More

    ಶೆಟ್ಟರ್-ಇದೆಂಥ ದುರವಸ್ಥೆ? ಗಲೀಜು, ದುರ್ನಾತ..

    ಹುಬ್ಬಳ್ಳಿ: ಹೇಳಿಕೊಳ್ಳಲು ಇದು ಗಣ್ಯಾತಿಗಣ್ಯರು ವಾಸಿಸುವ ಬಡಾವಣೆ. ಇಲ್ಲಿ ಯೋಜನಾಬದ್ಧವಾಗಿಯೇ ಮನೆಗಳನ್ನು ನಿರ್ವಿುಸಲಾಗಿದೆ. ಐಷಾರಾಮಿ ಮನೆಗಳು, ವಿಲ್ಲಾ, ಪೆಂಟ್​ಹೌಸ್​ಗಳನ್ನು ಹೊತ್ತುಕೊಂಡಿರುವ ಅಪಾರ್ಟ್​ವೆುಂಟ್​ಗಳು ಗಮನ ಸೆಳೆಯುತ್ತವೆ. ಹೆಸರು-ನವೀನ ಪಾರ್ಕ್. ದೀಪದ ಬುಡದಲ್ಲಿ ಕತ್ತಲು ಎಂಬಂತೆ ಮೂಲಸೌಕರ್ಯಗಳದ್ದೇ ಸಮಸ್ಯೆ. ಹೆಚ್ಚು ತೆರಿಗೆದಾರರು ವಾಸಿಸುವ ಈ ಬಡಾವಣೆಯಲ್ಲಿನ ಮೂಲಸೌಕರ್ಯ ಸ್ಲಮ್ಂತ (ಕೊಳಗೇರಿ) ಕನಿಷ್ಠವಾಗಿದೆ.

    ಈ ಬಡಾವಣೆ ರಾಜ್ಯದ ಮಾಜಿ ಮುಖ್ಯಮಂತ್ರಿ, ಹಾಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ ಕ್ಷೇತ್ರದಲ್ಲಿದೆ. ಅವರ ನಿವಾಸದಿಂದ ಒಂದೆರಡು ಕಿ.ಮೀ. ದೂರದಲ್ಲಿದೆ. ಇಲ್ಲಿಯ ದುರ್ನಾತ, ಚರಂಡಿ ಸಮಸ್ಯೆ ಬಗ್ಗೆ ನೂರಾರು ಬಾರಿ ಜನರು ಅವರಲ್ಲಿ ಗೋಳಿಟ್ಟಿದ್ದಾರೆ. ಶೆಟ್ಟರ್ ಕೂಡ ನಾಲ್ಕೈದು ಬಾರಿ ಬಂದು ಹೋಗಿದ್ದಾರೆ. ಯಥಾಪ್ರಕಾರ ‘ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ, ಮಾಸ್ಟರ್ ಪ್ಲ್ಯಾನ್ ಮಾಡುತ್ತೇವೆ’ ಎಂದು ಹೇಳಿ ಹೋದ ಶೆಟ್ಟರ್​ರಿಂದ ಇನ್ನೂ ಒಂದು ಸಮಸ್ಯೆ ಬಗೆಹರಿಸಲು ಆಗಿಲ್ಲ. ಈಗ ‘ಶೆಟ್ಟರ್ ಇದೆಂಥಾ ದುರವಸ್ಥೆ, ನಮ್ಮ ಬಡಾವಣೆ ನೋಡಿ’ ಎಂಬ ಅಭಿಯಾನವನ್ನು ಜನ ಆರಂಭಿಸಿದ್ದಾರೆ.

    ಹು-ಧಾ ಅವಳಿ ನಗರದಲ್ಲಿ ಇತ್ತೀಚೆಗೆ ಎಷ್ಟೋ ಸ್ಲಮ್ಳು ಸಾಕಷ್ಟು ಸುಧಾರಣೆ ಕಂಡಿವೆ. ಕಾಂಕ್ರೀಟ್ ರಸ್ತೆ, ಬೀದಿ ದೀಪ, ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಕಂಡಿವೆ. ಆದರೆ, ಕೇಶ್ವಾಪುರದ ನವೀನ ಪಾರ್ಕ್ ಬಡಾವಣೆ ದುರ್ನಾತ, ಗಲೀಜು ಹೊದ್ದುಕೊಂಡು ಮಲಗಿದೆ. ಇಲ್ಲಿಯ ಜನರ ಪಾಲಿಗೆ ಮಹಾನಗರ ಪಾಲಿಕೆ ಸತ್ತು ಹೋಗಿದೆ.

    ಬಹಳಷ್ಟು ಕಡೆ ಖಾಲಿ ನಿವೇಶನಗಳಲ್ಲಿ ಒಳಚರಂಡಿ ನೀರು ನಿಂತು ಚಿಕ್ಕ ಚಿಕ್ಕ ಕೆರೆಯಂತೆ ಕಾಣುತ್ತದೆ. ಬಹುಮಹಡಿ ಕಟ್ಟಡದ ಮೇಲೆ ನಿಂತು ಕೆಳಗೆ ನೋಡಿದರೆ ನವೀನ ಪಾರ್ಕ್ ಚರಂಡಿ ನೀರಿನಲ್ಲಿ ನಡುಗಡ್ಡೆಯಂತೆ ಗೋಚರಿಸುತ್ತದೆ!

    ಮಾಜಿ ಎಂಪಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು 8 ವರ್ಷಗಳ ಹಿಂದೆಯೇ ಸಚಿವ ಜಗದೀಶ ಶೆಟ್ಟರ್ ಅವರನ್ನು ಬಡಾವಣೆಗೆ ಕರೆತಂದು ವಿವರಿಸಿದ್ದರು. ‘ಮೂರು ತಿಂಗಳಲ್ಲಿ ಎಲ್ಲ ಪರಿಹರಿಸುತ್ತೇನೆ’ ಎಂದು ಶೆಟ್ಟರ್ ಹೇಳಿ ಹೋಗಿದ್ದರು. ಈವರೆಗೂ ಅದನ್ನೇ ಹೇಳುತ್ತಿದ್ದಾರೆ! ಇದಾದ ಮೇಲೆ ಹಲವು ಬಾರಿ ಸಂಕೇಶ್ವರರು ಹಾಗೂ ನವೀನ ಪಾರ್ಕ್ ನಿವಾಸಿಗಳ ಸಂಘದವರು ಶೆಟ್ಟರ್ ಅವರನ್ನು ಭೇಟಿ ಮಾಡಿ ಈ ಅವ್ಯವಸ್ಥೆಯಿಂದ ಪಾರು ಮಾಡಿ ಎಂದು ಆಗ್ರಹಿಸಿದ್ದಾರೆ. ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮುಂದೆ ನವೀನ ಪಾರ್ಕ್ ಬಡಾವಣೆಯ ವಿಷಯವನ್ನು ಶೆಟ್ಟರ್ ಎದುರು ಪ್ರಸ್ತಾಪಿಸುವುದಿಲ್ಲ ಎಂದು ಡಾ. ಸಂಕೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಾಲಿಕೆಯದ್ದು ತಾತ್ಕಾಲಿಕ ಕೆಲಸ: ಪಾಲಿಕೆಯದ್ದು ಕೇವಲ ತಾತ್ಕಾಲಿಕ ಕೆಲಸ. ಒಳಚರಂಡಿ ಬ್ಲಾಕ್ ಆದಾಗ ಸಕ್ಕಿಂಗ್ ಆಂಡ್ ಜೆಟ್ಟಿಂಗ್ ಯಂತ್ರ ಹಚ್ಚುವುದು, ಪಂಪ್ ಹಚ್ಚಿ ಪಕ್ಕದ ನಿವೇಶನಕ್ಕೆ ಕೊಳಚೆ ನೀರು ಎತ್ತಿ ಹಾಕುವುದನ್ನು ಮಾಡುತ್ತಾರೆ. ಅಲ್ಲಿ ಕ್ಲೀಯರ್ ಮಾಡಬೇಕು, ಇಲ್ಲಿ ಕ್ಲೀಯರ್ ಮಾಡಬೇಕು ಎಂದು ಹೇಳಿ ಹೋಗುತ್ತಾರೆ. ಶಾಶ್ವತವಾದ ಕೆಲಸ ಮಾಡಿಯೇ ಇಲ್ಲ. ಪಾಲಿಕೆಯ ಕಾಮಗಾರಿಯು ಅಧಿಕಾರಿಗಳಿಗೆ- ರಾಜಕಾರಣಿಗಳಿಗೆ ನಿರಂತರ ಆದಾಯ ಮೂಲವಾಗಿದೆ. ತಾತ್ಕಾಲಿಕ ಕೆಲಸ ಮಾಡಿಸುತ್ತಿದ್ದರೆ ಕಿಸೆ ‘ಭರ್ತಿ’ ಆಗುತ್ತದೆಯಲ್ಲವೆ? ‘ನವೀನ ಪಾರ್ಕ್ ಮುಖ್ಯ ರಸ್ತೆಯಲ್ಲಿ 19.8 ಲಕ್ಷ ರೂ. ವೆಚ್ಚದಲ್ಲಿ 700 ಮೀಟರ್​ನಷ್ಟು ಒಳಚರಂಡಿ ಕೊಳವೆ ಮಾರ್ಗ ಬದಲಾಯಿಸಲಾಗುತ್ತಿದೆ. ಡಿಸೆಂಬರ್​ನಲ್ಲಿ ಈ ಕಾಮಗಾರಿ ಮುಗಿಯಲಿದೆ. ಆನಂತರ ಈ ಸಮಸ್ಯೆ ಇರುವುದಿಲ್ಲ’ ಎಂದು ವಲಯ ಕಚೇರಿ ಸಹಾಯಕ ಆಯುಕ್ತ ವಿಠ್ಠಲ ತುಬಾಕೆ ವಿಜಯವಾಣಿಗೆ ಪ್ರತಿಕ್ರಿಯಿಸಿದರು. ಆದರೆ, ಕಾಮಗಾರಿ ನೋಡಿ ಜನರು ಹೌಹಾರಿದ್ದಾರೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಡ್ರೖೆನೇಜ್ ಲೀಕೇಜ್ ದುರಸ್ತಿಗೆ ಬರಲಿದೆ ಎಂದು ಸ್ಥಳೀಯರೇ ಅಸಮಾಧಾನದಿಂದ ದೂರುತ್ತಿದ್ದಾರೆ. ಸ್ವಚ್ಛ ಭಾರತ, ಅಮೃತ ಯೋಜನೆಯ ಅನುದಾನ ಬಳಸಿಕೊಂಡು ರಾಜ್ಯದ ಅನೇಕ ಶಾಸಕರು ಶಾಶ್ವತ ಕಾಮಗಾರಿ ಕೈಗೊಂಡು ಸಮಸ್ಯೆ ಬಗೆಹರಿಸಿದ್ದಾರೆ. ಆದರೆ, ಅಂಥ ಇಚ್ಛಾಶಕ್ತಿಯನ್ನು ಶೆಟ್ಟರ್ ಹಾಗೂ ಮಹಾನಗರ ಪಾಲಿಕೆ ಮಾತ್ರ ತೋರಿಸುತ್ತಿಲ್ಲ.

    ಅಪಾರ್ಟ್​ವೆುಂಟ್ ನಿವಾಸಿಗಳ ಗೋಳು: ಒಳಚರಂಡಿ ನೀರು ಖಾಲಿ ಜಾಗದಲ್ಲಷ್ಟೇ ಹರಡಿಕೊಂಡಿಲ್ಲ. ಹಲವು ಅಪಾರ್ಟ್​ವೆುಂಟ್​ಗಳ ಬೇಸ್​ವೆುಂಟ್​ನಲ್ಲೂ ಹರಿಯುತ್ತಿರುತ್ತದೆ. ಪಂಪ್ ಹಚ್ಚಿ ಹೊರ ಹಾಕುವುದು ಅಪಾರ್ಟ್​ವೆುಂಟ್ ನಿವಾಸಿಗಳ ಕೆಲಸವಾಗಿದೆ. ಸಿಲ್ವರ್ ಕ್ಯಾಸಲ್ ಅಪಾರ್ಟ್​ವೆುಂಟ್ ನೆಲಮಹಡಿಯಲ್ಲಿ ಶನಿವಾರವೂ ಕೊಳಚೆ ನೀರು ನಿರಂತರವಾಗಿ ಹರಿಯುತ್ತಿತ್ತು. ಇಲ್ಲಿ ಕಳೆದ 1 ವರ್ಷದಿಂದ ಈ ಸಮಸ್ಯೆ ವಿಪರೀತವಾಗಿದೆಯಂತೆ.

    ಶೆಟ್ಟರ್ ನಿಮ್ಮ ಮಾಸ್ಟರ್ ಪ್ಲ್ಯಾನ್ ಎಲ್ಲಿ?: ಸತತ 6 ಬಾರಿ ಶಾಸಕರಾಗಿ ಚುನಾಯಿತರಾಗಿರುವ ಜಗದೀಶ ಶೆಟ್ಟರ್ ಅವರು 4-5 ಬಾರಿ ನವೀನ ಪಾರ್ಕ್ ಬಡಾವಣೆಗೆ ಭೇಟಿ ನೀಡಿದ್ದಾರೆ. ಹಾಗೆ ಬಂದಾಗಲೊಮ್ಮೆ ಮಾಸ್ಟರ್ ಪ್ಲ್ಯಾನ್ ಮಾಡುವುದಾಗಿಯೂ ಹೇಳಿದ್ದರು. ಆದರೆ, ಇದುವರೆಗೆ ಏನೂ ಆಗಿಲ್ಲ. ಶೆಟ್ಟರ್ ಅವರೇ ನಿಮ್ಮೆ ಮಾಸ್ಟರ್ ಪ್ಲ್ಯಾನ್ ಎಲ್ಲಿ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಶೆಟ್ಟರ್ ಬರೀ ಮಾತನಾಡುತ್ತಾರೆ, ಕೆಲಸ ಮಾಡುವುದಿಲ್ಲ ಎಂದು ಇಡೀ ಹುಬ್ಬಳ್ಳಿ ಜನರೇ ರೊಚ್ಚಿಗೆದ್ದಿದ್ದಾರೆ.

    ಕಳೆದ 3 ತಿಂಗಳಿಂದ ಒಳಚರಂಡಿ ಸಮಸ್ಯೆ ವಿಪರೀತವಾಗಿದೆ. ದುರ್ನಾತ, ಸೊಳ್ಳೆಗಳ ಕಾಟದಿಂದ ಮನೆಯ ಕಿಟಕಿ, ಬಾಗಿಲು ತೆರೆಯು ವ ಹಾಗಿಲ್ಲ. ಶುದ್ಧ ಗಾಳಿ, ಬೆಳಕು ಇಲ್ಲದೇ ಕತ್ತಲಲ್ಲಿ ದಿನ ಕಳೆಯುವ ಹಾಗಾಗಿದೆ. ಬಡಾವಣೆಯ ರಸ್ತೆ, ಒಳಚರಂಡಿ, ಗಟಾರ ಇತ್ಯಾದಿ ಸಮಸ್ಯೆಗಳ ಕುರಿತು ಪಾಲಿಕೆಗೆ 8-10 ಬಾರಿ ದೂರಿಕೊಂಡಿದ್ದೇವೆ. ಪಾಲಿಕೆಯಲ್ಲಿ ಯಾರೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ನಮ್ಮ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸಿಲ್ಲ.

    |ಸಂತನ ಮೇರಿ, ಸುಪ್ರಿಯಾ ಬಾದರಿಚಾ, ರಾಜು ದಲಭಂಜನ, ಡೆರೆಕ್ ಬ್ರಿಗಾಂಜಾ, ನವೀನ ಪಾರ್ಕ್ ನಿವಾಸಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts