More

    ವೈದ್ಯರ ವೇತನ ಪರಿಷ್ಕರಣೆಗೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪಟ್ಟು

    ತುಮಕೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸರ್ಕಾರಿ ವೈದ್ಯರ ವೇತನ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆಗ್ರಹಿಸಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ತುಮಕೂರು ಶಾಖೆ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಆರ್.ರಮೇಶ್ ಮತ್ತು ಕಾರ್ಯದರ್ಶಿ ಡಾ.ಕೆ.ಆರ್.ಶ್ರೀನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.

    ಬೇಡಿಕೆಗಳನ್ನು ಮನವಿ ರೂಪದಲ್ಲಿ ನೀಡಲಾಗಿದ್ದು, ಸೆ.21ರವರೆಗೆ ಸರ್ಕಾರಿ ವೈದ್ಯರು, ಕರೊನಾ, ರಾಷ್ಟ್ರೀಯ ಕಾರ್ಯಕ್ರಮಗಳು ಸೇರಿ ಎಲ್ಲ ಕೆಲಸಗಳನ್ನು ಎಂದಿನಂತೆ ನಿರ್ವಹಿಸಿದರೂ ಸರ್ಕಾರಕ್ಕೆ ಕರೊನಾ ಅಂಕಿ-ಅಂಶ, ದಾಖಲಾತಿಗಳನ್ನು ಸಲ್ಲಿಸದಿರಲು ನಿರ್ಧರಿಸಲಾಗಿದೆ. ಒಂದು ವೇಳೆ 21ರ ನಂತರವೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದೆ ಸಂಭವಿಸುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಜಿಲ್ಲಾಧ್ಯಕ್ಷ ಡಾ.ಕೆ.ಆರ್.ರಮೇಶ್ ಎಚ್ಚರಿಸಿದರು. ಸರ್ಕಾರಿ ವೈದ್ಯರ ವೇತನ ಪರಿಷ್ಕರಣೆ ಮಾಡಬೇಕೆಂಬುದು ವೈದ್ಯರ ಹಲವು ದಿನದ ಬೇಡಿಕೆಯಾಗಿದ್ದರೂ 2009 ರಿಂದ ಸರ್ಕಾರ ಕೇವಲ ಪ್ರೋತ್ಸಾಹ ಧನ ನೀಡುತ್ತಾ ಬಂದಿದೆ.

    6 ತಿಂಗಳ ಹಿಂದೆ ಸರ್ಕಾರಿ ವೈದ್ಯರಿಗೆ ಸಿಜಿಎಚ್‌ಎಸ್ ವೇತನ ನೀಡುವ ಆಶ್ವಾಸನೆ ಕೂಡ ಈಡೇರಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿ ಮೂಲಕ ಮನವಿ ನೀಡಿ ಸರ್ಕಾರವನ್ನು ಎಚ್ಚೆತ್ತಿಸುವ ಕೆಲಸ ಮಾಡಲಾಗುತ್ತಿದ್ದು ಒಂದು ವೇಳೆ ಸೆ.21ರೊಳಗೆ ರಾಜ್ಯ ಸರ್ಕಾರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸದಿದ್ದರೆ, ಕೇಂದ್ರ ಸಂಘ ತೆಗೆದುಕೊಳ್ಳುವ ತೀರ್ಮಾನಕ್ಕೆ ಜಿಲ್ಲಾ ಸಂಘ ಬದ್ಧವಾಗಿ ಕೆಲಸ ಮಾಡಲಿದೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಕೆ.ಆರ್.ಶ್ರೀನಾಥ್ ತಿಳಿಸಿದರು. ಡಾ.ದಿನೇಶ್, ಡಾ.ನಾಗಭೂಷಣ್, ಡಾ.ಬಿ.ಎಂ.ಚಂದ್ರಶೇಖರ್, ಡಾ.ಬಿಂದುಮಾಧವ್, ಡಾ.ನಾರಾಯಣಗೌಡ ಇದ್ದರು.

    ಕರೊನಾ ಸಂದರ್ಭದಲ್ಲಿ ನಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದು, ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಬೇಡಿಕೆ ಈಡೇರಿಸುವವರೆಗೆ ಜಿಪಂ ಸಿಇಒ, ಡಿಎಚ್‌ಒ ಕರೆಯುವ ಯಾವುದೇ ವಿಡಿಯೋ ಸಭೆಗಳಾಗಲೀ, ಜೂಮ್ ಆ್ಯಪ್ ಮೀಟಿಂಗ್‌ಗಾಗಲಿ, ಸಭೆಗಳಿಗಾಗಲಿ ಭಾಗವಹಿಸುವುದಿಲ್ಲ. ಈ ಸಭೆಗೆ ಯಾವುದೇ ದಾಖಲೆಗಳನ್ನು, ಮಾಹಿತಿಗಳನ್ನು ಸಹ ಒದಗಿಸುವುದಿಲ್ಲ.
    ಡಾ.ಕೆ.ಆರ್.ರಮೇಶ್ ಜಿಲ್ಲಾಧ್ಯಕ್ಷ, ಸರ್ಕಾರಿ ವೈದ್ಯಾಧಿಕಾರಿಗಳ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts