More

    ರೈತರು, ಗೋವುಗಳಿಗೆ ರಾಜ್ಯ ಸರ್ಕಾರ ಮೋಸ: ಕೆಎಸ್‌ಇ ಆಕ್ರೋಶ

    ಶಿವಮೊಗ್ಗ: ರಾಜ್ಯ ಸರ್ಕಾರ ಗೋವು ಹಾಗೂ ರೈತರಿಗೆ ಮೋಸ ಮಾಡಿದೆ. ಹೀಗಾಗಿ ಈ ಸರ್ಕಾರಕ್ಕೆ ರೈತರು ಹಾಗೂ ಗೋವಿನ ಶಾಪ ತಟ್ಟಲಿದೆ. ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನವಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

    ಹೈನುಗಾರರಿಂದ ಹಾಲು ಖರೀದಿ ದರ ಕಡಿತಗೊಳಿಸಿರುವುದು ಹಾಗೂ ಪ್ರೋತ್ಸಾಹಧನ ಬಿಡುಗಡೆ ಮಾಡದೇ ಇರುವುದನ್ನು ಖಂಡಿಸಿ ಮಂಗಳವಾರ ಡಿಸಿ ಕಚೇರಿ ಎದುರು ಬಿಜೆಪಿ ರೈತ ಮೋರ್ಚಾದಿಂದ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರರಿಗೆ ಪ್ರೋತ್ಸಾಹ ಧನ ನೀಡುವುದಕ್ಕೂ ಹಣವಿಲ್ಲದೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ದೂರಿದರು.
    ಈ ಹಿಂದೆ 28 ಲಕ್ಷ ರೈತರು ಸುಮಾರು 85 ಲಕ್ಷ ಲೀಟರ್ ಹಾಲನ್ನು ಪ್ರತಿದಿನ ವಿವಿಧ ಹಾಲು ಒಕ್ಕೂಟಗಳಿಗೆ ಪೂರೈಕೆ ಮಾಡುತ್ತಿದ್ದರು. ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಕಡಿತಗೊಳಿಸಿದ ಬಳಿಕ ಹಾಲು ಪೂರೈಕೆ ಮಾಡುತ್ತಿರುವವರ ಸಂಖ್ಯೆ 10 ಲಕ್ಷಕ್ಕೆ ಇಳಿದಿದೆ. ರಾಜ್ಯದ ಜನರ ತೆರಿಗೆ ಹಣದಲ್ಲಿ ದೆಹಲಿಗೆ ಹೋಗುವ ಕಾಂಗ್ರೆಸ್‌ನವರಿಗೆ ರೈತರಿಗೆ ನೀಡಲು ದುಡ್ಡಿಲ್ಲ ಎಂದು ಹರಿಹಾಯ್ದರು.
    ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕರ್ನಾಟಕದಲ್ಲಿ ರೈತ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ. ಹಾಲಿನ ದರವನ್ನು ಹೆಚ್ಚಳ ಮಾಡಿದ್ದ ಸರ್ಕಾರ, ಸಂಗ್ರಹವಾಗುವ ಹೆಚ್ಚುವರಿ ಹಣವನ್ನು ರೈತರಿಗೆ ನೀಡುವುದಾಗಿ ಹೇಳಿತ್ತು ಎಂದು ಹೇಳಿದರು.
    ರಾಜ್ಯದ 22 ತಾಲೂಕುಗಳಲ್ಲಿ ಪ್ರವಾಸ ಮಾಡಿ ನಮ್ಮ ಮುಖಂಡರು ಬೆಳೆಹಾನಿಯನ್ನು ಪರಿಶೀಲನೆ ನಡೆಸಿದರು. ಬರದಿಂದ ತತ್ತರಿಸಿದ್ದ ರೈತರಿಗೆ ಧೈರ್ಯ ತುಂಬಿದರು. ರಾಜ್ಯ ಸರ್ಕಾರ ಮಾತ್ರ ಪರಿಹಾರ ನೀಡಿಲ್ಲ. ರೈತರಿಗೆ ನಾಲ್ಕಾಣೆ ನೀಡುವ ಯೋಗ್ಯತೆ ಇಲ್ಲದ ರಾಜ್ಯ ಸರ್ಕಾರವು ಕೇಂದ್ರದ ವಿರುದ್ಧ ವೃಥಾ ಆರೋಪ ಮಾಡುತ್ತಿದೆ ಎಂದರು.
    ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಸಿದ್ದಲಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಪ್ರಮುಖರಾದ ಎಸ್.ದತ್ತಾತ್ರಿ, ಮಾಲತೇಶ್, ಗನ್ನಿ ಶಂಕರ್, ಜಗದೀಶ್, ಅಣ್ಣಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts