More

    ಚುನಾವಣಾ ಬಹಿಷ್ಕಾರಕ್ಕೆ ಮಾಚಿಹಳ್ಳಿ ತಾಂಡಾ ತೀರ್ಮಾನ

    ಹರಪನಹಳ್ಳಿ: ಎಸ್ಸಿ ಕೆಟಗರಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿರುವುದನ್ನು ವಿರೋಧಿಸಿ ತಾಲೂಕಿನ ಮಾಚಿಹಳ್ಳಿ ತಾಂಡಾದ ಬಂಜಾರ ಸಮುದಾಯದವರು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

    ತಾಲೂಕಿನ ಮಾಚಿಹಳ್ಳಿ ತಾಂಡದಲ್ಲಿ ಶುಕ್ರವಾರ ಗ್ರಾಮಸ್ಥರು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಎಂದು ಬ್ಯಾನರ್ ಬರೆಸಿ ಗ್ರಾಮದ ಹೊರಗಡೆ ಅಳವಡಿಸಿದ್ದಾರೆ.

    ನಮ್ಮ ತಾಂಡಕ್ಕೆ ಯಾವುದೇ ರಾಜಕೀಯ ಮುಖಂಡರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ನೊಂದ ಸಮಾಜದವರಿಗೆ ನ್ಯಾಯ ಸಿಗುವವರೆಗೂ ಯಾವುದೇ ಪಕ್ಷದ ಕಾರ್ಯಕರ್ತರು ಜನರ ಮನೆಗೆ ತೆರಳಿ ಮನವೊಲಿಸಿ ಮತ ಕೇಳುವ ಅರ್ಹತೆ ಇರುವುದಿಲ್ಲ ಎಂದು ಆ ಫ್ಲೇಕ್ಸ್ ನಲ್ಲಿ ಬರೆಯಲಾಗಿದೆ. ಆಡಳಿತಾರೂಢ ಸರ್ಕಾರ ಬೋವಿ, ಲಂಬಾಣಿ, ಕೊರಚ, ಕೊರಮ ಸೇರಿ 99 ಜಾತಿಗಳಿಗೆ ದ್ರೋಹ ಎಸಗಿದ್ದು, ಈ ಒಳಮೀಸಲಾತಿ ನಮಗೆ ಮರಣ ಶಾಸನ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಗ್ರಾಮದ ಪ್ರಮುಖ ಆರ್.ಕುಬೇಂದ್ರನಾಯ್ಕ ಮಾತನಾಡಿ, ನಮಗೆ ಅನ್ಯಾಯ ಮಾಡಿದ್ದಾರೆ. ಇನ್ನೊಬ್ಬರ ಹಕ್ಕನ್ನು ಕೇಳಲ್ಲ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ ಎಂದ ಅವರು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದರು.

    ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಉಮೇಶ ಜಾಧವ, ಶಾಸಕ ಪಿ.ರಾಜೀವ, ಸಚಿವ ಪ್ರಭು ಚೌವ್ಹಾಣ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
    ಪ್ರಮುಖರಾದ ಮೇಟಿ ಗೌಡ್ರ ಸೂರ್ಯನಾಯ್ಕ, ಲಾಲ್ಯಾನಾಯ್ಕ, ಎ.ಸೂರ್ಯನಾಯ್ಕ, ನಿರಂಜನ ನಾಯ್ಕ, ಗೌರಿಬಾಯಿ, ಯಂಕನಾಯ್ಕ, ಲಾಲಿಬಾಯಿ, ರಮಣಿ ಬಾಯಿ, ಸುನಿಲ್ ಹರೀಶನಾಯ್ಕ, ಆರ್.ಕುಬೇಂದ್ರನಾಯ್ಕ, ಪುಟ್ಟನಾಯ್ಕ ಇತರರು ಇದ್ದರು.

    ನಮ್ಮ ಸಮಾಜದ ಸಚಿವರು, ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೋರಾಟಕ್ಕೆ ಧುಮುಕಬೇಕು. ಒಳ ಮೀಸಲಾತಿ ಶಿಫಾರಸು ಹಿಂಪಡೆಯದಿದ್ದರೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ.
    ಹರೀಶನಾಯ್ಕ, ಗ್ರಾಮದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts