More

    ಸೊಳ್ಳೆ ಕಡಿತದಿಂದ ರಕ್ಷಣೆ ಹೊಂದಿ ಅರಿವು ಕಾರ್ಯಾಗಾರದಲ್ಲಿ ಡಾ. ಕೆ. ಶಶಿಧರ್ ಸಲಹೆ

    ರಾಮನಗರ
    ಸೊಳ್ಳೆ ಕಡಿತದಿಂದ ಬರುವ ರೋಗಗಳಿಗೆ ತಕ್ಷಣವೇ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗುವ ಜತೆಗೆ ಸೊಳ್ಳೆ ಕಡಿತದಿಂದ ರಕ್ಷಣೆ ಪಡೆದುಕೊಳ್ಳಬೇಕು. ಈ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಸಹಕರಿಸುವಂತೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ.ಶಶಿಧರ್ ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಇವರ ಸಂಯುಕ್ತ ಆಶ್ರಯದಲ್ಲಿ ರಾಮನಗರ ಟೌನಿನ ಅರ್ಚಕರಹಳ್ಳಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮದಡಿಯಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಮತ್ತು ನಿಯಂತ್ರಣ ಕುರಿತು ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಅವರು ಮಾತನಾಡಿ, ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಬೇಕಾದರೆ ನೀರು ಶೇಖರಣೆ ಪರಿಕರಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಮಣ್ಣಿನ ಮಡಿಕೆ ಇವುಗಳನ್ನು ವಾರಕೊಮ್ಮೆ ಸ್ವಚ್ಛಗೊಳಿಸಬೇಕು ಹಾಗೂ ಈಗಾಗಲೇ ಮಳೆ ಪ್ರಾರಂಭವಾಗಿದ್ದು, ಟೈರು, ಎಳನೀರಿನ ಚಿಪ್ಪು, ಒಡೆದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಅನುಪಯುಕ್ತ ಒರಳುಕಲ್ಲು ಇವುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತವೆ. ಈ ವಸ್ತುಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು.

    ಮೈತುಂಬ ಬಟ್ಟೆ ಧರಿಸುವುದು, ಸಂಜೆ ವೇಳೆ ಬೇವಿನ ಸೊಪ್ಪು ಅಥವಾ ಸಾಂಬ್ರಾಣಿ ಧೂಪ ಹಾಕುವುದು ಮತ್ತು ಕಿಟಕಿ ಬಾಗಿಲುಗಳನ್ನು ಮುಚ್ಚುವುದು, ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು. ಒಟ್ಟಾರೆ ಸೊಳ್ಳೆ ಉತ್ಪತ್ತಿ ನಿಯಂತ್ರಿಸುವುದರ ಜತೆಗೆ ಸೊಳ್ಳೆ ಕಡಿತದಿಂದ ರಕ್ಷಣೆ ಪಡೆದಾಗ ಮಾತ್ರ ರೋಗ ಹರಡದಂತೆ ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.

    ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿನಯ್ ಕುಮಾರ್ ಮಾತನಾಡಿದರು. ಪ್ರಾಂಶುಪಾಲ ಬಾಲರಾಜು, ಜಿಲ್ಲಾ ಲ್ಯಾಬ್ ನೋಡಲ್ ಅಧಿಕಾರಿ ಶಿವಪ್ರಕಾಶ್, ಪ್ರಾಧ್ಯಾಪಕರಾದ ಡಾ.ಪರಮೇಶ್ವರಪ್ಪ, ಶಾರದ, ರಿಜಿಸ್ಟ್ರಾರ್ ನಾಗರಾಜು, ತರಬೇತಿ ಸಂಯೋಜನಾಧಿಕಾರಿ ಉಮೇಶ್, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts