More

    ‘ಗೃಹಲಕ್ಷ್ಮಿ’ಗೆ ತಾಂತ್ರಿಕ ಸಮಸ್ಯೆ ಎಲ್ಲವೂ ಸರಿಯಿದ್ದರೂ ನೋಂದಣಿ ಆಗುತ್ತಿಲ್ಲ ಈಗ ಸಮಸ್ಯೆ ಎಲ್ಲಿದೆ ಎನ್ನುವ ಗೊಂದಲ ಜನರದ್ದು

    ವಿಭೂತಿಕೆರೆ ಶಿವಲಿಂಗಯ್ಯರಾಮನಗರ

    ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಪಡಿತರ ಚೀಟಿಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ನೋಂದಣಿಗೆ ಜನ ಪರದಾಡುವಂತಾಗಿದೆ. ಸರ್ಕಾರ ತಾಂತ್ರಿಕ ಸಮಸ್ಯೆ ಬಗೆಹರಿಸಿ ಗೃಹಲಕ್ಷ್ಮೀ ಯೋಜನೆಯಲ್ಲಿ ಯಾವುದೇ ಸಮಸ್ಯೆ ಬಾರದಂತೆ ನೋಂದಣಿ ಮಾಡಲು ಕ್ರಮ ಕೈಗೊಳ್ಳಬೇಕಿದೆ ಎಂಬುದು ನಾಗರಿಕರ ಒತ್ತಾಯವಾಗಿದೆ.

    ಆಹಾರ ಪಡಿತರ ಕಾರ್ಡ್ ಚಾಲ್ತಿಯಲ್ಲಿದೆ, ಪಡಿತರ ಬರುತ್ತಿದೆ. ಆಧಾರ್ ಜೋಡಣೆ ಆಗಿದೆ, ಕುಟುಂಬ ಮುಖ್ಯಸ್ಥರ ಹೆಸರೂ ನೋಂದಣಿ ಆಗಿದೆ. ಆದರೂ ಕೆಲವರಿಗೆ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದ್ದು ಜನರು ಕಚೇರಿಯಿಂದ ಕಚೇರಿಗೆ ಪರದಾಡುವಂತಾಗಿದೆ.

    ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ನೋಂದಣಿ ಭರದಿಂದ ಸಾಗಿದೆ. ಗ್ರಾಪಂಗಳ ಗ್ರಾಮ 1, ಬಾಪೂಜಿ ಸೇವಾ ಕೇಂದ್ರ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಸಂದರ್ಭದಲ್ಲಿ ಕೆಲವರಿಗೆ ಆಹಾರ ಇಲಾಖೆ ಸಂಪರ್ಕಿಸಿ ಎನ್ನುವ ಸಂದೇಶ ಮತ್ತೆ ಕೆಲವರಿಗೆ ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ ಸಂಖ್ಯೆಯನ್ನು ಸರಿಯಾಗಿ ಜೋಡಣೆ ಮಾಡಲಾಗಿಲ್ಲ, ಆದ್ದರಿಂದ ಪಾವತಿಗೆ ಪರಿಗಣಿಸಲಾಗಿಲ್ಲ ಎಂಬ ಸಂದೇಶ ಬರುತ್ತಿವೆ. ಈ ಸಂದೇಶ ಹೊತ್ತು ಆಹಾರ ಇಲಾಖೆಗೆ ಜನರು ಹೋದರೆ ಅಲ್ಲಿ ನಿಮ್ಮ ಆಧಾರ್, ಪಡಿತರ ಕಾರ್ಡ್ ಎಲ್ಲವೂ ಸರಿಯಿದೆ ಎನ್ನುವ ಮಾಹಿತಿ ಸಿಗುತ್ತದೆ. ಸಮಸ್ಯೆ ಎಲ್ಲಿದೆ ಎನ್ನುವ ಗೊಂದಲ ಈಗ ಜನರದ್ದಾಗಿದೆ.

    ಎಲ್ಲವೂ ಸರಿಯಿದೆ
    ಆಹಾರ ಮತ್ತು ಪಡಿತರ ಇಲಾಖೆ ನಮ್ಮಲ್ಲಿ ಸಮಸ್ಯೆ ಇಲ್ಲ. ಜನರು ಸಮಸ್ಯೆ ಕೇಳಿ ಬಂದಾಗ ಎಲ್ಲವನ್ನೂ ಪರೀಕ್ಷಿಸಲಾಗುತ್ತಿದೆ. ಪ್ರತಿದಿನ ತಾಲೂಕು ಕೇಂದ್ರಗಳಲ್ಲಿ 500ರಿಂದ 600 ಜನ ಸಮಸ್ಯೆ ಎಂದು ಬರುತ್ತಿದ್ದಾರೆ. ಬಹುಪಾಲು ಸಮಸ್ಯೆ ಕಂಡುಬರುತ್ತಿಲ್ಲ. ನೋಂದಣಿ ಸಮಯದಲ್ಲಿ ಸರ್ವರ್ ಸಮಸ್ಯೆಯಿಂದ ತೊಂದರೆ ಉಂಟಾಗಿರಬಹುದು. ಇಲ್ಲವೇ ಯಜಮಾನಿಯ ಗಂಡ ಆದಾಯ ತೆರಿಗೆ, ಜಿಎಸ್‌ಟಿ ಪಾವತಿಸುತ್ತಿದ್ದರೆ ಸಮಸ್ಯೆ ಎದುರಾಗಬಹುದು.

    ಈಗಾಗಲೇ ಪಡಿತರ ವಿತರಣೆಯ ಹಣ ಹಾಕಲಾಗಿದೆ. ಜಿಲ್ಲೆಯಲ್ಲಿ 6 ಸಾವಿರ ಜನರ ಬ್ಯಾಂಕ್ ಅಕೌಂಟ್ ಇರಲಿಲ್ಲ. ಅಂಥಹವರಿಗೆ ಅಂಚೆ ಕಚೇರಿಯಲ್ಲಿ ಖಾತೆ ಮಾಡಲು ತಿಳಿಸಲಾಗಿದೆ. ಜಿಲ್ಲೆಯಲ್ಲಿ 2.60 ಬಿಪಿಎಲ್, 17 ಸಾವಿರ ಎಪಿಎಲ್ ಕಾರ್ಡ್‌ಗಳಿವೆ. ಈಗಾಗಲೇ ಬಹುಪಾಲು ಆ ಪ್ರಕ್ರಿಯೆಯೂ ಮುಗಿದಿದೆ. ಜಿಲ್ಲೆಯಲ್ಲಿ 2,36,917 ಜನಕ್ಕೆ ನೇರವಾಗಿ ಪಡಿತರ ಹಣ ಹಾಕಲಾಗಿದೆ. ಆಧಾರ್ ಲಿಂಕ್, ಇತರ ಕಾರಣಗಳಿಂದ 33 ಸಾವಿರ ಜನಕ್ಕೆ ಹಣ ಹೋಗಿಲ್ಲ. ಇಲಾಖೆ ಹಂತದಲ್ಲಿ ನೋಂದಣಿಗೆ ಸಮಸ್ಯೆ ಇಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    ಜನರು ಹೇಳುವ ಸಮಸ್ಯೆ ಪರಿಶೀಲಿಸಿದಾಗ ಕಂಡುಬರುತ್ತಿಲ್ಲ. ಕೆಲವಷ್ಟೇ ಸಮಸ್ಯೆ ಕಂಡುಬರುತ್ತಿದೆ ಅದನ್ನು ಅಲ್ಲಿಯೇ ಸರಿಪಡಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ನೋಂದಣಿ ಸಮಯದಲ್ಲಿ ತಾಂತ್ರಿಕ ಅಡೆತಡೆಯಿಂದ ಸಮಸ್ಯೆ ಉಂಟಾಗಿರಬಹುದು. ಇಲಾಖೆ ತಾಂತ್ರಿಕ ವ್ಯವಸ್ಥೆಯಲ್ಲಿ ದೋಷವಿಲ್ಲ. ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಮತ್ತೆ ಸಮಸ್ಯೆ ಕಂಡುಬಂದರೆ ಜನರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.
    ಸಿ.ಆರ್.ರಮ್ಯ, ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಇಲಾಖೆ, ರಾಮನಗರ

    ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳಿ ಎನ್ನುತ್ತಿದೆ. ಆದರೆ ನೋಂದಾಯಿಸಲು ಹೋದರೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಆಹಾರ ಇಲಾಖೆಯಲ್ಲಿ ಪರಿಶೀಲನೆ ಮಾಡಿಸಿದರೆ ಸಮಸ್ಯೆ ಎನ್ನುತ್ತಾರೆ. ಸಮಸ್ಯೆ ಎಲ್ಲಿ ಉಂಟಾಗಿದೆ ಎನ್ನುವುದು ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರ ಕೂಡಲೇ ಜನರಿಗೆ ಆಗುತ್ತಿರುವ ಸಮಸ್ಯೆ ಸರಿಪಡಿಸಿ, ಸುಗಮ ನೋಂದಣಿಗೆ ಕ್ರಮ ಕೈಗೊಳ್ಳಬೇಕು.
    ನಾಗರತ್ನ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts