More

    ಚುರುಕಾದ ಪೂರ್ವಮುಂಗಾರು: ದ.ಕ. ಜಿಲ್ಲೆಯಲ್ಲಿ ಗುಡುಗು ಸಹಿತ ಗಾಳಿಮಳೆ

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ವಮುಂಗಾರು ಮಳೆ ಪ್ರತಿನಿತ್ಯ ಎಂಬಂತೆ ಅಲ್ಲಲ್ಲಿ ಗುಡುಗು, ಮಿಂಚು-ಗಾಳಿ ಸಹಿತ ಸುರಿಯುತ್ತಿದೆ. ಸೋಮವಾರವೂ ಜಿಲ್ಲೆಯ ಹಲವೆಡೆ ಕೆಲಹೊತ್ತು ಭಾರಿ ಮಳೆಯಾಗಿದೆ.

    ಮಂಗಳೂರು ನಗರ ಮತ್ತು ಹೊರವಲಯದಲ್ಲಿ ರಾತ್ರಿ ವೇಳೆ ಗುಡುಗು-ಮಿಂಚು ಸಹಿತ ಭಾರಿ ಗಾಳಿ ಮಳೆಯಾಗಿದೆ. ರಾತ್ರಿ 9 ಗಂಟೆ ವೇಳೆ ಆರಂಭವಾಗಿ ಕೆಲ ಹೊತ್ತು ಸುರಿದಿದೆ.

    ಮೂಡುಬಿದಿರೆ ತಾಲೂಕಿನ ದರೆಗುಡ್ಡೆ, ನೆಲ್ಲಿಕಾರು, ವಾಲ್ಪಾಡಿ, ಶಿರ್ತಾಡಿ, ಪುತ್ತೂರು, ಸುಳ್ಯದ ಅಜ್ಜಾವರ ಮೊದಲಾದೆಡೆ ಮಧ್ಯಾಹ್ನ ಬಳಿಕ ರಾತ್ರಿಯ ನಡುವೆ ಗುಡುಗು ಸಹಿತ ಮಳೆ ಸುರಿದಿದೆ. ಕಡಬ ತಾಲೂಕಿನ ಕೊಯಿಲ, ರಾಮಕುಂಜ, ಚಾರ್ವಾಕ, ನೂಜಿಬಾಳ್ತಿಲ, ಕೊಡಿಂಬಾಳ ಮೊದಲಾದ ಗ್ರಾಮಾಂತರ ಪ್ರದೇಶದಲ್ಲಿ ಸಾಯಂಕಾಲ ಗುಡುಗು ಗಾಳಿ ಸಹಿತ ನಿರಂತರ ಎರಡು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದೆ.

    ನೂಜಿ ಬಾಳ್ತಿಲದಲ್ಲಿ ಅತ್ಯಧಿಕ 28 ಮಿ.ಮೀ, ಸವಣೂರು 26.5, ಕಡ್ಯಕೋಣಾಜೆ 22.5 ಮಿ.ಮೀ. ಮಳೆ ಸುರಿದಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿ ತಿಳಿಸಿದೆ.
    ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 36.3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 26.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರಾವಳಿಯ ವಿವಿಧೆಡೆ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ ಜಿಲ್ಲೆಯಲ್ಲಿ ಮಳೆಯ ವಾತಾವರಣ ಮುಂದುವರಿದಿದ್ದು, ಸಾಯಂಕಾಲ ಬಳಿಕ ಹಲವೆಡೆ ಉತ್ತಮ ಮಳೆಯಾಗಿದೆ. ಉಡುಪಿ ನಗರದ ಸುತ್ತಮುತ್ತ ಮೋಡಕವಿದ ವಾತವರಣದೊಂದಿಗೆ ಹನಿಹನಿ ಮಳೆಯಾಗಿದೆ. ಪಡುಬಿದ್ರಿ, ಬೆಳ್ಮಣ್ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ.

    ಹಟ್ಟಿ ಮೇಲೆ ಮರ ಬಿದ್ದು ಹಾನಿ: ಬಂಟ್ವಾಳ: ಪರಿಸರದಲ್ಲಿ ಸುರಿದ ಮಳೆಯೊಂದಿಗೆ ಗಾಳಿ ಬೀಸಿದ ಪರಿಣಾಮ ಕೆಲವೆಡೆ ವಿದ್ಯುತ್ ಕಂಬಗಳು ಉರುಳಿವೆ. ಬೆಂಜನಪದವಿನಲ್ಲಿ ಕಂಬ ತುಂಡಾಗಿದೆ. ಹೈಟೆನ್ಷನ್ ಲೈನ್ ಮೇಲೆ ಮರ ಬಿದ್ದ ಪರಿಣಾಮ ಬಂಟ್ವಾಳ, ಬಿ.ಸಿ.ರೋಡ್, ಮೆಲ್ಕಾರ್, ಸಜೀಪ ಸಹಿತ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ನರಿಕೊಂಬು ಗ್ರಾಮದ ಅಂತರ ಎಂಬಲ್ಲಿ ಹಟ್ಟಿ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts