಯ ಸುಮಾರು ೩೨ ಸಾವಿರ ಜನಸಂಖ್ಯೆಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಪ್ರತಿಯೊಬ್ಬರಿಗೂ ತಲಾ ೧೩೫ ಲೀಟರ್‌ನಂತೆ ನೀರು ಪೂರೈಕೆ ಮಾಡಿದರೆ ದಿನಕ್ಕೆ ಸುಮಾರು ೪೦ ಲಕ್ಷ ಲೀಟರ್‌ಗಳಷ್ಟು ನೀರು ಬೇಕಾಗುತ್ತದೆ. ಸಾಮಾನ್ಯ ದಿನಗಳಲ್ಲೇ ಸುಮಾರು ೩೦ ಲಕ್ಷ ಲೀಟರ್‌ಗಳಷ್ಟು ಮಾತ್ರ ನೀರು ಪೂರೈಕೆ ಸಾಧ್ಯವಾಗುತ್ತಿತ್ತು. ಬೇಸಿಗೆಯ ತಾಪಕ್ಕೆ ಈಗ ಇದು ಕೂಡ ಸಾಧ್ಯವಾಗುತ್ತಿಲ್ಲ.

    ಮನೆಗಳಲ್ಲಿ ಸ್ವಂತ ಬಳಕೆಯ ಬೋರ್‌ವೆಲ್‌ಗಳನ್ನು ಹೊಂದಿರುವವರಿಗೆ ಸದ್ಯದ ಮಟ್ಟಿಗೆ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಕುಶಾಲನಗರ ಭಾಗದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪೂರೈಸುವ ನೀರನ್ನಷ್ಟೇ ಅವಲಂಬಿಸಿರುವವರಿಗೆ ದಿನನಿತ್ಯದ ಬಳಕೆಗೆ ನೀರಿನ ಕೊರತೆ ಕಾಣಿಸಿಕೊಂಡಿದೆ. ಗ್ರಾ.ಪಂ. ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲೂ ಇದಕ್ಕಿಂತ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಬಿಸಿಲು ಜಾಸ್ತಿ ಇರುವುದರಿಂದ ಅಂತರ್ಜಲದ ಮಟ್ಟವು ಕುಸಿಯುತ್ತಿದ್ದು, ಖಾಸಗಿ ಬೋರ್‌ವೆಲ್‌ಗಳೂ ನಿಧಾನಕ್ಕೆ ಬರಿದಾಗುತ್ತಿದೆ. ಹಾಗಾಗಿ ನೀರು ಪೂರೈಕೆಯ ಒತ್ತಡ ಕೊನೆಗೆ ಸ್ಥಳೀಯ ಆಡಳಿತದ ಮೇಲೆಯೇ ಬೀಳುತ್ತಿದೆ.

    ಕುಶಾಲನಗರ ತಾಲೂಕಿನಲ್ಲಿ ಕಾವೇರಿ ನದಿ ತೀರದ ಉದ್ದಕ್ಕೂ ವ್ಯಾಪಿಸಿರುವ ನಂಜರಾಯಪಟ್ಟಣ, ಗುಡ್ಡೆಹೊಸೂರು, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ಶಿರಂಗಾಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ ನೀರು ಪೂರೈಸಲು ಸ್ಥಳಿಯ ಆಡಳಿತ ಹರಸಾಹಸ ಪಡುತ್ತಿವೆ. ಕೂಡಿಗೆಯಿಂದ ನಂತರ ಹಾರಂಗಿಯ ನೀರು ಸಿಗುವುದರಿಂದ ಆ ಭಾಗದಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದರೆ ನಂಜರಾಯಪಟ್ಟಣ, ಗುಡ್ಡೆಹೊಸೂರು, ಕೂಡುಮಂಗಳೂರು ಭಾಗದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಸಮರ್ಪಕ ನೀರು ಪೂರೈಕೆಗಾಗಿ ಚುನಾವಣಾ ನೀತಿ ಸಂಹಿತೆ ಮಧ್ಯೆಯೂ ಪಂಚಾಯತಿ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

    ಕುಡಿಯುವ ನೀರಿನ ಕೊರತೆ ತೀವ್ರ ಪ್ರಮಾಣದಲ್ಲಿ ಕಾಡುತ್ತಿರುವ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಮಾದಾಪಟ್ಟಣ ಸೇರಿದಂತೆ ಹಲವು ಗ್ರಾಮಗಳಿಗೆ ಟಾಸ್ಕ್‌ಫೋರ್ಸ್ ವತಿಯಿಂದ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಉಳಿದೆಡೆ ಪಂಚಾಯಿತಿಗಳ ವತಿಯಿಂದ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ನೀರಿನ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಕೆಟ್ಟು ನಿಂತಿದ್ದ ಕೊಳವೆ ಬಾವಿಗಳನ್ನು ದುರಸ್ತಿಪಡಿಸಲು ಆದ್ಯತೆ ನೀಡಲಾಗಿದೆ. ಕೆಲವೆಡೆ ಬೋರ್‌ವೆಲ್‌ಗಳಿಗೆ ಹೆಚ್ಚುವರಿ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಹೆಚ್ಚು ನೀರು ಇರುವ ಕೈ ಪಂಪ್ ಅಧಾರಿತ ಬೋರ್‌ವೆಲ್‌ಗಳಿಗೆ ಮೋಟಾರ್‌ಗಳನ್ನು ಅಳವಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ನೀರಿನ ಲಭ್ಯತೆ ನೋಡಿಕೊಂಡು ಹೊಸ ಕೊಳವೆಬಾವಿಗಳನ್ನೂ ಕೊರೆಸುವ ಕೆಲಸವೂ ನಡೆದಿದೆ.

    ಕೊಳವೆ ಬಾವಿಗಳಲ್ಲಿ ನೀರು ಇರುವ ತನಕ ಮಾತ್ರ ಇವುಗಳ ಮೇಲೆ ಅವಲಂಬನೆ ಸಾಧ್ಯ. ಆದರೆ ಈಗ ಅಂತರ್ಜಲ ವೇಗವಾಗಿ ಕುಸಿಯುತ್ತಿದ್ದು, ಮಳೆ ಬಾರದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ. ತುರ್ತು ಕಾರ್ಯಗಳಿಗೆ ಚುನಾವಣಾ ನೀತಿ ಸಂಹಿತೆ ಅನ್ವಯಿಸುವುದಿಲ್ಲವಾದರೂ ಪ್ರತಿ ಕಾಮಗಾರಿ ನಡೆಸುವಾಗಲೂ ಪಂಚಾಯಿತಿ ಅಧಿಕಾರಿಗಳು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದ್ದು, ಸಾರ್ವಜನಿಕರಿಗೆ ನೀರಿನ ಸಮಸ್ಯೆಯ ಬಿಸಿ ಅಷ್ಟಾಗಿ ತಟ್ಟದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ.

    ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ. ೫೦ಕ್ಕೂ ಹೆಚ್ಚು ಪ್ರದೇಶಗಳಿಗೆ ಕಾವೇರಿ ನದಿಯಿಂದಲೇ ನೀರು ಪೂರೈಕೆ ಮಾಡಲಾಗುತ್ತಿತ್ತು. ನದಿಯಲ್ಲಿ ನೀರಿನ ಹರಿವು ಸ್ಥಗಿತ ಆಗಿರುವುದರಿಂದ ನಮ್ಮಲ್ಲಿ ನೀರಿನ ಸಮಸ್ಯೆ ಆಗಿದೆ. ಗುಂಡಿಗಳಲ್ಲಿ ನೀರು ನಿಂತಿದ್ದರೂ ಅವುಗಳಲ್ಲಿ ಕೊಳೆತ ಎಲೆ, ಮಾವಿನ ಹೂವುಗಳು ಇದ್ದು ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಬೋರ್‌ವೆಲ್‌ಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ನೀರಿನ ಬೇಡಿಕೆ ಪೂರೈಸಲು ಪ್ರಯತ್ನಿಸಲಾಗುತ್ತಿದೆ. ಹಾಳಾಗಿರುವ ಕೊಳವೆ ಬಾವಿ ಮೋಟಾರ್‌ಗಳನ್ನು ದುರಸ್ತಿಪಡಿಸಲಾಗುತ್ತಿದೆ.
    ರಾಜಶೇಖರ್, ಪಿಡಿಒ, ನಂಜರಾಯಪಟ್ಟ

    ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪಟ್ಟಣ ಮತ್ತು ಬಸವನಹಳ್ಳಿ ಗ್ರಾಮಕ್ಕೆ ಕಾವೇರಿ ನದಿಯೇ ಪ್ರಮುಖ ನೀರಿನ ಮೂಲ. ಆದರೆ ನದಿಯಲ್ಲಿ ನೀರಿಲ್ಲದ ಕಾರಣಕ್ಕೆ ಕುಡಿಯುವ ನೀರಿನ ಪೂರೈಕೆಗೆ ಸಮಸ್ಯೆ ಆಗಿದೆ. ಮಾದಾಪಟ್ಟಣಕ್ಕೆ ಟಾಸ್ಕ್‌ಫೋರ್ಸ್ ವತಿಯಿಂದ ಟ್ಯಾಂಕರ್ ನೀರು ಪೂರೈಕೆ ಆಗುತ್ತಿದೆ. ಬಸವನಹಳ್ಳಿಯಲ್ಲಿ ನಮ್ಮ ಪಂಚಾಯಿತಿಯಿಂದ ಟ್ಯಾಂಕರ್‌ನಲ್ಲಿ ನೀರು ಕೊಡಲಾಗುತ್ತಿದೆ. ಒಳ್ಳೆಯ ನೀರಿನ ವ್ಯವಸ್ಥೆ ಇರುವ ಕೈ ಪಂಪ್ ಹೊಂದಿರುವ ಬೋರ್‌ವೆಲ್‌ಗಳಿಗೆ ಮೋಟಾರ್ ಅಳವಡಿಸಲಾಗುತ್ತಿದೆ.
    ಸುಮೇಶ್, ಪಿಡಿಒ, ಗುಡ್ಡೆಹೊಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts