More

    ಫೆ.20ರಂದು ರಾಷ್ಟ್ರೀಯ ಹೆದ್ದಾರಿ ಬಂದ್: ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾಹಿತಿ

    ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಿಕೊಡುವುದಾಗಿ ಹೇಳಿ ಕ್ರಮ ವಹಿಸದ ಹಿನ್ನೆಲೆಯಲ್ಲಿ ಮೇಲ್ಸೆತುವೆ ಮಾಡಿಕೊಡುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
    ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಹನಕೆರೆ ಗ್ರಾಮದಲ್ಲಿ ಮೇಲ್ಸೆತುವೆ ನಿರ್ಮಾಣಕ್ಕೆ ಒತ್ತಾಯಿಸಿ ಫೆ.20ರಂದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಅಂಡರ್‌ಪಾಸ್ ನಿರ್ಮಾಣ ಮಾಡುವಂತೆ ಹಲವು ಬಾರಿ ಒತ್ತಾಯ ಮಾಡಿ ಪ್ರತಿಭಟನೆ ಮಾಡಲಾಗಿದೆ. ಆದರೆ ಗ್ರಾಮದಿಂದ ಸುಮಾರು 600 ಮೀಟರ್ ದೂರದಲ್ಲಿ ನಿರ್ಮಾಣ ಮಾಡಿರುವುದರಿಂದ 25ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ದಿನನಿತ್ಯದ ಕೆಲಸಕ್ಕೆ ಹೋಗಲು ಬಳಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದಾಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತಾದರೂ ಸರಿಪಡಿಸಲಿಲ್ಲ. ಮಾತ್ರವಲ್ಲದೆ ಕೆಲವೇ ದಿನದಲ್ಲಿ ಹೆದ್ದಾರಿ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಹನಕೆರೆ ಸೇರಿದಂತೆ ಅಕ್ಕಪಕ್ಕದ ಗ್ರಾಮಕ್ಕೆ ಹೋಗುವವರು ಅಂಡರ್‌ಪಾಸ್ ಬಳಿಗೆ ಹೋಗಿ ಬರಬೇಕು. ಈ ಸಮಯದಲ್ಲಿ ಸರಗಳ್ಳತನ ನಡೆಯುವ ಆತಂಕ ಎದುರಾಗಿದೆ. ಇತ್ತೀಚೆಗೆ ಮಲ್ಲಯ್ಯನ ಬೋರೆ ಸಮೀಪ ದರೋಡೆ ನಡೆದಿತ್ತು. ಇದರಿಂದಾಗಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಜಾನುವಾರು, ಎತ್ತಿನಗಾಡಿಗಳೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ. ಸುಮಾರು 20 ಗ್ರಾಮದ ಜನರು ಭಾಗವಹಿಸಲಿದ್ದಾರೆ. ಸಮಸ್ಯೆ ಪರಿಹರಿಸುವವರೆಗೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅಂದಿನ ಬೆಳವಣಿಗೆ ಗಮನಿಸಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ವಿವರಿಸಿದರು.
    ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದೇಗೌಡ ಮಾತನಾಡಿ, ಇದು ಪಕ್ಷಾತೀತವಾಗಿ ನಡೆಯುತ್ತಿರುವ ಪ್ರತಿಭಟನೆ. ನಮಗೆ ಸಮಸ್ಯೆ ಬಗೆಹರಿಸಬೇಕು. ಮೇಲ್ಸೆತುವೆ ಪ್ರಾರಂಭಿಸುವವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
    ಸ್ಥಳೀಯರಾದ ಮಹೇಶ್, ರವಿ, ಸತೀಶ್, ಶಶಿ, ನಾಗರಾಜು, ವಿಶ್ವನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts