More

    ಬೇಸರವಾಗಿದೆ…ಈ ಬಾರಿ ಪೆರ್ಡೂರು ಮೇಳದಲ್ಲಿ ತಿರುಗಾಟ ಇಲ್ಲ ಎಂದ ಜನ್ಸಾಲೆ; ಪ್ರಧಾನ ಭಾಗವತರಾಗಿ ಧಾರೇಶ್ವರ

    ಕುಂದಾಪುರ: ಪೆರ್ಡೂರು ಶ್ರೀ ಅನಂತಪದ್ಮನಾಭ ದಶಾವತಾರ ಮೇಳಕ್ಕೆ ಪ್ರಧಾನ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ ಮರುಪ್ರವೇಶ ಪಡೆದರೆ, 9 ವರ್ಷಗಳಿಂದ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯ ನಿರ್ಗಮಿಸಿದ್ದಾರೆ.
    ಮೇಳದ ಆರಂಭ ಕಾಲದಲ್ಲಿ ಪ್ರಧಾನ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ ತಿರುಗಾಟ ಮಾಡುತ್ತಿದ್ದಾಗ ಸುರೇಶ್ ಶೆಟ್ಟಿ ಎರಡನೇ ಭಾಗವತರಾಗಿದ್ದರು. ಧಾರೇಶ್ವರ ತಿರುಗಾಟಕ್ಕೆ ವಿದಾಯ ಹೇಳುವುದಕ್ಕೂ ಮುನ್ನ ಸುರೇಶ್ ಶೆಟ್ಟಿ ತಿರುಗಾಟ ನಿಲ್ಲಿಸಿದ್ದರು. 9 ವರ್ಷದ ಹಿಂದೆ ಧಾರೇಶ್ವರ ಸಂಚಾರಿ ಮೇಳದಿಂದ ನಿವೃತ್ತರಾಗಿ ಹವ್ಯಾಸಿಯಾಗಿ ಕಲಾ ಸೇವೆ ಮಾಡುತ್ತಿದ್ದರು. ಸುರೇಶ್ ಶೆಟ್ಟಿ ಕೂಡ ಹವ್ಯಾಸಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರೇಶ್ವರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ಜನ್ಸಾಲೆ ತುಂಬಿದ್ದು, 9 ವರ್ಷದಿಂದ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದರು. ನ.30ರಂದು ಪೆರ್ಡೂರು ಮೇಳದ ತಿರುಗಾಟ ಆರಂಭವಾಗಲಿದ್ದು, ಅದಕ್ಕೂ ಮೊದಲೇ ಮೇಳದಿಂದ ಜನ್ಸಾಲೆ ದಿಢೀರ್ ನಿರ್ಗಮನವಾಗಿದೆ. ಅಷ್ಟೇ ಅಚ್ಚರಿಯಾಗಿ ಧಾರೇಶ್ವರ ಮರುಪ್ರವೇಶ ಪಡೆದಿದ್ದಾರೆ.
    ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ, ತಿರುಗಾಟ ಆರಂಭಕ್ಕೆ ಕ್ಷಣಗಣನೆ ಸಂದರ್ಭ ಮೇಳದಿಂದ ನನ್ನನ್ನು ಹೊರಗಿಟ್ಟಿದ್ದು ಬೇಸರ ತರಿಸಿದೆ ಎಂದು ಹೇಳಿದ್ದಾರೆ. ಬೇರೆ ಮೇಳಗಳಿಂದ ಆಫರ್ ಬಂದಿತ್ತು, ಆದರೆ ಈ ವರ್ಷ ತಿರುಗಾಟ ಮಾಡುವುದಿಲ್ಲ. ನನಗೂ ಯಕ್ಷಗಾನ ಬಿಟ್ಟರೆ ಬೇರೆ ಬದುಕಿಲ್ಲ. ಸಿಕ್ಕ ಅವಕಾಶದಲ್ಲಿ ಜೀವನ ಭದ್ರತೆಗಾಗಿ ಮೇಳಕ್ಕೆ ಸಮಸ್ಯೆ ಮಾಡದೆ ಬೇರೆ ಅವಕಾಶ ಬಳಸಿಕೊಳ್ಳುವುದು ತಪ್ಪಾ? ರಂಗದಲ್ಲಿ ನಾನು ಯಾವತ್ತೂ ಸಮಸ್ಯೆ ಮಾಡಿದ್ದಿಲ್ಲ. ಅದು ಕಲಾಭಿಮಾನಿಗಳಿಗೂ ಗೊತ್ತು. ಕಳೆದ ಎರಡು ವರ್ಷದಿಂದ ಕರೊನಾ ಕಾಲದಲ್ಲಿ ಯಜಮಾನರು ಸಂಬಳ ಕೊಟ್ಟಿದ್ದಾರಾ? ನಮ್ಮ ಜೀವನಕ್ಕೆ ಭದ್ರತೆ ಕೊಟ್ಟಿದ್ದಾರಾ? ಎಂಬ ಪ್ರಶ್ನೆಗಳು ಎದುರಾಗಿವೆ. ಹಾಗಾಗಿ ಬದುಕಿನ ಹಿತದೃಷ್ಟಿಯಿಂದ ಪೆರ್ಡೂರು ಮೇಳದಿಂದ ಹೊರ ಬಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಇನ್ನೊಂದೆಡೆ, ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಮೇಳದ ಯಜಮಾನ ವೈ.ಕರುಣಾಕರ ಶೆಟ್ಟಿ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts