More

    ಮರ ಬಿದ್ದು ಮನೆಗೆ ಹಾನಿ

    ಪುತ್ತೂರು/ಮಂಗಳೂರು/ಉಡುಪಿ: ಪುತ್ತೂರಿನ ತೆಂಕಿಲ ಕೊಟ್ಟಿಬೆಟ್ಟು ಎಂಬಲ್ಲಿ ಸೋಮವಾರ ರಾತ್ರಿ ಮರವೊಂದು ಬುಡ ಸಹಿತ ಉರುಳಿ ಬಿದ್ದು ಅಪಾರ ಹಾನಿಯಾಗಿದೆ.

    ಪುರುಷೋತ್ತಮ ನಾಕ್ ಎಂಬುವರ ಮನೆ ಹಿಂಭಾಗದಲ್ಲಿದ್ದ ಮಾವಿನ ಮರ ಬಿದ್ದು ದೈವದ ಕಟ್ಟೆಯ ಆವರಣ ಗೋಡೆ, ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ಮನೆಯ ಮಾಡು, ಅಂಗಳಕ್ಕೆ ಅಳವಡಿಸಲಾಗಿದ್ದ ಶೀಟ್‌ನ ಛಾವಣಿಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ರವಿ, ಗ್ರಾಮಕರಣಿಕ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ದ.ಕ ಜಿಲ್ಲೆಯಲ್ಲಿ ಸೋಮವಾರ ರಾತ್ರಿಯವರೆಗೂ ಉತ್ತಮ ಮಳೆಯಾಗಿತ್ತು, ಮಂಗಳವಾರ ಮತ್ತೆ ಕಡಿಮೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ, ಮಂಗಳವಾರ ಮುಂಜಾನೆ ಉತ್ತಮ ಮಳೆಯಾಗಿದೆ. ಮಧ್ಯಾಹ್ನ ಬಳಿಕ ಕಡಿಮೆಯಾಗಿದೆ.

    ಮಂಗಳವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಜ್ಯದಲ್ಲೇ ಅತ್ಯಧಿಕ 90 ಮಿ.ಮೀ. ಮಳೆಯಾಗಿದೆ. ಉಳಿದಂತೆ ಕಾರ್ಕಳ 70, ಉಡುಪಿ 68, ಮಂಗಳೂರು 61.7, ಸುಳ್ಯ 55.7, ಕುಂದಾಪುರ-ಬೆಳ್ತಂಗಡಿ 38, ಪುತ್ತೂರು 37, ಬಂಟ್ವಾಳ 32.7 ಮಿ.ಮೀ. ಮಳೆ ದಾಖಲಾಗಿದೆ.

    ಸಮುದ್ರ ಅಬ್ಬರ ಹೆಚ್ಚಳ: ಸಮುದ್ರ ಪ್ರಕ್ಷುಬ್ಧವಾಗಿದ್ದು, ಅಲೆಗಳ ಭೋರ್ಗರೆತ ಹೆಚ್ಚಿದೆ. ಬೃಹತ್‌ಗಾತ್ರದಲ್ಲಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಗಂಗೊಳ್ಳಿ ಕಂಚುಗೋಡು ಸನ್ಯಾಸಿಬಲೆ ಪರಿಸರದಲ್ಲಿ ಮಂಗಳವಾರ ಕಡಲ್ಕೊರೆತ ತೀವ್ರಗೊಂಡಿದೆ. ತೀರ ಪ್ರದೇಶದ ಮರಗಳು ಒಂದೊಂದಾಗಿ ಕಡಲ ಒಡಲು ಸೇರುತ್ತಿದ್ದು, ಐದಾರು ಮನೆಗಳು ಅಪಾಯದಲ್ಲಿವೆ. ದೋಣಿಗಳು ಸಮುದ್ರಪಾಲಾಗುವ ಸಾಧ್ಯತೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts