More

    ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ನಿಧನ

    ಶಿವಮೊಗ್ಗ: ಮಾಜಿ ಶಾಸಕ, ಹಿರಿಯ ಸಹಕಾರಿ, ಶಿಕ್ಷಣ ತಜ್ಞ, ಮಲೆನಾಡ ರಾಜಕೀಯದ ಭೀಷ್ಮ ಎಂದೇ ಗುರುತಿಸಲ್ಪಟ್ಟಿದ್ದ ಎಲ್.ಟಿ.ತಿಮ್ಮಪ್ಪ ಹೆಗಡೆ(94) ವಯೋಸಹಜ ಅನಾರೋಗ್ಯದಿಂದ ಸಾಗರ ಸಮೀಪದ ಎಂಎಲ್ ಹಳ್ಳಿಯ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.
    ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಸ್ಥಾಪನೆ ಸೇರಿದಂತೆ ಅಂತರರಾಜ್ಯ ಸಂಸ್ಥೆ ಕ್ಯಾಂಪ್ಕೋ, ಸಾಗರದ ಆಪ್ಸ್‌ಕೋಸ್‌ನಂತಹ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ಅಡಕೆ ಬೆಳೆಗಾರರ ಬದುಕು ಹಸನಾಗಿಸುವಲ್ಲಿ ಎಲ್.ಟಿ.ತಿಮ್ಮಪ್ಪ ಹೆಗಡೆ ಪ್ರಮುಖ ಪಾತ್ರ ವಹಿಸಿದ್ದರು.
    ಸಾಗರದ ಆಪ್ಸ್‌ಕೋಸ್, ತೋಟಗಾರ್ಸ್‌, ಅಡಕೆ ಬೆಳೆಗಾರರ ಸಂಘಗಳ ಸಂಸ್ಥಾಪಕ ಅಧ್ಯಕ್ಷರಾಗಿ, ಕ್ಯಾಂಪ್ಕೂ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಹಟ್ಟಿಯಂಗಡಿ ಸಿದ್ಧಿವಿನಾಯಕ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಹಾಗೂ ಸಿದ್ಧಿ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿ ಹಟ್ಟಿಯಂಗಡಿ ಗಣಪತಿ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಪಾತ್ರ ವಹಿಸಿದ್ದರು.
    ಹೊಸನಗರದ ರಾಮಚಂದ್ರಾಪುರ ಮಠದ ಚಟುವಟಿಕೆಯಲ್ಲಿ ಮುಂಚೂಣಿಯ ನಾಯಕತ್ವ ವಹಿಸಿದ್ದರು. ಸಾಗರದ ಶಿಕ್ಷಣ ಸಂಸ್ಥೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್‌ಬಿ ಕಾಲೇಜು, ಪ್ರಗತಿ ಸಂಯುಕ್ತ ಶಾಲೆ ಮೊದಲಾದವುಗಳ ಸ್ಥಾಪನೆಯಲ್ಲಿ ಭಾಗವಹಿಸಿ ಸಂಸ್ಥೆಯ ಉಪಾಧ್ಯಕ್ಷ ಹುದ್ದೆಯನ್ನು ಬಹುಕಾಲ ನಿರ್ವಹಿಸಿದ್ದರು. ಕೇಂದ್ರ ಸಾಂಬಾರು ಮಂಡಳಿ ನಿರ್ದೇಶಕರಾಗಿ, ಭೂ ನ್ಯಾಯ ಮಂಡಳಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು.
    ರಾಜಕೀಯದಲ್ಲಿ ಛಾಪು
    ಸಾಗರ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ತಿಮ್ಮಪ್ಪ ಹೆಗಡೆ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಚುನಾವಣೆ ಎದುರಿಸಿದ್ದು ಹೆಗಡೆಯವರು. ಕಾಗೋಡು ತಿಮ್ಮಪ್ಪ ಸೋಷಿಯಲಿಸ್ಟ್ ಪಾರ್ಟಿಯಲ್ಲಿ ರಾಜಕೀಯ ಆರಂಭಿಸಿದ ವರ್ಷಗಳಲ್ಲಿ ಎಲ್.ಟಿ.ತಿಮ್ಮಪ್ಪ ಹೆಗಡೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 1978 ಹಾಗೂ 83ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು.
    ಎರಡು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದ ಹೆಗಡೆ, ಒಂದು ದಶಕ ಚುನಾವಣಾ ರಾಜಕೀಯದಿಂದ ದೂರವುಳಿದಿದ್ದರು. 1999ರಲ್ಲಿ ತಮ್ಮ ಕೊನೆಯ ಚುನಾವಣೆಯನ್ನು ಬಿಜೆಪಿ ಅಭ್ಯರ್ಥಿಯಾಗಿ ಎದುರಿಸಿ ಕಾಗೋಡು ತಿಮ್ಮಪ್ಪ ವಿರುದ್ಧ ಸೋಲು ಕಂಡರು. ಸಾಗರದಲ್ಲಿ ಬಿಜೆಪಿಯ ಬೆಳವಣಿಗೆಗೆ ಒಂದರ್ಥದಲ್ಲಿ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರು ಬುನಾದಿ ಹಾಕಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts