More

    ಸಮ್ಮೇಳನದ ಬಾಕಿ ಹಣ ಪಾವತಿಗೆ ಆಗ್ರಹ; ಜಯ ಕರ್ನಾಟಕ ಸಂಘಟನೆಯ ರಮೇಶ ಆನವಟ್ಟಿ ಒತ್ತಾಯ

    ಹಾವೇರಿ: ನಗರದಲ್ಲಿ ಜ.6, 7, 8ರಂದು ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಶ್ರಮಿಸಿದ ಬ್ಯಾನರ್, ಪ್ರಿಂಟಿಂಗ್, ಬ್ಯಾಗ್, ಪೆಂಡಾಲ್, ಮತ್ತಿತರ ಬಿಲ್‌ಗಳನ್ನು ಜಿಲ್ಲಾಡಳಿತ ಬಾಕಿ ಉಳಿಸಿಕೊಂಡಿದ್ದು, ಈ ಕೂಡಲೇ ಬಾಕಿ ಪಾವತಿಸುವಂತೆ ಜಯ ಕರ್ನಾಟಕ ಸಂಘಟನೆಯ ಸಂಘಟನಾ ಕಾರ್ಯದರ್ಶಿ ರಮೇಶ ಆನವಟ್ಟಿ ಆಗ್ರಹಿಸಿದರು.
    ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಯಶಸ್ಸಿಗಾಗಿ ಸರ್ಕಾರ ಮೊದಲೇ 20 ಕೋಟಿ ರೂ. ಬಿಡುಗಡೆ ಮಾಡಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾಡಳಿತದಿಂದ 18 ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು. ಸಮಿತಿಗಳಲ್ಲಿ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರನ್ನು ಸೇರಿಸಿಕೊಂಡು ಎಲ್ಲ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳಲಾಯಿತು. ಆದರೆ, ಸಮ್ಮೇಳನ ಮುಗಿದು ಎರಡು ತಿಂಗಳಾಗುತ್ತ ಬಂದರೂ ಈವರೆಗೆ ಅನೇಕ ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದರು.
    ನಾನು ಕೂಡ ಮೆರವಣಿಗೆ ಸಮಿತಿಯ ಪ್ರತಿನಿಧಿ ಆಗಿದ್ದೆ. ನಮ್ಮ ತಂಡದ ಸಹಕಾರದೊಂದಿಗೆ ಮೆವರಣಿಗೆ ಸಂದರ್ಭದಲ್ಲಿ ಶಾಮಿಯಾನ, 12 ಸಾರೋಟಗಳ ಬಾಡಿಗೆ, ಕುಡಿಯುವ ನೀರು, ಚಾಕಲೇಟ್, ಪೆಪ್ಪರಮೆಂಟ್, ಗ್ಲೂಕೋಸ್ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಐದಾರು ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದು, ಇಂದು ನಾಳೆ ಎಂದು ಸತಾಯಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಮೂರು ವಾರವಾದರೂ ಪ್ರಯೋಜನವಾಗಿಲ್ಲ. ಒಂದು ವಾರದೊಳಗೆ ಎಲ್ಲ ಬಾಕಿ ಬಿಲ್‌ಗಳನ್ನು ಪಾವತಿಸದಿದ್ದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಮಹೇಶ ಜೋಶಿ ನಡೆಗೆ ಬೇಸರ
    ಸಮ್ಮೇಳನಕ್ಕೂ ಮೊದಲು ‘ನಾನು ಹಾವೇರಿ ಜಿಲ್ಲೆಯ ಮಗ. ಗುರುಗೋವಿಂದ ಭಟ್ಟರ ಮರಿ ಮೊಮ್ಮಗ. ದಯವಿಟ್ಟು ಸಮ್ಮೇಳನ ಯಶಸ್ವಿಗೊಳಿಸಿ’ ಎಂದು ಓಡಾಡಿಕೊಂಡಿದ್ದ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಸಮ್ಮೇಳನ ಯಶಸ್ವಿಯಾಗುತ್ತಿದ್ದಂತೆ ಹಾವೇರಿಯಿಂದ ಕಾಲು ಕಿತ್ತಿದ್ದಾರೆ. ಸಮ್ಮೇಳನ ಮುಗಿದು ಒಂದೂವರೆ ತಿಂಗಳು ಗತಿಸಿದರೂ ಇಲ್ಲಿಗೆ ಬಂದಿಲ್ಲ. ಸಮ್ಮೇಳನದ ಯಶಸ್ಸಿಗೆ ಕಾರಣರಾದ ಜಿಲ್ಲೆಯ ಜನತೆ, ಸಂಘಟನೆಗಳು ಹಾಗೂ ಮಾಧ್ಯಮದವರಿಗೆ ಕನಿಷ್ಠ ಒಂದು ಧನ್ಯವಾದ ಹೇಳುವ ಸೌಜನ್ಯವೂ ಅವರಿಗೆ ಇಲ್ಲ ಎಂದು ರಮೇಶ ಆನವಟ್ಟಿ ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts