More

    ವೆಬ್​ಸರಣಿಗಳೆಂಬ ಅಂಕುಶವಿಲ್ಲದ ಪಾತಾಳಲೋಕ

    ಆತ ಊಟದ ಡಬ್ಬಿ ತೆರೆದಾಗ ಮಾಂಸದ ವಾಸನೆಗೆ ಅದೇ ಬೋಗಿಯಲ್ಲಿದ್ದ ಮಹಿಳೆ ವಾಂತಿ ಮಾಡಿಕೊಳ್ಳುತ್ತಾಳೆ. ಆತ ಕೊಡುವ ನೀರನ್ನೂ ಆಕೆ ಮುಟ್ಟುವುದಿಲ್ಲ.

     ಪ್ರತೀ ಬಾರಿ ದಲಿತರ ಕೇರಿಗೆ ಹೋಗಿಬಂದ ಬಳಿಕ ಬ್ರಾಹ್ಮಣ ರಾಜಕಾರಣಿ ಗಂಗಾಜಲದಿಂದ ಶುದ್ಧಿಮಾಡಿಕೊಳ್ಳುತ್ತಾನೆ.

     ಮೇಲ್ಜಾತಿಯ ಸಿಖ್ಖರು ಕೆಳಜಾತಿಯ ಸಿಖ್ಖರನ್ನು ಶೋಷಿಸುತ್ತಾರೆ. ಪ್ರತಿಭಟಿಸಿ ಸೆಡ್ಡು ಹೊಡೆಯುವ ಯುವಕನ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುತ್ತಾರೆ.

     ದೇವಸ್ಥಾನದ ಮುಂಭಾಗ ಕುಳಿತು ಬ್ರಾಹ್ಮಣ ಮಾಂಸ ತಿನ್ನುತ್ತಾನೆ. ಪೂಜಾರಿಯೇ ಅದನ್ನು ಸಿದ್ಧಪಡಿಸುತ್ತಾನೆ.

     ಜೈಲಿನಲ್ಲಿ ತೃತೀಯಲಿಂಗಿಯನ್ನು ಭೋಗಿಸಲು ಇತರ ಕೈದಿಗಳು ಹಸಿದ ಹೆಬ್ಬುಲಿಗಳಂತೆ ಕಾಯುತ್ತಿರುತ್ತಾರೆ. ಆ ಕೈದಿಗಳ ಹಿಂಭಾಗದ ಗೋಡೆಯ ಮೇಲೆ ಶಿವನ ಚಿತ್ರ ರಾರಾಜಿಸುತ್ತಿರುತ್ತದೆ.

     ‘ರಾಮ ಲಲ್ಲ ನಾವು ಬರುವೆವು, ಮಂದಿರವಲ್ಲೇ ಕಟ್ಟುವೆವು’ ಎಂದು ಘೊಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗುವ ಜನ ವಿನಾಕಾರಣ ಅಮಾಯಕನನ್ನು ಹತ್ಯೆ ಮಾಡುತ್ತಾರೆ.

     ದೆಹಲಿ ಪೊಲೀಸ್ ಇಲಾಖೆಯಲ್ಲಿ ಇರುವವರೆಲ್ಲರೂ ಭ್ರಷ್ಟರು, ದುಷ್ಟರು, ನಿಷ್ಪ್ರಯೋಜಕರು. ಅವರ ಬಾಯಲ್ಲಿ ಕೊಳಕು ಶಬ್ದಗಳನ್ನು ಬಿಟ್ಟರೆ ಬೇರೆ ಮಾತೇ ಹೊರಡುವುದಿಲ್ಲ. ಆದರೆ ಒಬ್ಬ ಕಾನ್ಸ್ ಟೇಬಲ್ ಮಾತ್ರ ಸಂಭಾವಿತ, ಪ್ರಾಮಾಣಿಕ, ಆತ ಯಾರನ್ನೂ ನಿಂದಿಸುವುದಿಲ್ಲ, ಯಾರ ಮೇಲೂ ರೇಗಾಡುವುದಿಲ್ಲ. ಸಿಟ್ಟೇ ಬರುವುದಿಲ್ಲ. ಸಿಗರೇಟ್ ಸೇದುವುದಕ್ಕೂ ಗೊತ್ತಿಲ್ಲ. ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಆಗಲು ಸಜ್ಜಾಗಿರುವ ಆತನ ಹೆಸರು ಅನ್ವರ್.

    ಇದನ್ನೂ ಓದಿ  ಜೂ. 1ರಿಂದ ತೆರೆಯಲಿವೆ ದೇವಸ್ಥಾನಗಳು; ಮಸೀದಿ, ಚರ್ಚ್ ಸದ್ಯಕ್ಕಿಲ್ಲ

    ವೆಬ್​ಸರಣಿಗಳೆಂಬ ಅಂಕುಶವಿಲ್ಲದ ಪಾತಾಳಲೋಕಇವೆಲ್ಲವೂ ಜನರಿಗೆ ಹೇಳಹೊರಟಿರುವುದು ಏನನ್ನು? ಹಿಂದುಗಳು ಅಸಹಿಷ್ಣುಗಳು, ಬೇರೆಯವರ ಆಹಾರ ಪದ್ಧತಿಯನ್ನೂ ಗೌರವಿಸುವುದಿಲ್ಲ.. ದಲಿತರ ಕೇರಿಗೆ ಹೋಗುವುದು, ಸಹಭೋಜನ ಇವೆಲ್ಲವೂ ಮೇಲ್ವರ್ಗದವರ ಗಿಮಿಕ್, ಪ್ರಚಾರತಂತ್ರ… ಮೇಲ್ಜಾತಿಯವರು ಯಾವಾಗಲೂ ಇತರರ ಶೋಷಣೆ ಮಾಡುತ್ತಾರೆ, ಅವರಿಗೆ ದೇಶದ ಕಾನೂನು, ಕಟ್ಟಳೆಗಳ ಮೇಲೆ ಗೌರವವಿಲ್ಲ… ಕಳ್ಳರು, ಸುಳ್ಳರು, ದರೋಡೆಕೋರರು, ಕಾಮುಕರು, ಅತ್ಯಾಚಾರಿಗಳು ಹಿಂದುಗಳೇ ಆಗಿರುತ್ತಾರೆ… ರಾಮ ಮಂದಿರ ಕಟ್ಟುವ ನೆಪದಲ್ಲಿ ಧರ್ಮದ್ವೇಷ, ಅಸಹಿಷ್ಣುತೆ ಹೆಚ್ಚಾಗುತ್ತಿದೆ… ಸರ್ಕಾರಿ ಸೇವೆಯಲ್ಲಿರುವ ಅಲ್ಪಸಂಖ್ಯಾತರು ಮಾತ್ರವೇ ದಕ್ಷರು, ಪ್ರಾಮಾಣಿಕರು, ದೇಶಭಕ್ತರು, ಬುದ್ಧಿವಂತರು… ಇತ್ತೀಚೆಗೆ ಅಮೆಜಾನ್ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ಪಾತಾಳಲೋಕ’ ಎಂಬ ವೆಬ್​ಸಿರೀಸ್ ನೋಡುವಾಗ ಇಂಥ ಅಭಿಪ್ರಾಯಗಳು ಹಲವರಲ್ಲಿ ಮೂಡಿದೆ. ಕ್ರಿಕೆಟ್ ಹೀರೋ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮ ಇದರ ನಿರ್ಮಾಪಕಿ.

    ಇದು ಒಂದು ವೆಬ್​ಸರಣಿಯ ಕಥೆಯಷ್ಟೇ ಅಲ್ಲ. ಕಿರುತೆರೆ ಹಾಗೂ ಚಲನಚಿತ್ರರಂಗದ ಅಸ್ತಿತ್ವವನ್ನೇ ಅಲುಗಾಡಿಸುವ ರೀತಿಯಲ್ಲಿ ಬೆಳೆಯುತ್ತಿರುವ ಒಟಿಟಿ ಎಂಬ ಪರ್ಯಾಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಹೆಚ್ಚಿನ ವೆಬ್​ಸರಣಿಗಳ ಕಥಾಹಂದರ ಹೀಗೆಯೇ ಇರುತ್ತದೆ. ಕಿರುತೆರೆ ಇವತ್ತಿಗೂ ದೇಸಿ ಹಾಗೂ ಸಾಂಪ್ರದಾಯಿಕ ಸೊಗಡನ್ನು ಉಳಿಸಿಕೊಂಡಿದೆ. ಚಲನಚಿತ್ರಗಳಿಗೆ ಸೆನ್ಸಾರ್ ಎಂಬ ಒಂದು ಮೂಗುದಾರವಿದೆ. ಆದರೆ, ಒಟಿಟಿ ಯಾವುದೇ ಸೆನ್ಸಾರ್ ಅಂಕೆಗೆ ಒಳಪಡದ ಸ್ವಾಯತ್ತ ಮಾಧ್ಯಮವಾಗಿ ಜನಪ್ರಿಯವಾಗಿದೆ. ಇಲ್ಲಿ ಕ್ರಿಯೆಟಿವಿಟಿ ಹೆಸರಲ್ಲಿ ಲೈಂಗಿಕತೆ ಪ್ರಚಾರ ಮಾಡಲಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರವನ್ನು ಮುಕ್ತವಾಗಿ ತೋರಿಸಲಾಗುತ್ತದೆ. ಸಂಭಾಷಣೆಗಳನ್ನಂತೂ ಹೆಡ್​ಫೋನ್ ಹಾಕಿಕೊಂಡೇ ಕೇಳಬೇಕು. ಅನೈತಿಕ ಸಂಬಂಧಗಳೇ ಇಲ್ಲಿನ ಕಥಾವಸ್ತು. ಪ್ರಣಯದೃಶ್ಯಗಳು ಮುಕ್ತಮುಕ್ತ. ಅಪ್ರಾಪ್ತರು, ಶಾಲಾ ಮಕ್ಕಳನ್ನೂ ಲೈಂಗಿಕ ದೃಶ್ಯಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಇಲ್ಲಿನ ಕಥೆಗಳಲ್ಲಿ ನಾಯಿಗೆ ಸಾವಿತ್ರಿ ಎಂದು ಹೆಸರಿಡುತ್ತಾರೆ. ವೇಶ್ಯೆಯರ ಹೆಸರು ಲಕ್ಷ್ಮೀ, ಪೂಜಾ ಇತ್ಯಾದಿ… ಸೆಕ್ಸಿ ದುರ್ಗಾ ಎಂಬ ಶೀರ್ಷಿಕೆಯನ್ನೇ ಇಡಲಾಗುತ್ತದೆ. ವಿವಸ್ತ್ರಳಾಗಿ ನರ್ತಿಸುವ ನರ್ತಕಿಯನ್ನು ರಾಧೆಗೆ ಹೋಲಿಸಲಾಗುತ್ತದೆ. ಆದರೆ ಇದೆಲ್ಲವೂ ನಿರ್ದೇಶಕರ ಸೃಜನಶೀಲತೆ. ಇದಕ್ಕೆ ಅಡ್ಡಿಪಡಿಸಬಾರದು ಎಂಬ ಗುರಾಣಿ ಬೇರೆ. ಸುಪ್ರಿಂ ಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಕೂಡ ಒಟಿಟಿಗಳ ನಿಯಂತ್ರಣ ತನ್ನ ಅಂಕೆಯಲ್ಲಿಲ್ಲ. ಅದು ಸ್ವತಂತ್ರ ಮಾಧ್ಯಮ ಎಂದು ಅಸಹಾಯಕತೆ ಪ್ರದರ್ಶಿಸಿಬಿಟ್ಟಿದೆ.

    ಇದನ್ನೂ ಓದಿ   ಕ್ವಾರಂಟೈನ್ ತಪ್ಪಿಸಲು ಹೊರಗಡೆಯಿಂದ ಬಂದವರ ಹೊಸ ಹೊಸ ತಂತ್ರ

    ಹಾಗಾದರೆ, ಈ ಒಟಿಟಿ ಯುಗದಲ್ಲಿ ನಾವು ಎತ್ತಸಾಗುತ್ತಿದ್ದೇವೆ? ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸರ್ಕಾರಗಳನ್ನು ಟೀಕಿಸಲಾಗುತ್ತದೆ. ಸಿಬಿಐನಂಥ ಉನ್ನತ ಸಂಸ್ಥೆಗಳನ್ನು ಅಸಮರ್ಥವೆಂಬಂತೆ, ಅಮಾಯಕರಿಗೆ ಉಗ್ರಪಟ್ಟ ಕಟ್ಟುವವರಂತೆ ಬಿಂಬಿಸಲಾಗುತ್ತದೆ. ಪ್ರಗತಿಪರರನ್ನು, ಟೀಕಾಕಾರರನ್ನು ಸರ್ಕಾರ ಮಟ್ಟಹಾಕುತ್ತದೆ ಎಂಬಂತೆ ಕಥೆ ಕಟ್ಟಲಾಗುತ್ತದೆ. ನಮ್ಮದೇಶ ಸಾಧಾರಣ ಪ್ರಕರಣಗಳಿಗೂ ಪಾಕ್ ಉಗ್ರರ ಲಿಂಕ್ ಥಳಕುಹಾಕುತ್ತದೆ ಎಂದು ಬಿಂಬಿಸುವ ಮೂಲಕ ಪಾಕಿಸ್ತಾನದ ಭಯೋತ್ಪಾದನೆಯನ್ನು ನಿರಾಕರಿಸುವ ಪ್ರಯತ್ನ ನಡೆಯುತ್ತದೆ. ಸೈನಿಕರನ್ನು ಅವಮಾನಿಸುವ, ಅನುಮಾನಿಸುವ ಪ್ರಯತ್ನಗಳು ನಡೆಯುತ್ತವೆ. ಆದರೆ, ಸರ್ಕಾರ ಇದೆಲ್ಲ ತನಗೆ ಸಂಬಂಧಪಟ್ಟಿದ್ದಲ್ಲ ಎಂಬಂತೆ ಧೃತರಾಷ್ಟ್ರನಂತೆ ಕುಳಿತಿದೆ.

    ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಕೆಲವರನ್ನು ಓಲೈಸುವ, ಭಾರತದ ಮೂಲಸಂಸ್ಕೃತಿಯನ್ನು ಕೆಣಕುವ, ಅಣಕಿಸುವ, ತಿರಸ್ಕರಿಸುವ, ನಿಂದಿಸುವ ಪ್ರಯತ್ನಗಳು ಇವತ್ತು ನಿನ್ನೆ ಶುರುವಾಗಿದ್ದೇನೂ ಅಲ್ಲ, ಒಟಿಟಿ ವೇದಿಕೆಯಲ್ಲೇ ಇದು ಹುಟ್ಟಿಕೊಂಡಿದ್ದೂ ಅಲ್ಲ. ಬಾಲಿವುಡ್ ಇಂಥ ನಕಾರಾತ್ಮಕ ಕ್ಯಾಂಪೇನ್​ನ ಬಹುದೊಡ್ಡ ಫ್ಯಾಕ್ಟರಿಯೇ ಆಗಿಬಿಟ್ಟಿದೆ. ಬಾಲಿವುಡ್​ನ ಹೆಚ್ಚಿನ ಚಿತ್ರಗಳು ಹಿಂದುಗಳನ್ನು, ಹಿಂದುತ್ವವನ್ನು, ದೇವರನ್ನು, ಭಕ್ತರನ್ನು, ಸಾಧುಸಂತರನ್ನು, ಮಠಮಂದಿರಗಳನ್ನು ಪೈಶಾಚಿಕದೃಷ್ಟಿಯಿಂದ ತೋರಿಸುತ್ತವೆ. ಇದನ್ನು ವಿರೋಧಿಸುವವರನ್ನು ಅಸಹಿಷ್ಣುಗಳೆನ್ನಲಾಗುತ್ತದೆ. ಹಾಸ್ಯ, ವಿಡಂಬನೆ, ವಾಸ್ತವ ಚಿತ್ರಣದ ಸಬೂಬಿನಲ್ಲಿ ಗಲ್ಲಾಪೆಟ್ಟಿಗೆ ತುಂಬಿಸಿಕೊಳ್ಳಲು ಇಂಥ ದೃಶ್ಯ, ಕಥೆಗಳನ್ನೇ ಉದ್ದೇಶಪೂರ್ವಕವಾಗಿ ಹೆಣೆಯಲಾಗುತ್ತದೆ.

    ‘ಪಿಕೆ’ ಎಂಬ ಚಿತ್ರ ಎಲ್ಲರಿಗೂ ನೆನಪಿರಬಹುದು. ಆ ಚಿತ್ರದಲ್ಲಿ ಅನ್ಯಗ್ರಹದಿಂದ ಬಂದಿರುವ ಕಥಾನಾಯಕನಿಗೆ ನಿಜವಾದ ಶಿವನಿಗೂ, ನಾಟಕದ ಸಲುವಾಗಿ ವೇಷ ತೊಟ್ಟ ಶಿವನ ಪಾತ್ರಧಾರಿಗೂ ಇರುವ ವ್ಯತ್ಯಾಸ ತಿಳಿಯುವುದಿಲ್ಲ. ನಾಟಕದ ಶಿವನೇ ನಿಜವಾದ ಶಿವ ಎಂದು ಭ್ರಮಿಸಿ ಅಟ್ಟಿಸಿಕೊಂಡು ಹೋಗುತ್ತಾನೆ. ಆ ಶಿವ ಬದುಕಿದರೆ ಸಾಕು ಬಡಜೀವ ಎಂಬಂತೆ ಓಡುತ್ತಾನೆ, ಗೋಡೆ ಹಾರುತ್ತಾನೆ, ಜನರ ಕಾಲಿನ ಸಂಧಿ ನುಸುಳುತ್ತಾನೆ. ಶಿವನ ಅಪಹಾಸ್ಯದ ದೃಶ್ಯವನ್ನು ಜನ ಚಪ್ಪಾಳೆ ತಟ್ಟಿಕೊಂಡು ನಗುತ್ತಾರೆ. ಹಾಸ್ಯದ ಸಲುವಾಗಿ ಯಾವ ದೇವರನ್ನು ಅಪಹಾಸ್ಯ ಮಾಡಿದರೂ ಭಾರತದ ಜನ ಬೇಜಾರು ಮಾಡಿಕೊಳ್ಳುವುದಿಲ್ಲ!

    ಇದನ್ನೂ ಓದಿ    ವಿಶ್ವ ಆರೋಗ್ಯ ಸಂಸ್ಥೆ ಬೇಡ ಎಂದರೂ ಭಾರತದಲ್ಲಿ ಎಚ್‌ಸಿಕ್ಯೂ ಬಳಕೆ ಮುಂದುವರಿಕೆ

    ಬಾಲಿವುಡ್​ನ ಹೆಚ್ಚಿನ ಸಿನಿಮಾಗಳಲ್ಲಿ ಖಳನಾಯಕರು (ವಿಲನ್​ಗಳು) ದೈವಭಕ್ತರಾಗಿರುತ್ತಾರೆ. ಅವರು ದೇವರ ಪೂಜೆಗೆ ಕುಳಿತಾಗಲೇ ಆಂತರ್ಯದಲ್ಲಿ ಶತ್ರುಗಳನ್ನು ಮಟ್ಟ ಹಾಕುವುದಕ್ಕೆ ಸ್ಕೆಚ್ ಹಾಕುತ್ತಿರುತ್ತಾರೆ. ಅವರ ಹಣೆಯಲ್ಲಿ ಸದಾ ವಿಭೂತಿ, ಕುಂಕುಮ, ನಾಮಗಳಿದ್ದೇ ಇರುತ್ತದೆ. ಸಿನಿಮಾಗಳ ಸಾಧು-ಸಂತರು, ಪೂಜಾರಿಗಳು ಯಾವಾಗಲೂ ಅಪ್ರಾಮಾಣಿಕರಾಗಿರುತ್ತಾರೆ. ಸುಳ್ಳು ಹೇಳುತ್ತಾರೆ. ಅಮಾಯಕರ ದಾರಿ ತಪ್ಪಿಸುತ್ತಾರೆ. ದೇವರು ಧರ್ಮದ ಹೆಸರಲ್ಲಿ ಜನರ ಸುಲಿಗೆ ಮಾಡುತ್ತಿರುತ್ತಾರೆ. ದೇವಸ್ಥಾನ, ಮಠಮಾನ್ಯಗಳನ್ನು ಬಿಸಿನೆಸ್ ಕೇಂದ್ರಗಳನ್ನಾಗಿ ಮಾಡಿರುತ್ತಾರೆ. ದೇವರ ಶಾಪದ ಹೆಸರಲ್ಲಿ ಜನರ ಶೋಷಣೆ ಮಾಡುತ್ತಿರುತ್ತಾರೆ. ನಮ್ಮ ಕನ್ನಡದಲ್ಲೂ ರೌಡಿಗಳನ್ನು, ಕೊಲೆಗಡುಕರನ್ನು ಅಯ್ಯಪ್ಪ ಸ್ವಾಮಿ ಭಕ್ತರಂತೆ ಚಿತ್ರಿಸಿದ ಹಲವು ಚಿತ್ರಗಳು ಬಂದುಹೋಗಿವೆ.

    ಜನ ಕಿಕ್ಕಿರಿದು ತುಂಬಿರುವ ರೈಲಿನಲ್ಲಿ ನಾಯಕಿಯನ್ನು ಚುಂಬಿಸುವ ಮುನ್ನ ನಾಯಕ ‘ರಘುಕುಲದ ರೀತಿ, ರಿವಾಜು ಯಾವತ್ತೂ ಬದಲಾಗುವುದಿಲ್ಲ. ಪ್ರಾಣ ಹೋದರೂ ಸರಿ, ನಿನ್ನನ್ನು ಚುಂಬಿಸದೆ ಬಿಡುವುದಿಲ್ಲ’ ಎಂದು ಡೈಲಾಗ್ ಹೇಳುತ್ತಾನೆ. ಆತ ನಾಯಕಿಗೆ ಚುಂಬಿಸುವುದಕ್ಕೂ ರಘುಕುಲದ (ರಾಮನ ಕುಲ) ರೀತಿ ರಿವಾಜಿಗೂ ಎತ್ತಣಿಂದೆತ್ತಣ ಸಂಬಂಧ?

    ಸೃಜನಶೀಲತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬೆರಡು ಗ್ರಹಿಕೆಗಳ ಅತೀ ಹೆಚ್ಚು ದುರ್ಬಳಕೆ ಮನರಂಜನಾ ಮಾಧ್ಯಮಗಳಿಂದ ಆಗುತ್ತಿದೆ ಎನ್ನುವುದಂತೂ ನಿಜ. ಯಾರನ್ನೋ ನೋಯಿಸುವುದು, ಅಪಹಾಸ್ಯ ಮಾಡುವುದು, ನಿಂದಿಸುವುದು, ಅಣಕ ಮಾಡುವುದು ನಿಜವಾದ ಹಾಸ್ಯವೆನಿಸಲು ಸಾಧ್ಯವಿಲ್ಲ. ಎಲ್ಲ ಜಾತಿ, ವರ್ಗ, ಧರ್ಮ, ಜೀವನಕ್ರಮಗಳಲ್ಲೂ ಆಕ್ಷೇಪಾರ್ಹ ಅನುಸರಣೆಗಳು, ಲೋಪದೋಷಗಳು ಇದ್ದೇ ಇರುತ್ತದೆ. ಎಲ್ಲರೂ ಒಳ್ಳೆಯವರಲ್ಲ, ಎಲ್ಲರೂ ಕೆಟ್ಟವರೂ ಅಲ್ಲ. ಒಂದು ಉದಾಹರಣೆ ತೋರಿಸಿ ಎಲ್ಲರನ್ನೂ ತಿರಸ್ಕರಿಸಲಾಗದು. ಒಂದು ವರ್ಗದ ಕುರಿತು ಅನುಕಂಪ, ಇತರ ವರ್ಗಗಳ ಅವಹೇಳನವನ್ನೇ ಪ್ರಗತಿಪರತೆ ಸೋಗಿನಲ್ಲಿ ತೋರಿಸುವುದೂ ಸಲ್ಲ. ಅಷ್ಟಕ್ಕೂ ಕ್ರಿಯೆಟಿವಿಟಿಗೆ ಬೌಂಡರಿಯಿಲ್ಲ ಎನ್ನುವುದಾದರೆ ಇವತ್ತಿನ ತಾಂತ್ರಿಕ ಸಾಧ್ಯತೆಗಳನ್ನು ಬಳಸಿಕೊಂಡು ಎಂಥೆಂಥ ಅದ್ಭುತ ಚಿತ್ರಗಳನ್ನು ನಿರ್ವಿುಸಬಹುದು. ಯಾವುದೇ ದೇವರು, ಧರ್ಮ, ಜನರನ್ನು ಅವಹೇಳನ ಮಾಡದೇ ಬಾಹುಬಲಿಯಂಥ ಯಶಸ್ವಿ ಚಿತ್ರಗಳನ್ನು ನಿರ್ವಿುಸಲು ಸಾಧ್ಯವಿದೆ ಎನ್ನುವುದು ಸಾಬೀತಾಗಿಲ್ಲವೇ? ಹಾಲಿವುಡ್​ನಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಾಯಾಲೋಕಗಳನ್ನೇ ಸೃಷ್ಟಿಸುತ್ತಿಲ್ಲವೇ? ಬಾಲಿವುಡ್​ನ ಪ್ರಗತಿಪರ ನಿರ್ದೇಶಕರು ಹಾಗೂ ಬಾಲಿವುಡ್​ನಲ್ಲಿ ಚಲಾವಣೆ ಕಳೆದುಕೊಂಡ ಬಳಿಕ ಒಟಿಟಿಯಲ್ಲಿ ಸಕ್ರಿಯರಾಗಿರುವ ಕ್ರಿಯೇಟಿವ್ ಡೈರೆಕ್ಟರ್​ಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ. ಮನರಂಜನೆ ಹೆಸರಲ್ಲಿ ಹರಡುವ ಇಂಥ ವಿಕೃತಿಗಳ ವಿರುದ್ಧ ಪ್ರೇಕ್ಷಕರೇ ಗಟ್ಟಿದನಿ ಎತ್ತಬೇಕಿದೆ, ವಿರೋಧ ತೋರಬೇಕಿದೆ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ನಿಯೋಜಿತ ಶಿಕ್ಷಕರ ವರ್ಗಾವಣೆ ಸದ್ಯಕ್ಕಿಲ್ಲ: ಸುರೇಶ್‌ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts