More

    ಸುಟ್ಟ ಭೂ ದಾಖಲೆ ಮರುಸೃಷ್ಟಿ

    ಹಾವೇರಿ: ಪ್ರತಿಭಟನೆ ವೇಳೆ ಸವಣೂರ ತಹಸೀಲ್ದಾರ್ ಕಚೇರಿ ಅಭಿಲೇಖಾಲಯದಲ್ಲಿ ಸುಟ್ಟು ಹೋಗಿದ್ದ 33 ಗ್ರಾಮಗಳ ಜಮೀನಿನ ಭೂ ದಾಖಲೆಗಳನ್ನು ಹೊಸದಾಗಿ ಸೃಷ್ಟಿಸುವ ಕಾರ್ಯಕ್ಕೆ ಬುಧವಾರ ಚಾಲನೆ ದೊರೆತಿದೆ.

    ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಅವರು ಸವಣೂರ ಕಚೇರಿಗೆ ಬುಧವಾರ ಭೇಟಿ ನೀಡಿ, ಭೂದಾಖಲೆಗಳನ್ನು ಹೊಸದಾಗಿ ಸೃಜಿಸಲು ಅನುಸರಿಸಬೇಕಾದ ಮಾನದಂಡ, ನಿಯಮಾವಳಿ, ದಾಖಲೆ ಆಧಾರ ಕುರಿತು ತಹಸೀಲ್ದಾರ್, ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡಿದರು.

    ಲಭ್ಯವಿರುವ ಪೂರಕ ದಾಖಲೆಗಳನ್ನು ಗ್ರಾಮಲೆಕ್ಕಾಧಿಕಾರಿಗಳು ರಜಿಸ್ಟರ್​ನಲ್ಲಿ ನಮೂದಿಸುವುದು. ಗ್ರಾಮದಪ್ತರ್ ಜಾರ್ಜ್ ಅನ್ನು ಯಾರಿಂದ ಯಾವಾಗ ಪಡೆಯಲಾಗಿದೆ ಎಂಬ ದಿನಾಂಕ ನಮೂದಿಸುವುದು, ಖಾತೆದಾರರಿಗೆ ಸಂಬಂಧಿಸಿದ ಜಮೀನಿನ ಹಳೇ ದಾಖಲೆಗಳನ್ನು ಪಡೆಯುವುದು, ದಾಖಲೆ ಸಂಗ್ರಹಿಸಲು ಗ್ರಾಮಕ್ಕೊಬ್ಬ ಅಧಿಕಾರಿಯನ್ನು ನಿಯೋಜಿಸುವುದು, ಈ ಕುರಿತು ಡಂಗುರ ಸಾರಿ ಗ್ರಾಮಸ್ಥರಿಗೆ ಮಾಹಿತಿ ನೀಡುವುದು, ದಾಖಲೆ ಸಂಗ್ರಹಿಸಿ ಅಭಿಲೇಖಾಲಯಕ್ಕೆ ಸಲ್ಲಿಸುವುದು, ತಹಸೀಲ್ದಾರ್ ಕಚೇರಿಯಲ್ಲಿ 33 ಗ್ರಾಮಗಳ ಲಭ್ಯವಿರುವ ಭೂ ದಾಖಲೆ ಕುರಿತು ಗ್ರಾಮವಾರು ಪಟ್ಟಿ ಮಾಡುವುದು, ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಭ್ಯವಿರುವ ಭೂ ದಾಖಲೆ ತರಿಸಿಕೊಳ್ಳುವುದು, ಗ್ರಾಮಗಳ ಸರ್ವೆ ನಂಬರ್ ಪಟ್ಟಿ ಮಾಡಿ ಅಳತೆ ಮತ್ತು ಪೋಡಿಗಾಗಿ ಭೂಮಾಪನ ಇಲಾಖೆಗೆ ಕಳಿಸಿರುವ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ದೃಢೀಕರಿಸುವುದು, ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ, ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ಲಭ್ಯವಿರುವ ಭೂದಾಖಲೆ ಪಡೆಯಬೇಕು. ಎಲ್ಲ ದಾಖಲೆಗಳನ್ನು ತಹಸೀಲ್ದಾರ್, ಉಪವಿಭಾಗಾಧಿಕಾರಿಗಳು ದೃಢೀಕರಿಸಬೇಕು. ಈ ಕುರಿತು ತ್ವರಿತ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಯಾವ ಯಾವ ಕಚೇರಿಯಲ್ಲಿ ರೈತರಿಗೆ ಸಂಬಂಧಿಸಿದ ದಾಖಲೆಗಳಿವೆ ಎಂಬುದನ್ನು ಯೋಗೇಶ್ವರ ಅವರು ಪರಿಶೀಲನೆ ನಡೆಸಿದ್ದಾರೆ. ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿಯೂ ಅವರು ತಿಳಿಸಿದ್ದಾರೆ.

    ಸಭೆಯಲ್ಲಿ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ್ ಸಿ.ಎಸ್. ಭಂಗಿ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಡಿ.ಎನ್. ಕುಲಕರ್ಣಿ, ಸಿ.ಎಸ್. ಜಾಧವ, ಕಂದಾಯ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು ಇದ್ದರು.

    ದಾಖಲೆ ಸುಟ್ಟಿದ್ದು ಯಾವಾಗ?: ಸವಣೂರ ಪಟ್ಟಣದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಆಗ್ರಹಿಸಿ 2000 ಏ. 29ರಂದು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ದೊಂಬಿ ಉಂಟಾಗಿ ತಹಸೀಲ್ದಾರ್ ಕಚೇರಿ ಅಭಿಲೇಖಾಲಯದಲ್ಲಿರಿಸಿದ್ದ ಸವಣೂರು ಹೋಬಳಿಯ 33 ಗ್ರಾಮಗಳ ಭೂ ದಾಖಲೆಗಳು ಸುಟ್ಟುಹೋಗಿದ್ದವು. ಇದರಿಂದಾಗಿ ಜಮೀನುಗಳ ಉತಾರದಲ್ಲಿ ನಮೂದಿಸಲಾದ ಸರ್ಕಾರ ಹಾಗೂ 15 ವರ್ಷ ಪರಾಧೀನ ಮಾಡಬಾರದು ಎಂಬ ಷರತ್ತುಗಳನ್ನು ಕಡಿಮೆ ಮಾಡಲು ಸಲ್ಲಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ರೈತರಿಗೆ ಅನನುಕೂಲವಾಗಿತ್ತು. ಈ ಕುರಿತು ಸಾರ್ವಜನಿಕರು, ಜನಪ್ರತಿನಿಧಿಗಳು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು.

    ಏಕವ್ಯಕ್ತಿಯ ಕೋರಿಕೆ ಮೇರೆಗೆ ನಿಯಮಾನುಸಾರ ಲಭ್ಯವಿರುವ ದಾಖಲೆಗಳನ್ನು ಪಡೆದು ಹೊಸ ದಾಖಲೆಗಳನ್ನು ಸೃಜನೆಗೆ ಸವಣೂರ ತಹಸೀಲ್ದಾರ್​ಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ತಹಸೀಲ್ದಾರ್​ಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಹಾಗೂ ರೈತರಿಂದ ಮನವಿ ಸ್ವೀಕರಿಸಿ ಅವರ ಬಳಿಯಿರುವ ಭೂಮಿಯ ಯಾವುದಾದರೂ ದಾಖಲೆಗಳನ್ನು ಪಡೆದು ಮರು ಸೃಷ್ಟಿಸಲು ತ್ವರಿತವಾಗಿ ಕ್ರಮಕೈಗೊಳ್ಳಬೇಕು.

    | ಎಸ್. ಯೋಗೇಶ್ವರ, ಎಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts