More

    ಪ್ಲಾಟ್‌ಫಾರ್ಮ್‌ನಲ್ಲೇ ಬಸ್‌ಗಳನ್ನು ನಿಲ್ಲಿಸಲು ಪೊಲೀಸರ ಸೂಚನೆ

    • ಚಾಮರಾಜನಗರ: ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದ ಬಸ್‌ಗಳಿಗೆ ಹಾಗೂ ಪಾರ್ಕಿಂಗ್ ಮಾಡುತ್ತಿದ್ದ ಬೈಕ್ ಹಾಗೂ ತಳ್ಳುವ ಗಾಡಿಗಳಿಗೆ ಮಂಗಳವಾರ ಪೊಲೀಸರು ಬ್ರೇಕ್ ಹಾಕಿದರು.

    • ಖಾಸಗಿ ಬಸ್‌ಗಳು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಳೆದ 8 ವರ್ಷದ ಹಿಂದೆ ಪಟ್ಟಣ ಪಂಚಾಯಿತಿ ವತಿಯಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಆರಂಭದಲ್ಲಿ ಪ್ಲಾಟ್‌ಫಾರ್ಮ್‌ನಲ್ಲೇ ಬಸ್‌ಗಳನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಕಾಲ ನಂತರ ಬಹುತೇಕ ಬಸ್‌ಗಳು ನಿಲ್ದಾಣಕ್ಕೆ ಹೊಂದಿಕೊಂಡಂತೆ ಮಲೆ ಮಹದೇಶ್ವರಬೆಟ್ಟ ಮುಖ್ಯ ರಸ್ತೆಯ ಬದಿಯಲ್ಲೇ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿತ್ತು. ಇದರಿಂದ ಮ.ಬೆಟ್ಟದ ಜಾತ್ರೆಯ ವೇಳೆ ವಾಹನ ದಟ್ಟಣೆಯಿಂದಾಗಿ ಆಗಾಗ್ಗೆ ಟ್ರಾಫಿಕ್ ಜಾಮ್ ನಿರ್ಮಾಣವಾಗುತ್ತಿತ್ತು. ಇದು ಒಂದು ಸಮಸ್ಯೆಯಾದರೆ ಸಾರ್ವಜನಿಕರು ಸಂಚರಿಸಲು ಕಿರಿಕಿರಿಯ ಜತೆಗೆ ಸಮಸ್ಯೆಯನ್ನು ಎದುರಿಸುವಂತಾಗಿತ್ತು.

    • ಇನ್ನು ಬಹುತೇಕ ಬಸ್‌ಗಳು ರಸ್ತೆ ಬದಿಯಲ್ಲಿಯೇ ನಿಲ್ಲಿಸುತ್ತಿದ್ದ ಕಾರಣ ಕೆಲವರು ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ತಳ್ಳುವ ಗಾಡಿಯನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು. ಇತ್ತ ಬೈಕ್ ಸವಾರರು ಈ ಸ್ಥಳವನ್ನು ಪಾರ್ಕಿಂಗ್ ಮಾಡಿಕೊಂಡು ಬೈಕ್‌ಗಳನ್ನು ನಿಲ್ಲಿಸುತ್ತಿದ್ದರು. ಇದರಿಂದ ಬಸ್ ನಿಲ್ದಾಣ ಪ್ರಯೋಜನಕ್ಕೆ ಬಾರದಂತಾಗಿತ್ತು. ಹಾಗಾಗಿ, ಸಾರ್ವಜನಿಕರು ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಬಗ್ಗೆ ಪಪಂನ ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಲವು ಬಾರಿ ಚರ್ಚಿಸಿದ್ದರೂ ಯಾವುದೇ ಕ್ರಮವಾಗಿರಲಿಲ್ಲ. ಆದರೆ ಇದೀಗ ಬಸ್ ನಿಲ್ದಾಣದ ಬಳಿ ಕೆ-ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿರುವುದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸಿತ್ತು. ಇದರಿಂದ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು.

    • ಈ ಹಿನ್ನೆಲೆಯಲ್ಲಿ ಮಂಗಳವಾರ ಇನ್ಸ್‌ಪೆಕ್ಟರ್ ಶಶಿಕುಮಾರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ರಿಹಾನಾ ಬಾನು ಹಾಗೂ ಸಿಬ್ಬಂದಿ ಬಸ್ ನಿಲ್ದಾಣಕ್ಕೆ ಆಗಮಿಸಿ ನಿಲ್ಲಿಸಿದ್ದ ಬೈಕ್ ಹಾಗೂ ತಳ್ಳುವ ಗಾಡಿಗಳನ್ನು ತೆರವುಗೊಳಿಸಿದರಲ್ಲದೇ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಬಸ್‌ಗಳನ್ನು ನಿಲ್ಲಿಸುವಂತೆ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದರಿಂದ ಬಸ್‌ಗಳು ಪ್ಲಾಟ್‌ಫಾರ್ಮ್‌ನಲ್ಲೇ ನಿಲ್ಲುವಂತಾಗಿದ್ದು, ಅಗತ್ಯ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಿಂದ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದ ಬಸ್‌ಗಳಿಗೆ ಈ ಕ್ರಮ ಸಾರ್ವಜನಿಕರ ಅನುಕೂಲತೆಯ ದೃಷ್ಟಿಯಿಂದ ಬ್ರೇಕ್ ಬಿದ್ದಂತಾಗಿದೆ.
      ಈ ವೇಳೆ ಕೆಲ ರಸ್ತೆ ಬದಿ ವ್ಯಾಪಾರಿಗಳು ವ್ಯಾಪಾರ ಮಾಡಲು ಸ್ಥಳ ನಿಗದಿಪಡಿಸುವಂತೆ ಮನವಿ ಮಾಡಿದರೆ, ಕೆಲ ಸಾರ್ವಜನಿಕರು ನಿಲ್ದಾಣದಲ್ಲೇ ಪ್ರತಿನಿತ್ಯ ಬಸ್ ನಿಲುಗಡೆಗೊಳಿಸುವಂತೆ ತಿಳಿಸಿದರು.

    • ಇದಕ್ಕೆ ಇನ್ಸ್‌ಪೆಕ್ಟರ್ ಶಶಿಕುಮಾರ್ ಪ್ರತಿಕ್ರಿಯಿಸಿ, ಈ ಸಂಬಂಧ ಬೆಳಗ್ಗೆ ಹಾಗೂ ಸಂಜೆ ಗಸ್ತು ಒದಗಿಸುವುದರ ಜತೆಗೆ ನಿಲ್ದಾಣದಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗುವುದು. ತಳ್ಳುವ ಗಾಡಿಗಳಿಗೆ ಸ್ಥಳ ಗುರುತಿಸಲು ಅಗತ್ಯ ಕ್ರಮವಹಿಸಲಾಗುವುದು. ಬಸ್ ಚಾಲಕರಿಗೆ ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಈ ವೇಳೆ ಪಪಂ ಮುಖ್ಯಾಧಿಕಾರಿ ಅಶೋಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts