More

    ಬಡವರ ಮೀಸಲು ಸಂವಿಧಾನಬದ್ಧ: ಶಿಕ್ಷಣ, ಉದ್ಯೋಗದಲ್ಲಿ ಶೇ.10 ಮೀಸಲಾತಿಗೆ ಸುಪ್ರೀಂ ಕೋರ್ಟ್ ಸಮ್ಮತಿ

    ನವದೆಹಲಿ: ಮೇಲ್ವರ್ಗದ ಬಡವರಿಗೆ (ಎಕನಾಮಿಕಲಿ ವೀಕರ್ ಸೆಕ್ಷನ್- ಇಡಬ್ಲು್ಯಎಸ್) ಮೀಸಲಾತಿ ಕಲ್ಪಿಸುವ ಉದ್ದೇಶದಿಂದ 2021ರಲ್ಲಿ ಸಂವಿಧಾನದ 103ನೇ ತಿದ್ದುಪಡಿ ತಂದಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಸೋಮವಾರ ವಜಾಗೊಳಿಸಿದೆ. ಈ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡಬೇಕೆಂಬ ಕೇಂದ್ರ ಸರ್ಕಾರದ ನೀತಿಯನ್ನು ಬೆಂಬಲಿಸುವ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ನ್ಯಾಯಪೀಠದಲ್ಲಿದ್ದ ನ್ಯಾ.ಜೆ.ಬಿ. ಪರ್ದಿವಾಲಾ, ನ್ಯಾ.ಬೇಲಾ ತ್ರಿವೇದಿ, ನ್ಯಾ.ದಿನೇಶ್ ಮಹೇಶ್ವರಿ ಮೀಸಲಾತಿ ತಿದ್ದುಪಡಿ ಪರ ನಿಲುವನ್ನು ಪ್ರಕಟಿಸಿದರೆ, ಸಿಜೆಐ ಯು.ಯು. ಲಲಿತ್ ಮತ್ತು ನ್ಯಾ. ರವೀಂದ್ರ ಭಟ್ ಭಿನ್ನ ತೀರ್ಪನ್ನು ನೀಡಿದ್ದಾರೆ. 3:2 ಅನುಪಾತದಲ್ಲಿ ತೀರ್ಪು ಹೊರಬಿದ್ದಿದ್ದರೂ, ಬಹುಮತವು ಮೀಸಲಾತಿ ಪರ ಪ್ರಕಟಗೊಂಡಿರುವುದರಿಂದ ಸುಪ್ರೀಂಕೋರ್ಟ್ ಅಂಗಳದಲ್ಲಿ ಕೇಂದ್ರ ಸರ್ಕಾರದ ವಾದಕ್ಕೆ ಜಯ ಸಿಕ್ಕಂತಾಗಿದೆ.

    ಸಂವಿಧಾನ ಸ್ವರೂಪಕ್ಕೆ ಧಕ್ಕೆಯಿಲ್ಲ: ಮೇಲ್ವರ್ಗ ಮೀಸಲಾತಿಯಿಂದ ಸಂವಿಧಾನದ ಮೂಲ ರಚನೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ನ್ಯಾ. ದಿನೇಶ್ ಮಹೇಶ್ವರಿ ಅಭಿಪ್ರಾಯಪಟ್ಟಿದ್ದಾರೆ. ಇದು ಅರ್ಥಿಕ ಮಾನದಂಡ ಆಧರಿಸಿ ನೀಡಿರುವ ಕ್ರಮವಾಗಿದೆ. ಸಮಾನ ಸಮಾಜ ರೂಪಿಸಲು ಎಲ್ಲರನ್ನೂ ಒಳಗೊಳ್ಳುವ ಕ್ರಮ ಖಚಿತ ಪಡಿಸಿಕೊಳ್ಳಲು ಮೀಸಲಾತಿಯು ಪೂರಕ ಸಾಧನವಾಗಿದ್ದು, ಶೇ.10 ಮೀಸಲಾತಿಯು ತೊಂದರೆಗೊಳಗಾದ ವರ್ಗವನ್ನು ಮೀಸಲಾತಿ ವ್ಯಾಪ್ತಿಗೆ ಸೇರಿಸುವ ಕ್ರಮವಾಗಿದೆ ಎಂದು ಸಮರ್ಥಿಸಿದ್ದಾರೆ. ಮೀಸಲಾತಿಯು ಶೇ.50ರ ಗಡಿ ದಾಟಬಾರದು ಎಂದು 1992ರ ಇಂದಿರಾ ಸಾಹ್ನಿ ತೀರ್ಪಿನಲ್ಲಿ ದಾಖಲಿಸಲಾಗಿದೆ.

    ಆದರೆ, ಸಂವಿಧಾನದ ಆರ್ಟಿಕಲ್ 16(4) ಮತ್ತು 16(5)ರ ಅಡಿಯಲ್ಲಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಮೀಸಲಾತಿಯ ಮಿತಿಯಲ್ಲಿ ಶೇ.50 ದಾಟಿದಾಗ ಮಾತ್ರ ತೀರ್ಪಿನ ಉಲ್ಲಂಘನೆಯಾಗುತ್ತದೆ. ಶೇ.10 ಮೀಸಲಾತಿ ಅದರಿಂದ ಹೊರತಾಗಿದೆ. ಸಮಾನತೆಯ ತತ್ವಕ್ಕೂ ಇಲ್ಲಿ ಹಾನಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಮೀಸಲು ನೀತಿ ಮರುಪರಿಶೀಲಿಸಿ: ನ್ಯಾ.ಮಹೇಶ್ವರಿ ತೀರ್ಪನ್ನು ಬೆಂಬಲಿಸಿರುವ ನ್ಯಾ.ಬೇಲಾ ತ್ರಿವೇದಿ, ಪರಿಶಿಷ್ಟ ಜಾತಿ, ಪಂಗಡಗಳನ್ನು ಹೊರತುಪಡಿಸಿ ಇತರರಿಗೆ ವಿಶೇಷ ಅವಕಾಶ ಕಲ್ಪಿಸುವುದಕ್ಕೆ ಅನುವು ಮಾಡಿಕೊಡಲು ಸಂಸತ್ತು ಕ್ರಮಬದ್ಧವಾದ ತಿದ್ದುಪಡಿ ತಂದಿದೆ. ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿರುವುದು ಸಮಂಜಸವಾದ ವರ್ಗೀಕರಣವಾಗಿದ್ದು, ಶಾಸಕಾಂಗವು ಜನರ ಅಗತ್ಯಗಳನ್ನು ಅರ್ಥ ಮಾಡಿಕೊಂಡಿದೆ ಎಂದಿದ್ದಾರೆ. ಮುಖ್ಯವಾಗಿ, ನ್ಯಾ.ಪರ್ದೀವಾಲಾ ಅವರಂತೆ, ಮೀಸಲಾತಿ ನೀತಿಯನ್ನೇ ಮರುಪರಿಶೀಲಿಸಬೇಕು ಎಂದಿರುವ ನ್ಯಾ.ತ್ರಿವೇದಿ, ಹಳೆಯ ಜಾತಿ ವ್ಯವಸ್ಥೆಯಿಂದಾಗಿ ಭಾರತದಲ್ಲಿ ಮೀಸಲಾತಿ ನೀತಿಯನ್ನು ಜಾರಿ ಮಾಡಿ, ಎಸ್ಸಿ/ಎಸ್ಟಿ ಸಮುದಾಯಗಳನ್ನೂ ಸಮಾಜದ ಮುಖ್ಯ ವೇದಿಕೆಗೆ ತರುವ ಪ್ರಯತ್ನ ಮಾಡಲಾಯಿತು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡಿರುವ ಈ ಕಾಲಘಟ್ಟದಲ್ಲಿ ಸಾಂವಿಧಾನಿಕ ಸುಧಾರಣೆಯ ಭಾಗವಾಗಿ ಮೀಸಲಾತಿಯನ್ನು ನಾವು ಪುನರ್ ಪರಿಶೀಲಿಸಬೇಕಾಗಿದೆ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

    ಎಲ್ಲರನ್ನೂ ಒಳಗೊಳ್ಳಲಿ: ನ್ಯಾ.ರವೀಂದ್ರ ಭಟ್ ಭಿನ್ನ ತೀರ್ಪನ್ನು ನೀಡಿದ್ದರೂ, ಆರ್ಥಿಕ ದುರ್ಬಲರಿಗೆ ಮೀಸಲಾತಿ ನೀಡುವುದನ್ನು ಬೆಂಬಲಿಸಿದ್ದಾರೆ. ಆರ್ಥಿಕ ಆಧಾರದ ಮೇಲೆ ಮೀಸಲಾತಿ ಅನುಮತಿಸಲಾಗಿದ್ದರೂ, ಆರ್ಥಿಕ ದುರ್ಬಲ ಮೀಸಲಾತಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಇತರ ಹಿಂದುಳಿದ ವರ್ಗಗಳನ್ನು ಬದಿಗಿಟ್ಟಿರುವುದು ಒಪ್ಪಲಾಗದು. ಇದರಿಂದ ಆ ಸಮುದಾಯಗಳಿಗೆ ತಾರತಮ್ಯ ಮಾಡಿದಂತಾಗುತ್ತದೆ ಎಂಬ ಅಭಿಮತ ವ್ಯಕ್ತಪಡಿಸಿದ್ದಾರೆ. ಆರ್ಥಿಕ ದುರ್ಬಲತೆ, ಹಿಂದುಳಿದಿರುವಿಕೆ ಈ ತಿದ್ದುಪಡಿಯ ಬೆನ್ನೆಲುಬಾಗಿದೆ. ಈ ನೆಲೆಯಲ್ಲಿ ತಿದ್ದುಪಡಿಗೆ ಸಾಂವಿಧಾನಿಕವಾಗಿ ಸಿಂಧುತ್ವವಿಲ್ಲ ಎನ್ನಲಾಗದು. ಆದರೆ, ಎಸ್​ಸಿ / ಎಸ್​ಟಿ, ಒಬಿಸಿಯಂತಹ ವರ್ಗಗಳನ್ನು ಹೊರತುಪಡಿಸುವುದಕ್ಕೆ ಸಾಂವಿಧಾನಿಕ ಅನುಮತಿ ನೀಡಲಾಗದು ಎಂದಿರುವ ನ್ಯಾ. ಭಟ್, ಇದಕ್ಕೆ ಪೂರಕವಾಗಿ ಎಸ್ಸಿ/ಎಸ್ಟಿಗಳ ಆರ್ಥಿಕ ಹಿಂದುಳಿದಿರುವಿಕೆ ಕುರಿತ 2001ರ ಸಿನ್ಹೋ ಆಯೋಗದ ವರದಿಯನ್ನು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಶೇ.38ರಷ್ಟು ಎಸ್ಸಿ ಮತ್ತು ಶೇ.48ರಷ್ಟು ಎಸ್ಟಿ ಸಮುದಾಯದ ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿವೆ ಎಂಬ ವರದಿ ಅಂಶಗಳನ್ನು ದಾಖಲಿಸಿದ್ದಾರೆ. ಇಂದಿರಾ ಸಾಹ್ನಿ ತೀರ್ಪಿನಂತೆ ಮೀಸಲಾತಿಯು ಶೇ.50ರ ಗಡಿ ದಾಟುವುದನ್ನೂ ಅವರು ಒಪ್ಪಿಕೊಂಡಿಲ್ಲ. ಸಿಜೆಐ ಲಲಿತ್ ಅವರು ನ್ಯಾ. ಭಟ್ ತೀರ್ಪಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

    ಪ್ರಸ್ತುತ ಕಾಲಕ್ಕೆ ಅನ್ವಯಿಸಲಿ: ಇಡಬ್ಲು್ಯಎಸ್ ಮೀಸಲಾತಿ ನೀತಿ ಬೆಂಬಲಿಸಿದ ನ್ಯಾಯಮೂರ್ತಿಗಳಲ್ಲಿ ನ್ಯಾ.ಜೆ.ಬಿ. ಪರ್ದಿವಾಲಾ, ದೇಶದಲ್ಲಿ ಮೀಸಲಾತಿಯನ್ನು ಈ ರೀತಿ ಅನಿರ್ದಿಷ್ಟವಾಗಿ ಮುಂದುವರಿಸುತ್ತಿರುವುದಕ್ಕೆ ಅಂತ್ಯ ಹಾಡಬೇಕೆಂಬ ದೃಢ ನಿಲುವನ್ನು ಹೊರಹಾಕಿದ್ದಾರೆ. ಸಾಮಾಜಿಕ/ಆರ್ಥಿಕವಾಗಿ ಮುಂದುವರಿದಿರುವವರನ್ನು ಹಿಂದುಳಿದ ವರ್ಗಗಳಿಂದ ತೆಗೆದುಹಾಕಬೇಕು. ಅಗತ್ಯವಿರುವವರಿಗಷ್ಟೇ ಮೀಸಲಾತಿ ನೀತಿ ಮೂಲಕ ಸಹಾಯ ಮಾಡಬೇಕು. ಹಿಂದುಳಿದ ವರ್ಗಗಳು ಯಾವುವು ಎಂಬುದನ್ನು ಈ ಕಾಲಕ್ಕೆ ಪ್ರಸ್ತುತವಾಗುವಂತೆ ನಿರ್ಧರಿಸಬೇಕು. ಇದಕ್ಕಾಗಿ ಮೀಸಲಾತಿ ನೀತಿಯನ್ನೇ ಮರುಪರಿಶೀಲಿಸುವ ಅಗತ್ಯವಿದೆ. ಮೀಸಲಾತಿಯನ್ನು ಅನಿರ್ದಿಷ್ಟ ಅವಧಿಗೆ ಮುಂದುವರಿಸಿದಲ್ಲಿ ಅದು ಪಟ್ಟಭದ್ರ ಹಿತಾಸಕ್ತಿಗಳಿಗಷ್ಟೇ ನೆರವಾಗಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮೇಲ್ವರ್ಗದ ಬಡವರಿಗೂ ಶೇ.10 ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ತೀರ್ವನವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ನಿರ್ಣಯವನ್ನು ಸ್ವಾಗತಿಸುತ್ತೇನೆ. ಸಾಮಾಜಿಕ ಕ್ರಾಂತಿಗೆ ಮೋದಿ ಕ್ರಮ ಕೈಗೊಂಡಿದ್ದು, ರಾಜ್ಯದಲ್ಲಿಯೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ಬರಲಿದೆ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಮರುಪರಿಶೀಲನಾ ಅರ್ಜಿ?: ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮುಂದೆ ಅರ್ಜಿದಾರರು ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ತೀರ್ಪು ಪ್ರಕಟಿಸಿದ ನ್ಯಾಯಪೀಠವೇ ಅರ್ಜಿಯ ಮರುಪರಿಶೀಲನೆ ನಡೆಸಲಿದೆ. ಆದರೆ, ಸಿಜೆಐ ಯು.ಯು. ಲಲಿತ್ ನಿವೃತ್ತಿಯಾಗಿರುವುದರಿಂದ ಹೊಸ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ನ್ಯಾ. ಲಲಿತ್ ಸ್ಥಾನಕ್ಕೆ ಮತ್ತೋರ್ವ ನ್ಯಾಯಮೂರ್ತಿಯನ್ನು ನೇಮಕ ಮಾಡಬೇಕು ಅಥವಾ ತಾವೇ ಪೀಠದ ಸದಸ್ಯರಾಗಿ ಪ್ರಕರಣದ ವಿಚಾರಣೆ ನಡೆಸಬಹುದಾಗಿದೆ.

    40ಕ್ಕೂ ಹೆಚ್ಚು ತಕರಾರು ಅರ್ಜಿ: ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ ಅನುಕೂಲವಾಗಲೆಂದು ಜಾರಿ ಮಾಡಲಾಗಿದ್ದ ಶೇ.10 ಮೀಸಲಾತಿ ನೀತಿಗೆ ತಕರಾರು ತೆಗೆದು ಸರ್ಕಾರೇತರ ಸಂಸ್ಥೆಗಳಾದ ಜನಹಿತ್ ಅಭಿಯಾನ್, ಯೂತ್ ಫಾರ್ ಈಕ್ವಾಲಿಟಿ ಸೇರಿದಂತೆ 40ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ಮುಖ್ಯ ಸಾಂವಿಧಾನಿಕ ಪೀಠವು ಸೆ.27ರಂದು ತೀರ್ಪನ್ನು ಕಾದಿರಿಸಿತ್ತು.

    ತಿದ್ದುಪಡಿ ಉದ್ದೇಶ: ಪರಿಶಿಷ್ಟ ಜಾತಿ/ಪಂಗಡ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಹೊರತುಪಡಿಸಿ, ಆರ್ಥಿಕ ದುರ್ಬಲ ವರ್ಗಗಳಿಗೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಉದ್ಯೋಗದಲ್ಲಿ 10 ಪ್ರತಿಶತದಷ್ಟು ಮೀಸಲಾತಿ ಕಲ್ಪಿಸಬೇಕು ಎನ್ನುವುದು 103ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಉದ್ದೇಶವಾಗಿತ್ತು.

    ಧರ್ಮದ ಬಗ್ಗೆ ಮಾತನಾಡುವ ಹಕ್ಕು ನನಗೂ ಇಲ್ಲ, ಅವರಿಗೂ ಇಲ್ಲ: ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts