More

    ನಾಸ್ತಿಕರೂ ಆಸ್ತಿಕರಾಗುವ ಕಾಂತಾರ; ಕಂಬಳ ಕಥೆಯ ಭಾಗವಷ್ಟೇ, ಕಂಬಳವೇ ಚಿತ್ರವಲ್ಲ: ರಿಷಬ್

    ಬೆಂಗಳೂರು: ‘ಬಹಳ ದೊಡ್ಡ ಕ್ಯಾನ್ವಾಸ್​ನ ಚಿತ್ರವಿದು. ನನ್ನ ಇದುವರೆಗಿನ ಸಿನಿಮಾ ಜರ್ನಿಯಲ್ಲಿ ಯಾವತ್ತೂ ಇಷ್ಟು ದೊಡ್ಡ ಬಜೆಟ್ ಸಿನಿಮಾದಲ್ಲಿ ಕೆಲಸ ಮಾಡಿಲ್ಲ. ಕೊನೆಕೊನೆಗೆ, ‘ನಿಂಗಿದು ಬೇಕಿತ್ತಾ ಮಗನೇ …’ ಹಾಡು ನೆನಪಾಗುತ್ತಿತ್ತು …’ ಎಂದು ಹೇಳಿ ನಕ್ಕರು ರಿಷಬ್ ಶೆಟ್ಟಿ. ಅವರು ಹೇಳಿದ್ದು ‘ಕಾಂತಾರ’ ಚಿತ್ರದ ಬಗ್ಗೆ. ಸೆ. 30ಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಸಹ ಹುಟ್ಟುಹಾಕಿದೆ. ಇನ್ನು, ರಿಷಬ್​ಗೂ ಈ ಚಿತ್ರದ ಬಗ್ಗೆ ವಿಶೇಷವಾದ ನಿರೀಕ್ಷೆ ಇದೆ. ಕಾರಣ ಇದೊಂದು ವಿಶೇಷ ಪ್ರಯತ್ನವಂತೆ.

    ಈ ಕುರಿತು ಮಾತನಾಡುವ ಅವರು, ‘‘ಕಾಂತಾರ’ ಚಿತ್ರದಲ್ಲಿನ ಕೆಲವೊಂದು ಘಟನೆಗಳು ನನ್ನ ಬದುಕಿನಲ್ಲಿ ನೋಡಿದ್ದು. ಅಷ್ಟೇ ಅಲ್ಲ, ನಮ್ಮ ಊರಿನ ಸುತ್ತಮುತ್ತಲೇ ಚಿತ್ರೀಕರಣ ಸಹ ನಡೆದಿದೆ. ನಮ್ಮೂರಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಇಲ್ಲಿ ಜೂನಿಯರ್ ಆರ್ಟಿಸ್ಟ್​ಗಳ ಜತೆಗೆ ನಮ್ಮ ಊರಿನ ಹಲವರು ಕಾಣಿಸಿಕೊಂಡಿದ್ದಾರೆ. ಅಲ್ಲಿನ ಸಂಪ್ರದಾಯ, ದೈವ ಎಲ್ಲವೂ ಈ ಚಿತ್ರದಲ್ಲಿದೆ. ಆರಂಭದಲ್ಲಿ ಈ ನಂಬಿಕೆಗಳ ಬಗ್ಗೆ ವಿರೋಧ ತೋರುತ್ತಿದ್ದ ನಾಸ್ತಿಕರೂ ಕೊನೆಯಲ್ಲಿ ಇಲ್ಲಿ ದೇವರಿಗೆ ಪೂಜೆ ಮಾಡಿಸಿ ನಮಸ್ಕಾರ ಹಾಕಿ ಹೋದರು’ ಎನ್ನುತ್ತಾರೆ ರಿಷಬ್. ಚಿತ್ರದಲ್ಲಿ ಕರಾವಳಿಯ ಅನೇಕ ಜಾನಪದ ಪ್ರಕಾರಗಳು, ಜನಪದ ವಾದ್ಯಗಳ ಬಳಕೆ ಮಾಡಿದ್ದು, ಅದನ್ನೆಲ್ಲ ಒರಿಜಿನಲ್ ಕಲಾವಿದರಿಂದಲೇ ರೆಕಾರ್ಡ್ ಮಾಡಿಸಲಾಗಿದೆಯಂತೆ.

    ಇನ್ನು, ಟ್ರೇಲರ್​ನಲ್ಲಿ ಗಮನಸೆಳೆಯುವ ಅಂಶವೆಂದರೆ, ಕಂಬಳದ ದೃಶ್ಯಗಳು. ಈ ಚಿತ್ರದಲ್ಲಿ ಕಂಬಳ ಒಂದು ಭಾಗವೇ ಹೊರತು, ಕಂಬಳದ ಸುತ್ತ ಈ ಚಿತ್ರ ಸುತ್ತುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ ರಿಷಬ್. ‘ಇಡೀ ಸಿನಿಮಾ ಪ್ರಕೃತಿ ಮತ್ತು ಮಾನವ ಸಂಘರ್ಷದ ಮೇಲೆ ನಿಂತಿದೆ. ಇಲ್ಲಿ ಕಂಬಳ, ಕಥೆಗೆ ಪೂರಕವಾಗಿ ಬರುತ್ತದೆಯೇ ಹೊರತು ಅದರ ಮೇಲೇ ಕಥೆ ನಡೆಯೋದಿಲ್ಲ. ಈ ಚಿತ್ರಕ್ಕಾಗಿ 36 ರೌಂಡ್ ಕೋಣ ಓಡಿಸಿದ್ದೇನೆ. ಅದಕ್ಕಾಗಿ ಸಾಕಷ್ಟು ಶ್ರಮವನ್ನೂ ಹಾಕಿದ್ದೀನಿ’ ಎನ್ನುತ್ತಾರೆ ರಿಷಬ್.

    ನಾಯಕಿ ಸಪ್ತಮಿ ಗೌಡ ಈ ಚಿತ್ರದಲ್ಲಿ ಫಾರೆಸ್ಟ್ ಗಾರ್ಡ್ ಪಾತ್ರ ಮಾಡಿದ್ದಾರಂತೆ. ‘ಈ ಸಿನಿಮಾದಲ್ಲಿ ಮೀನು ಸಾಂಬಾರು ಮಾಡಿದ್ದು, ಮಂಗಳೂರು ಕನ್ನಡ ಕಲಿತದ್ದು ವಿಶೇಷ ಅನುಭವ’ ಎಂದು ಅವರು ಹೇಳಿಕೊಳ್ಳುತ್ತಾರೆ. ಹೊಂಬಾಳೆ ಫಿಲಂಸ್​ನಡಿ ವಿಜಯ್ ಕುಮಾರ್ ಕಿರಗಂದೂರು ನಿರ್ವಿುಸಿರುವ ‘ಕಾಂತಾರ’ ಚಿತ್ರದಲ್ಲಿ ರಿಷಬ್ ಮತ್ತು ಸಪ್ತಮಿ ಜತೆ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

    ನಾಲಿಗೆಯೇ ಹೇಳುತ್ತೆ ಕರುಳಿನ ಆರೋಗ್ಯ!: ಹೇಗೆ? ಇಲ್ಲಿದೆ ಮಾಹಿತಿ..

    ಬ್ಯಾಂಕ್​ನಲ್ಲಿ 2.69 ಕೋಟಿ ರೂ. ಲಪಟಾಯಿಸಿದ್ದ ಅಸಿಸ್ಟೆಂಟ್​ ಮ್ಯಾನೇಜರ್​; ತಲೆಮರೆಸಿಕೊಂಡಿದ್ದವ ಕೊನೆಗೂ ಸಿಕ್ಕಿಬಿದ್ದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts