ಚುನಾವಣೆಯಲ್ಲಿ ಜನತೆಯ ವಿಶ್ವಾಸ ಕಳೆದುಕೊಂಡಿಲ್ಲ

9
ct ravi reaction
ಚಿಕ್ಕಮಗಳೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಬಿಜೆಪಿ ಬೆಂಬಲಿತ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿದರು. ಕಲ್ಮರುಡಪ್ಪ, ದೇವರಾಜ ಶೆಟ್ಟಿ, ಟಿ.ರಾಜಶೇಖರ್, ಈಶ್ವರಳ್ಳಿ ಮಹೇಶ್, ವರಸಿದ್ದಿ ವೇಣುಗೋಪಾಲ್ ಹಾಜರಿದ್ದರು.

ಚಿಕ್ಕಮಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರಬಹುದು, ಆದರೆ ವಿಶ್ವಾಸ ಕಳೆದುಕೊಂಡಿಲ್ಲ. ರಾಜ್ಯದಲ್ಲಿ ಯಾರಿಗೇ ಅನ್ಯಾಯವಾದರೂ ಬಿಟ್ಟುಕೊಡುವ ಪ್ರಶ್ನೆ ಇಲ್ಲ. ಜನರ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲು ಸದಾ ಸಿದ್ದ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಸೋಮವಾರ ನಡೆದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು-ಉಪಾಧ್ಯಕ್ಷರು, ಸದಸ್ಯರ ಸಭೆಯಲ್ಲಿ ಮಾತನಾಡಿ, ಅನ್ಯಾಯದ ವಿರುದ್ಧ ಹೋರಾಟ ಮಾಡೋಣ. ಅಧಿಕಾರ ಇದ್ದಾಗ ನಾವು ಜೋರಾಗಿ ಮಾತಾಡುತ್ತಿರಲಿಲ್ಲ. ಅಧಿಕಾರವಿಲ್ಲದಿರುವಾಗ ಮೆಲುಧ್ವನಿಯಲ್ಲಿ ಮಾತನಾಡಿದರೆ ಹೆದರಿದ್ದಾನೆ ಎಂದು ಕೊಳ್ಳುತ್ತಾರೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಘೋಷಣೆ ಮಾಡಿದ ಯಾವ ಯೋಜನೆಗಳು ಕಾಂಗ್ರೆಸ್ ಸರ್ಕಾರ ಮುಂದುವರೆಸುವ ಭರವಸೆ ನೀಡಿಲ್ಲ. ಜಿಲ್ಲೆಯ ಕಾಂಗ್ರೆಸ್‌ನ 5 ಶಾಸಕರು ಸ್ವಾಭಿಮಾನಿಗಳಾಗಿದ್ದರೆ, ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಸದನದಲ್ಲಿ ಹೋರಾಟ ಮಾಡಬೇಕಿತ್ತು. ಹೋರಾಟದ ಮಾಡದವರು ಇದ್ದರೆಷ್ಟು, ಬಿಟ್ಟರೆಷ್ಟು ಎಂದು ವ್ಯಂಗ್ಯವಾಡಿದರು.
ಸಂತೆಯಲ್ಲಿ ಹರಾಜು ಕೂಗುವ ರೀತಿ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ಒಳ್ಳೆ ಅಧಿಕಾರಿಗಳು ಉಳಿಯುತ್ತಿಲ್ಲ. ಕಡೂರು ಚಿಕ್ಕಮಗಳೂರು ರಸ್ತೆ, ಮಿನಿ ವಿಧಾನ ಸೌಧ, ಅವರು ಕುಳಿತು ರಾಜಕಾರಣ ಮಾಡುವ ಪ್ರವಾಸಿ ಮಂದಿರದಿಂದ ಹಿಡಿದು ಆಸ್ಪತ್ರೆ, ಮೆಡಿಕಲ್ ಕಾಲೇಜು, ಊರೂರಿಗೆ ರಸ್ತೆಗಳು, ಚೆಕ್‌ಡ್ಯಾಂಗಳು, ನೀರಾವರಿ, ಅಂಬೇಡ್ಕರ್ ಭವನಗಳು, ವಿವಿಧ ಜಾತಿ ಸಮುದಾಯಗಳ ಸಮುದಾಯ ಭವನಗಳನ್ನೂ ಮಾಡಿಸಿದ್ದೇನೆ. ವಿವಿಧ ಯೋಜನೆಗೆ ಅನುದಾನವನ್ನು ಮಂಜೂರು ಮಾಡಿಸಿದ್ದೇನೆ. ಈಗಿನ ಶಾಸಕರು ಚೆಕ್ ಕೊಟ್ಟು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಅಷ್ಟೇ. ಲೋಕಸಭೆ ಚುನಾವಣೆ ವರೆಗೆ ಮೂಗಿಗೆ, ಮೊಣಕೈಗೆ ತುಪ್ಪ. ಚುನಾವಣೆ ನಂತರ ಈ ಸರ್ಕಾರದಿಂದ ಕೈಗೆ ಚಿಪ್ಪಷ್ಟೇ ಇದನ್ನು ಬೆರೆದಿಟ್ಟುಕೊಳ್ಳಿ ಎಂದರು.
ಅಕ್ಕಿ ಕೊಡುತ್ತಿರುದು ಕೇಂದ್ರ ಸರ್ಕಾರ ಅದರಲ್ಲೂ 2 ಕೆಜಿ ಕಡಿತಗೊಳಿಸಿದ್ದಾರೆ. ಕಾಕಾ ಪಾಟೀಲ್‌ಗೂ ಇಲ್ಲ, ಮಹದೇವಪ್ಪನಿಗೂ ಇಲ್ಲ ಎನ್ನುವಂತಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಪ್ರಧಾನ ಕಾರ್ಯದರ್ಶಿ ದೇವರಾಜ ಶೆಟ್ಟಿ, ವಕ್ತಾರ ಟಿ.ರಾಜಶೇಖರ್, ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಮುಖಂಡರಾದ ಕೆ.ಪಿ.ವೆಂಕಟೇಶ್, ಬಿ.ರಾಜಪ್ಪ ಮತಿತರರು ಪಾಲ್ಗೊಂಡಿದ್ದರು.