More

    ರಾಜ್ಯ ಹೆದ್ದಾರಿಗೆ ಸ್ವಾಗತ ನೀಡುತ್ತಿವೆ ಗುಂಡಿಗಳು

    ಕಕ್ಕೇರಿ: ಖಾನಾಪುರ ತಾಲೂಕಿನ ಪೂರ್ವ ಭಾಗದ ಗಡಿಯಲ್ಲಿರುವ ತಾಳಗುಪ್ಪ-ಬೆಳಗಾವಿ ಹಾಗೂ ರಾಮನಗರ-ಧಾರವಾಡ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ತಗ್ಗು-ಗುಂಡಿಗಳದ್ದೇ ದರ್ಬಾರ್ ನಡೆದಿದ್ದು, ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ನಿತ್ಯ ಪರಿತಪಿಸುವಂತಾಗಿದೆ. ಕ್ರಮಕ್ಕೆ ಮುಂದಾಗಬೇಕಾದ ಅಧಿಕಾರಿಗಳು ನಮಗೂ ಸಮಸ್ಯೆಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವುದು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರದರ್ಶಿಸುತ್ತಿದೆ.

    ನಿತ್ಯ ಈ ಮಾರ್ಗದ ಮೂಲಕ ವಿವಿಧ ಜಿಲ್ಲಾ ಕೇಂದ್ರ ಸೇರಿ ನೆರೆಯ ಮುಂಬೈ, ಗೋವಾ ಮತ್ತಿತರ ರಾಜ್ಯಗಳಿಗೆ ಅನೇಕ ಜನರು ಸಂಚಾರ ಮಾಡುತ್ತಾರೆ. ಸಂಚಾರದ ವೇಳೆ ನಾವು ಅನುಭವಿಸುವ ಸ್ಥಿತಿ ದೇವರಿಗೆ ಪ್ರೀತಿಯಾಗಿರುತ್ತದೆ. ಈ ಭಾಗದಲ್ಲಿ ಸಂಚಾರ ಮಾಡಬೇಕಾದರೇ ಜೀವ ಕೈಯಲ್ಲಿ ಹಿಡಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂಬುದು ವಾಹನ ಸವಾರರ ಅಳಲಾಗಿದೆ.

    ತಪ್ಪದ ಅಪಾಯ: ರಸ್ತೆಯಲ್ಲಿ ನಿರ್ಮಾಣವಾಗಿರುವ ಭಾರಿ ಗಾತ್ರದ ಗುಂಡಿಗಳನ್ನು ತಪ್ಪಿಸಲು ಹೋದರು ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಈ ಹಿಂದೆ ಅನೇಕ ಸವಾರರು ಈ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿ ಗಾಯಗೊಂಡು, ಆಸ್ಪತ್ರೆಗೆ ಸೇರಿದ ಹಲವು ಉದಾಹರಣೆಗಳಿವೆ.

    ಫೀ ತುಂಬಿದರೂ ಇಲ್ಲ ಸೌಲಭ್ಯ

    ರಾಮನಗರ, ಧಾರವಾಡ ಸೇರುವ ರಾಜ್ಯ ಹೆದ್ದಾರಿ ಮಾರ್ಗ ಮಧ್ಯದಲ್ಲಿ ಟೋಲ್ ಸಂಗ್ರಹ ಕೇಂದ್ರವಿದೆ. ಸಂಚಾರದ ವೇಳೆ ಟೋಲ್ ರೂಪದಲ್ಲಿ ಹಣ ಸಂಗ್ರಹ ಮಾಡಲಾಗುತ್ತದೆ. ಆದರೆ, ನಮಗೆ ಸೂಕ್ತ ಸಂಚಾರಕ್ಕೆ ಯಾವುದೇ ವ್ಯವಸ್ಥೆಯಿಲ್ಲ. ರಸ್ತೆ ನಿರ್ವಹಣೆಗೆ ಸಂಬಂಧ ಪಟ್ಟವರು ಯಾವಾಗ ಮುಂದಾಗುವರು ಎಂಬುದು ಈ ಭಾಗದಲ್ಲಿ ಸಂಚರಿಸುವ ಸವಾರರ ಪ್ರಶ್ನೆಯಾಗಿದೆ.

    ನೂತನ ಸೇತುವೆಯೂ ಹಾಳು

    ಧಾರವಾಡ ಕ್ರಾಸ್ ಬಳಿ ಇರುವ ಸೇತುವೆ ಹಾಳಾಗಿದ್ದು ಕುಸಿದು ಬೀಳುವ ಹಂತ ತಲುಪಿದೆ. ಸಮಸ್ಯೆ ನಿವಾರಣೆ ಉದ್ದೇಶದಿಂದ ತಾಳಗುಪ್ಪ-ಬೆಳಗಾವಿ ಹೆದ್ದಾರಿ ನಿರ್ಮಾಣ ವೇಳೆ ನೂತನ ಸೇತುವೆ ನಿರ್ಮಾಣ ಮಾಡಲಾಗಿತ್ತು. ಗುಣಮಟ್ಟದ ಕಾಮಗಾರಿ ಕೊರತೆಯಿಂದಾಗಿ ಆ ಸೇತುವೆ ಸಹ ಹಾಳಾಗಿದೆ.

    ರಾಜ್ಯಹೆದ್ದಾರಿಯು ಗ್ರಾಮೀಣ ಭಾಗದ ರಸ್ತೆಗಳಿಗೆ ಮಾದರಿಯಾಗಿರಬೇಕು. ಆದರೆ, ಧಾರವಾಡ-ರಾಮನಗರ ರಾಜ್ಯ ಹೆದ್ದಾರಿ ವಿಚಾರದಲ್ಲಿ ಇದು ವಿರುದ್ಧವಾಗಿದೆ. ಇನ್ನಾದರೂ ಅಧಿಕಾರಿಗಳು ನಿರ್ಲಕ್ಷೃ ಮರೆತು ಕ್ರಮಕ್ಕೆ ಮುಂದಾಗಬೇಕು.
    | ಕೇಶವ ಮೂರ್ತಿ ಲಿಂಗನಮಠ ಗ್ರಾಮಸ್ಥ

    ಮಳೆ ಕಾರಣ ರಸ್ತೆ ಹಾಳಾಗಿದೆ. ಅಧಿಕಾರಿಗಳ ಗಮನಕ್ಕೆ ಮಾಹಿತಿ ತಲುಪಿಸಲಾಗುವುದು.
    | ಕಾವೇರಿ ಹಿಮಕರ ಪಿಡಿಒ, ಲಿಂಗನಮಠ ಗ್ರಾಪಂ

    | ಕಿಶೋರ ಮಿಠಾರಿ, ಕಕ್ಕೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts