More

    ಮೊದಲ ಬಾರಿ ಒಂದಾದ ರಾಘಣ್ಣ-ಸುಧಾರಾಣಿ; ರಾಜ್ ಕುಟುಂಬದ ಐವರ ಜತೆ ನಟನೆ

    ಬೆಂಗಳೂರು: ಶಿವರಾಜ್​ಕುಮಾರ್ ಅವರ ಮೊದಲ ಸಿನಿಮಾ ‘ಆನಂದ್’ ಮೂಲಕ ಚಂದನವನಕ್ಕೆ ಬಂದವರು ನಟಿ ಸುಧಾರಾಣಿ. ಅದಾದ ಬಳಿಕ ಡಾ. ರಾಜಕುಮಾರ್, ಪುನೀತ್ ರಾಜಕುಮಾರ್, ವಿನಯ್ ರಾಜಕುಮಾರ್ ಜತೆಗೂ ಅವರು ತೆರೆಹಂಚಿಕೊಂಡಿದ್ದಾರೆ. ಆದರೆ ಒಬ್ಬರನ್ನು ಬಿಟ್ಟು. ಹೌದು, 35 ವರ್ಷದ ಸುದೀರ್ಘ ಸಿನಿಪಯಣದಲ್ಲಿ ರಾಘವೇಂದ್ರ ರಾಜಕುಮಾರ್ ಜತೆ ಸುಧಾರಾಣಿ ನಟಿಸಿಲ್ಲ. ಇದೀಗ ಆ ಕತ್ತಲಿಗೆ ‘ಬೆಳಕು’ ಬಿದ್ದಿದೆ! ಅಂದರೆ ‘ಬೆಳಕು’ ಚಿತ್ರದಲ್ಲಿ ರಾಘಣ್ಣನ ಪತ್ನಿಯಾಗಿ ಸುಧಾರಾಣಿ ನಟಿಸುತ್ತಿದ್ದು, ಈ ಮೂಲಕ ಒಂದೇ ಕುಟುಂಬದ ಐವರ ಜತೆ ನಟಿಸಿದಂತಾಗಿದೆ. ಇನ್ನು, ಸುಧಾರಾಣಿ ನಾಯಕಿಯಾಗಿ ಬಣ್ಣಹಚ್ಚಿ ಇನ್ನು ಕೆಲದಿನಗಳಲ್ಲಿ 35 ವರ್ಷಗಳಾಗಲಿವೆ. ಇದೊಂದು ಅದ್ಭುತ ಪಯಣ ಎನ್ನುತ್ತಾರೆ ಅವರು.

    ‘ನಾನು ಬೇರೆ ಭಾಷೆಯ ಚಿತ್ರಗಳಲ್ಲೂ ನಟಿಸಿದೆ. ಆದರೆ, ಇಲ್ಲಿ ಸಿಕ್ಕ ತೃಪ್ತಿ ಬೇರೆಲ್ಲೂ ಸಿಗಲಿಲ್ಲ. ಬಹಳ ಚಿಕ್ಕ ವಯಸ್ಸಿಗೇ ಅದ್ಭುತ ಪಾತ್ರಗಳು ಸಿಕ್ಕವು. ನನಗೆ ಯಾವುದೇ ಹಿನ್ನೆಲೆ ಇರಲಿಲ್ಲ. ಆದರೂ ಯಾವ ಧೈರ್ಯದ ಮೇಲೆ ಪಾರ್ವತಮ್ಮನವರು ನನಗೆ ಅವಕಾಶ ಕೊಟ್ಟರೋ, ಆ ನಂತರ ಬೇರೆ ನಿರ್ದೇಶಕರು ಹೇಗೆ ರಿಸ್ಕ್ ತೆಗೆದುಕೊಂಡು ನನ್ನಿಂದ ಕೆಲಸ ಮಾಡಿಸಿದರೋ ನನಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ’ ಎನ್ನುತ್ತಾರೆ ಸುಧಾರಾಣಿ. ಯಾವತ್ತೂ ಒಳ್ಳೆಯ ಅವಕಾಶಗಳ ಕೊರತೆ ಆಗಲೇ ಇಲ್ಲ ಎನ್ನುವ ಅವರು, ‘ನಾನು ಮದುವೆಯಾದ ಮೇಲೂ ನಾಯಕಿ ಪಾತ್ರಗಳಲ್ಲಿ ಕಾಣಿಸಿಕೊಂಡೆ. ನಾಯಕಿ ಅಂತಲೇ ಅಲ್ಲ, ‘ಜೀವನ ಚೈತ್ರ’ ಮತ್ತು ‘ದೇವತಾ ಮನುಷ್ಯ’ದಂತಹ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡೆ. ಅದಕ್ಕೆ ಸಿಕ್ಕ ಹೆಸರು ಮತ್ತು ಖ್ಯಾತಿ, ದೊಡ್ಡ ಪಾತ್ರ ಇರುವ ಚಿತ್ರಗಳಲ್ಲೂ ಸಿಗಲಿಲ್ಲ. ಇವೆಲ್ಲ ಒಂದು ಕಡೆಯಾದರೆ, ಅವೇ ಇನ್ನೊಂದು ಕಡೆ’ ಎಂಬುದು ಅವರ ಅಭಿಪ್ರಾಯ. ನೂರಾರು ಚಿತ್ರಗಳಲ್ಲಿ ನಟಿಸಿರುವ ಸುಧಾರಾಣಿ ಅವರು ಪಾತ್ರದ ವಿಷಯದಲ್ಲಿ ಈಗಲೂ ಚ್ಯೂಸಿಯಂತೆ. ‘ಅಂಥ ಪಾತ್ರ, ಇಂಥ ಪಾತ್ರ ಎಂದೇನಿಲ್ಲ. ಒಂದು ದೃಶ್ಯವಾದರೂ ಚೆನ್ನಾಗಿದೆ ಅನಿಸಬೇಕು. ನನ್ನ ಅವಶ್ಯಕತೆ ಇದೆ ಎಂದನಿಸಬೇಕು. ಹಾಗಾದರೆ ಒಪ್ಪಿಕೊಳ್ಳುತ್ತೇನೆ’ ಎಂಬುದು ಸುಧಾರಾಣಿ ಮಾತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts