More

    ಶ್ವೇತಪತ್ರ ಬಿಡುಗಡೆ ಮಾಡಿದ ಪೊನ್ನಣ್ಣ

    ಮಡಿಕೇರಿ:

    ವಿರಾಜಪೇಟೆ ಕ್ಷೇತ್ರಕ್ಕೆ ಈ ತನಕ ಒಟ್ಟು ೨೫೧.೯೭ ಕೋಟಿ ರೂ. ಅನುದಾನ ತಂದಿದ್ದು, ಶಾಸಕನಾಗಿ ೧೦ ತಿಂಗಳಲ್ಲಿ ಮಾಡಿದ ಕೆಲಸಗಳ ಬಗ್ಗೆ ತನಗೆ ಸಾರ್ಥಕತೆ ಇರುವುದಾಗಿ ವಿರಾಜಪೇಟೆ ಶಾಸಕರೂ ಆಗಿರುವ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು. ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಡಿಕೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ವೇಳೆ ಶ್ವೇತಪತ್ರ ಬಿಡುಗಡೆ ಮಾಡಿ ಮಾತನಾಡಿದರು.

    ’ನಾನು ಯಾವ ಕಾಮಗಾರಿ ಪೂರ್ಣಗೊಳಿಸಿದರೂ ಬಿಜೆಪಿಯವರು ಅದನ್ನು ನಾವು ತಂದಿದ್ದು ಎಂದು ಹೇಳುತ್ತಾರೆ. ಹಾಗಾಗಿ ದಾಖಲೆಗಳ ಮೂಲಕ ಉತ್ತರ ನೀಡಲಾಗಿದೆ. ಹಿಂದೆ ಇದ್ದವರು ಚುನಾವಣೆಗೂ ಮೊದಲು ಕಾರಿನಲ್ಲಿ ಗುದ್ದಲಿ ಇಟ್ಟುಕೊಂಡೇ ತಿರುಗಾಡುತ್ತಿದ್ದರು. ಅನುದಾನ ಬಿಡುಗಡೆ ಆಗದಿದ್ದರೂ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡುತ್ತಿದ್ದರು. ಆದರೆ ನಾನು ಆನುದಾನ ಬಿಡುಗಡೆ ಆಗಿ ಕಾಮಗಾರಿ ಶುರುವಾಗುವಾಗ ಗುದ್ದಲಿ ಪೂಜೆ ಮಾಡಿ, ಅವಧಿಗೂ ಮೊದಲೇ ಮುಗಿಸಲು ಪ್ರಯತ್ನಿಸುತ್ತೇನೆ. ಗೋಣಿಕೊಪ್ಪ ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರ ಏನಾದರೂ ಕ್ರಮ ತೆಗೆದುಕೊಂಡಿದ್ದರೆ ನಾನು ರಾಜಕೀಯವೇ ಬಿಟ್ಟುಬಿಡುತ್ತೇನೆ,’ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

    ಬುಡಕಟ್ಟು ಸಮುದಾಯದವರಿಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ೨೨.೬೯ ಕೋಟಿ ರೂ., ಬಿಸಿಎಂ ಇಲಾಖೆಗೆ ೧೨ ಕೋಟಿ ರೂ., ನಗರಾಭಿವೃದ್ಧಿ ಇಲಾಖೆಗೆ ೭೪.೨೮ ಕೋಟಿ ರೂ., ಸಣ್ಣ ನೀರಾವರಿ ಇಲಾಖೆ ೧೩ ಕೋಟಿ ರೂ., ಆರ್‌ಡಿಪಿಆರ್ ಮತ್ತು ಕೆಆರ್‌ಡಿಎಲ್ ೨೯.೨೫ ಕೋಟಿ ರೂ., ಕ್ರೀಡಾ ಇಲಾಖೆ ೨.೦೫ ಕೋಟಿ ರೂ., ಪ್ರವಾಸೋದ್ಯಮ ಇಲಾಖೆ ೧ ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆ ೬.೫೫ ಕೋಟಿ ರೂ., ಅಲ್ಪಸಂಖ್ಯಾತ ಇಲಾಖೆಗೆ ೮.೭೦ ಕೋಟಿ ರೂ., ಶಾಸಕರ ಅನುದಾನ ೧.೭೦ ಕೋಟಿ ರೂ., ಲೋಕೋಪಯೋಗಿ ಇಲಾಖೆ ೬೯.೪೮ ಕೋಟಿ ರೂ., ಮಳೆ ಹಾನಿ ಕಾಮಗಾರಿ ೪.೯೬ ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ೬೦ ಲಕ್ಷ ರೂ., ಕಾವೇರಿ ನೀರಾವರಿ ನಿಗಮ ೨.೯೦ ಕೋಟಿ ರೂ., ಮುಜರಾಯಿ ಇಲಾಖೆ ೨.೮೦ ಕೋಟಿ ರೂ., ಸರ್ವೆ ಇಲಾಖೆ ೧.೭೧ ಕೋಟಿ ರೂ., ಅನುದಾನ ಕಳೆದ ೧೦ ತಿಂಗಳಲ್ಲಿ ವಿರಾಜಪೇಟೆ ಕ್ಷೇತ್ರಕ್ಕೆ ತರಲಾಗಿದೆ.

    ೯೪ ಸಿಸಿ ಹಕ್ಕುಪತ್ರ, ನಮೂನೆ ೫೭ ಜಮೀನು ಮಂಜೂರಾತಿ, ೯೪ಸಿ ಹಕ್ಕುಪತ್ರ, ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿಯನ್ನು ಅರ್ಹ ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸಲಾಗಿದೆ. ವನ್ಯಜೀವಿಗಳಿಂದ ಅನಾಹುತ ಸಂಭವಿಸಿದ ಪ್ರಕರಣಗಳಲ್ಲಿ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ. ಸಮುದಾಯ ಹಕ್ಕುಪತ್ರಗಳನ್ನೂ ನೀಡಲಾಗಿದೆ. ಭಾಗಮಂಡ ತ್ರಿವೇಣಿ ಸಂಗಮದ ಚಿತ್ರಣ ಬದಲು ಮಾಡಲಾಗುತ್ತಿದೆ. ಮೇಲ್ಸೇತುವೆ ಕಾಮಗಾರಿ ಮುಗಿದಿದೆ. ಚುನಾವಣೆ ಚುನಾವಣೆ ಮುಗಿದ ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ.
    ಜಿಲ್ಲೆಗೆ ೬ ವಿದ್ಯುತ್ ಉಪಕೇಂದ್ರ ಮಂಜೂರಾಗಿದೆ. ಈ ಉಪಕೇಂದ್ರಗಳು ಕಾರ್ಯಾರಂಭ ಮಾಡಿದರೆ ಕೊಡಗಿನ ವಿದ್ಯುತ್ ಸಮಸ್ಯೆ ಬಹುತೇಕ ಪರಿಹಾರ ಆಗಲಿದೆ. ವನ್ಯಜೀವಿ ಉತ್ಪನ್ನಗಳ ವಿಷಯದಲ್ಲಿ ಕೊಡಗಿನ ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಜನತೆಗೋಸ್ಕರ ಸರ್ಕಾರದ ವಿರುದ್ಧ ನಿಲ್ಲಬೇಕಾಯ್ತು. ಇಷ್ಟೆಲ್ಲಾ ಮಾಡಿದರೂ ಬಿಜೆಪಿಗೆ ಸಮಧಾನ ಇಲ್ಲ. ನಾನಿಲ್ಲದಿರುವಾಗ ನನ್ನ ಮನೆಗೆ ಬಂದು ಪ್ರಶ್ನೆ ಮಾಡುತ್ತಾರೆ. ಅಭಿವೃದ್ಧಿಯಲ್ಲಿ ರಾಜಕಾರಣ ಬೇಡ. ಜನರಿಗಾಗಿ ಕೆಲಸ ಮಾಡಬೇಕು. ನನ್ನ ಕೆಲಸಗಳನ್ನು ಅವರು ಸ್ವಾಗತ ಮಾಡಬೇಕಿತ್ತು. ಕೊಡಗಿನ ಅಭಿವೃದ್ಧಿಗಾಗಿ ಸಾಧ್ಯವಾದರೆ ಜತೆಗಿರಿ. ಇಲ್ಲದಿದ್ದರೆ ತೆಪ್ಪಗಿರಿ ಎಂದು ಬಿಜೆಪಿ ನಾಯಕರಿಗೆ ಹೇಳಿದರು.

    ವಿರಾಜಪೇಟೆ ಕ್ಷೇತ್ರದ ಬಗ್ಗೆ ಕಂಡಿರುವ ಕನಸು ನನಸಾಗಿಸಲು ಜನ ಬೆಂಬಲ ಅಗತ್ಯ. ಲೋಕಸಭಾ ಚುನಾವಣೆಯಲ್ಲಿ ಬೆಂಬಲ ಕೊಡಬೇಕು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಅವರು ಇಂಜಿನಿಯರಿಂಗ್ ಪದವೀಧರ. ಘನ ತ್ಯಾಜ್ಯ ನಿರ್ವಹಣೆಯಲ್ಲಿ ವಿಶೇಷ ಜ್ಞಾನ ಅವರಿಗಿದೆ. ಕಾರ್ಯಕರ್ತನಿಂದ ಅಭ್ಯರ್ಥಿ ತನಕ ಬೆಳೆದವರು. ಪ್ರಚಾರಕ್ಕೆ ಹೋಗದೆ ಗೆಲುವು ಸಿಗುತ್ತದೆ ಎನ್ನುವುದು ಬಿಜೆಪಿ ಮೂರ್ಖತನ. ಕರ್ನಾಟಕದಲ್ಲಿ ನರೇಂದ್ರ ಮೋದಿ ಹೆಸರು ಕೆಲಸ ಮಾಡುವುದಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೊಟ್ಟಿರುವ ಗ್ಯಾರಂಟಿಗಳು ಕಾಂಗ್ರೆಸ್‌ಗೆ ಸಹಕಾರಿ ಆಗುತ್ತದೆ. ಹಾಗಾಗಿ ಈ ಚುನಾವಣೆಯಲ್ಲಿ ಲಕ್ಷ್ಮಣ್ ಗೆಲ್ಲುವ ವಿಶ್ವಾಸ ಇದೆ. ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಬಗ್ಗೆ ಅಗೌರವ ಇಲ್ಲ. ಆದರೆ ಅವರಿಗೆ ಚುನಾವಣೆ, ಜನಸೇವೆ ಬಗ್ಗೆ ಏನೂ ಮಾಹಿತಿ ಇಲ್ಲ. ಜನರಿಗೂ ಈ ಬಗ್ಗೆ ಗೊಂದಲವಿದೆ. ಜನರು ಯಾವ ಕಾರಣಕ್ಕೆ ಅವರಿಗೆ ಮತ ಹಾಕಬೇಕು ? ಎಂದು ಪ್ರಶ್ನಿಸಿದರು.

    ಮೈಸೂರಿನಲ್ಲಿ ೧೦ ವರ್ಷ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಣೆ ಮಾಡಿರುವ ಬಿಜೆಪಿ ಮಹಾರಾಜರಿಗೆ ಟಿಕೆಟ್ ಕೊಟ್ಟಿದೆ. ಹಾಗಾಗಿ ಬಿಜೆಪಿಯವರು ಪ್ರಜಾಪ್ರಭುತ್ವ ವಿರೋಧಿ ಎನ್ನುವುದು ಕರ್ನಾಟಕದಲ್ಲಿ ಸಾಬೀತು ಆಗಿದೆ. ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೊಡದಿರುವ ಬಗ್ಗೆ ಬಿಜೆಪಿ ಜನರಿಗೆ ಉತ್ತರ ಕೊಡಬೇಕು. ಅವರು ನಿಷ್ಪ್ರಯೋಜಕರಾ? ಭ್ರಷ್ಟಾಚಾರಿಯಾ ಅಥವಾ ಪಕ್ಷ ವಿರೋಧಿಯಾ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಬಿಜೆಪಿಯಲ್ಲಿ ದೊಡ್ಡ ಸಮುದಾಯದ ನಾಯಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಬಿಜೆಪಿ ಒಡೆದ ಮನೆ ಆಗಿದೆ. ಒಗ್ಗಟ್ಟು ಕಳೆದುಕೊಂಡಿದೆ. ಕರ್ನಾಟಕದಲ್ಲಿ ಜನ ಸೇವೆ ಮಾಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಉಳಿಸುವ ಜವಾಬ್ದಾರಿ ಜನರ ಮೇಲಿದೆ. ಎಲೆಕ್ಟ್ರೋಲ್ ಬಾಂಡ್ ದೊಡ್ದ ಹಗರಣ. ಕೇಂದ್ರ ಸರ್ಕಾರಕ್ಕೆ ಧೈರ್ಯ ಇದ್ದರೆ ಸುಪ್ರೀಂ ಕೋರ್ಟ್‌ನಿಂದ ಉನ್ನತ ಮಟ್ಟದ ತನಿಖೆ ಆಗಲಿ ಎಂದು ಹೇಳಿದರು

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಸೂರಜ್ ಹೊಸೂರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ತೆನ್ನೀರ ಮೈನಾ ಪಕ್ಷದ ಪ್ರಮುಖರಾದ ಲವ ಚಿಣ್ಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts