More

    ವಿರಳ ವಿರಹ ಗೀತೆ: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ವಿಮರ್ಶೆ

    • ಚಿತ್ರ: ಸಪ್ತ ಸಾಗರದಾಚೆ ಎಲ್ಲೋ
    • ನಿರ್ದೇಶನ: ಹೇಮಂತ್ ರಾವ್
    • ನಿರ್ಮಾಣ: ರಕ್ಷಿತ್ ಶೆಟ್ಟಿ
    • ತಾರಾಗಣ: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ, ರಮೇಶ್ ಇಂದಿರ, ಗೋಪಾಲ್ ದೇಶಪಾಂಡೆ ಮುಂತಾದವರು.

    | ಹರ್ಷವರ್ಧನ್ ಬ್ಯಾಡನೂರು

    ಶುದ್ಧ ಪ್ರೀತಿ-ಪ್ರೇಮಗಳ ಆಳ, ಅಗಲ ಅಳೆಯಲು ಸಾಧ್ಯವೇ? ಮುಷ್ಠಿಯಷ್ಟಿರುವ ಎರಡು ಪುಟ್ಟ ಹೃದಯಗಳಲ್ಲಿ ಸಾಗರದಷ್ಟು ಪ್ರೀತಿ ತುಂಬಿರಲು ಹೇಗೆ ಸಾಧ್ಯ? ಪ್ರೀತಿಸುವವರನ್ನು ಪಡೆಯುವುದೇ ಪ್ರೀತಿಯ ಅಂತಿಮ ಗುರಿಯೇ? ಪ್ರೀತಿಸುವವರಿಂದ ದೂರಾಗಿಯೂ ಪ್ರೀತಿಯನ್ನು ಗೆಲ್ಲಬಹುದೇ? ಒಬ್ಬರನ್ನೊಬ್ಬರು ಬಿಟ್ಟಿರಲಾರದ ಹಾಗೂ ಒಬ್ಬರನ್ನೊಬ್ಬರು ಬಿಟ್ಟುಬಿಡುವ ಎರಡೂ ಪ್ರೀತಿ ಎನಿಸಿಕೊಂಡರೆ, ಈ ಪ್ರೀತಿಯ ನಿಜ ವ್ಯಾಖ್ಯಾನವಾದರೂ ಏನು? ಈ ಪ್ರಶ್ನೆಗಳಿಗೆ ಹೇಮಂತ್ ಈ ಚಿತ್ರದಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

    ಆತ ಮಲೆನಾಡ ಹುಡುಗ ಮನು (ರಕ್ಷಿತ್), ಈಕೆ ಕರಾವಳಿ ಹುಡುಗಿ ಪ್ರಿಯಾ (ರುಕ್ಮಿಣಿ). ಕೆಳಮಧ್ಯಮ ವರ್ಗಕ್ಕೆ ಸೇರಿದ ಇಬ್ಬರೂ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುತ್ತಾರೆ. ಮನು ಶ್ರೀಮಂತ ಉದ್ಯಮಿಯ ಮನೆಯಲ್ಲಿ ಡ್ರೖೆವಿಂಗ್ ಕೆಲಸ ಮಾಡುತ್ತಿದ್ದರೆ, ಪ್ರಿಯಾ ಸಂಗೀತ ಕಲಿಯುತ್ತಿರುತ್ತಾಳೆ. ಇಬ್ಬರದೂ ಲವ್. ಮದುವೆಯ ಸಿದ್ಧತೆಯೂ ನಡೆಯುತ್ತಿರುತ್ತದೆ. ಅಷ್ಟರಲ್ಲಿ ನಡೆಯುವ ಒಂದು ಘಟನೆ ಇಬ್ಬರನ್ನೂ ದೂರಾಗಿಸುತ್ತದೆ. ಪರಸ್ಪರ ಮಾತನಾಡಬಹುದು, ಆದರೂ ಮನಸ್ಸಿನಲ್ಲಿ ಮೌನ. ಒಬ್ಬರನ್ನೊಬ್ಬರು ನೋಡಬಹುದಾದರೂ ಎಲ್ಲವೂ ಅಸ್ಪಷ್ಟ. ಹಾಗಾದರೆ ಮುಂದೆ? ‘ಸಪ್ತಸಾಗರದಾಚೆ ಎಲ್ಲೋ – ಸೈಡ್ ಎ’ ನೋಡಿ. ಹಾಗೇ ಅ.20ರಂದು ‘ಸೈಡ್ ಬಿ’ ಇರುವುದರಿಂದ ಮಧ್ಯದಲ್ಲಿ 50 ದಿನಗಳ ಮಧ್ಯಂತರ ಇರುವುದೂ ನೆನಪಿನಲ್ಲಿಡಿ. ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಕೆಮಿಸ್ಟ್ರಿ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಪ್ರಮುಖ ಹೈಲೈಟ್.

    ಸುಂದರ ಬದುಕು ಕಟ್ಟಿಕೊಳ್ಳುವ ಕನಸಿನಲ್ಲಿ ಕೊಚ್ಚಿ ಹೋಗುವ ಜೋಡಿಯಾಗಿ ಅದ್ಭುತ ಅಭಿನಯ ನೀಡಿದ್ದಾರೆ. ನವರಸಗಳಲ್ಲೂ ‘ಕತ್ತೆ’ ಎಂದು ಕರೆಯುವ ರೀತಿ ನೋಡುವುದೇ ಚಂದ. ಉಳಿದಂತೆ ರಮೇಶ್ ಇಂದಿರಾ ನಟನೆ ಗಮನ ಸೆಳೆಯುತ್ತದೆ. ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ, ಗೋಪಾಲ್ ದೇಶಪಾಂಡೆ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಒಂದು ಸಿನಿಮಾ ಎನ್ನುವುದಕ್ಕಿಂತ ಹೆಚ್ಚಾಗಿ ಅದೊಂದು ವಿರಹಗೀತೆ ಎನ್ನಬಹುದು. ನಗಿಸುವ, ಅಳಿಸುವ, ಕಾಡುವ ಸುದೀರ್ಘ ವಿರಹಗೀತೆ. ಅದನ್ನು ನೇಕಾರನಂತೆ ನಿರ್ದೇಶಕ ಹೇಮಂತ್ ರಾವ್ ನೂಲುಗಳಿಂದ ಬೆಸೆಯುವ ಪ್ರಯತ್ನ ಮಾಡಿದ್ದಾರೆ. ಮೊದಲರ್ಧ ನಿಧಾನವಾಗಿ ಸಾಗಿದರೂ ಅಲ್ಲಲ್ಲಿ ಸಣ್ಣ ಸಣ್ಣ ಟ್ವಿಸ್ಟ್​ಗಳು ನೋಡಿಸಿಕೊಂಡು ಹೋಗುತ್ತವೆ. ದ್ವಿತೀಯಾರ್ಧ ವೇಗವಾಗಿ ಸಾಗಿದರೂ, ಅಸಲಿ ಆಟ ಇರುವುದೇ ‘ಸೈಡ್ ಬಿ’ನಲ್ಲಿ ಎಂಬುದು ಗೊತ್ತಾಗುತ್ತದೆ. ಚರಣ್ ರಾಜ್ ಸಂಗೀತ ಈ ವಿರಹಗೀತೆಯನ್ನು ಕೇಳಲು ಚಂದವಾಗಿಸಿದ್ದರೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಈ ಗೀತೆಯನ್ನು ನೋಡಲು ಅಂದವಾಗಿಸಿದ್ದಾರೆ. ಭಾವ ತೀವ್ರತೆಯ ಪ್ರೇಮಕಥೆ ನೋಡಲು ಇಚ್ಛಿಸುವವರಿಗೆ ಈ ಸಿನಿಮಾ ಇಷ್ಟವಾಗಬಹುದು.

    ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟು ಇನ್ನೂ ಇದೆಯಾ?; ಹಾಗಿದ್ದರೆ ಹುಷಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts