More

    ನರೇಗಾ ಕಾಮಗಾರಿಗೆ 15 ಸಾವಿರಕ್ಕೂ ಹೆಚ್ಚು ಅರ್ಜಿ

    ರಾಣೆಬೆನ್ನೂರ: ಇಷ್ಟು ದಿನಗಳ ಕಾಲ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಸರ್ಕಾರ ಸೂಚಿಸುವ ಕಾಮಗಾರಿಗಳನ್ನು ಮಾತ್ರ ಮಾಡುತ್ತಿದ್ದ ಗ್ರಾಪಂಗಳು ಇನ್ಮುಂದೆ ರೈತರು ಬೇಡಿಕೆಯಿಟ್ಟಿರುವ ಕಾಮಗಾರಿಗಳನ್ನು ಮಾಡಿಕೊಡಲು ಸಿದ್ಧವಾಗುತ್ತಿವೆ.

    2021-22ನೇ ಸಾಲಿನ ನರೇಗಾ ಕಾಮಗಾರಿಯನ್ನು ರೈತರ ಬೇಡಿಕೆಗೆ ತಕ್ಕಂತೆ ಸಿದ್ಧಪಡಿಸಲು ಕ್ರಿಯಾಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಇದಕ್ಕಾಗಿ ತಾಲೂಕಿನ ಪ್ರತಿ ಗ್ರಾಪಂನಲ್ಲಿ ರೈತರಿಗೆ ಬೇಕಾದ ಕಾಮಗಾರಿ ಬೇಡಿಕೆ ಪಟ್ಟಿ ಸಲ್ಲಿಸಲು ಕಳೆದ ಅ. 1ರಿಂದಲೇ ಬೇಡಿಕೆ ಪೆಟ್ಟಿಗೆ ಇಡಲಾಗಿದೆ. ಈ ತಿಂಗಳ ಕೊನೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

    ರೈತರಿಂದ ಉತ್ತಮ ಪ್ರತಿಕ್ರಿಯೆ: ರೈತರ ಬೇಡಿಕೆಗೆ ತಕ್ಕಂತೆ ಕ್ರಿಯಾ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿರುವುದರಿಂದ ಗ್ರಾಮೀಣ ಭಾಗದ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿತ್ಯವೂ ಪ್ರತಿ ಗ್ರಾಪಂನಲ್ಲಿ 15ರಿಂದ 20 ಅರ್ಜಿಗಳು ಬರುತ್ತಿವೆ. ಜತೆಗೆ ಆನ್​ಲೈನ್ ಮೂಲಕವೂ ಅರ್ಜಿಗಳು ಬರುತ್ತಿದ್ದು, ತಾಲೂಕಿನ 40 ಗ್ರಾಪಂಗಳು ಸೇರಿ ಈಗಾಗಲೇ 15 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ.

    ಡಿ. 1ರಿಂದ ಎಲ್ಲ ಗ್ರಾಪಂಗಳಲ್ಲಿ ಗ್ರಾಮ ಸಭೆ ಏರ್ಪಡಿಸಲಾಗುತ್ತಿದೆ. ಇಲ್ಲಿ ರೈತರು ಅರ್ಜಿ ಸಲ್ಲಿಸಿರುವ ಕಾಮಗಾರಿಯ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಇದರಲ್ಲಿ ರೈತರು ಸಲ್ಲಿಸಿದ ಪ್ರಮುಖ ಬೇಡಿಕೆಗಳ ಪಟ್ಟಿ ಆಧರಿಸಿ 2021-22ನೇ ಸಾಲಿನ ಕ್ರಿಯಾಯೋಜನೆ ರೂಪಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರೈತರ ಪ್ರಮುಖ ಬೇಡಿಕೆ: ನರೇಗಾ ಯೋಜನೆಯಡಿ ಸಂಬಂಧಿಸಿದಂತೆ ರೈತರಿಂದ ಕುರಿ ಶೆಡ್, ದನದ ಕೊಟ್ಟಿಗೆ, ಕೃಷಿ ಹೊಂಡ, ಎರೆಹುಳು ತೊಟ್ಟಿ, ಬದು ನಿರ್ವಣ, ಉಳ್ಳಾಗಡ್ಡಿ ಗೋದಾಮು, ರೇಷ್ಮೆ ಬೆಳೆ ನಿರ್ವಹಣೆ, ವೀಳ್ಯದೆಲೆ ತೋಟ ನಿರ್ವಣ, ಗುಲಾಬಿ ತೋಟ ನಿರ್ವಣ, ತೆಂಗು, ವೈಯಕ್ತಿಕ ಪೌಷ್ಟಿಕ ತೋಟ ನಿರ್ಮಾಣ ಮಾಡುವುದನ್ನು ಪ್ರಮುಖ ಕಾಮಗಾರಿಯ ಬೇಡಿಕೆಯಾಗಿ ರೈತರು ಅರ್ಜಿ ಸಲ್ಲಿಸಿದ್ದಾರೆ.

    ನರೇಗಾ ಯೋಜನೆಯಡಿ 2021-22ನೇ ಸಾಲಿನ ಕ್ರಿಯಾಯೋಜನೆ ರೈತರ ಬೇಡಿಕೆಗೆ ತಕ್ಕಂತೆ ಆಗಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ರೈತರಿಂದಲೇ ಕಾಮಗಾರಿ ಬೇಡಿಕೆ ಅರ್ಜಿ ಸಂಗ್ರಹಿಸಲು ಸೂಚಿಸಿತ್ತು. ಅದರಂತೆ ಬೇಡಿಕೆ ಸಂಗ್ರಹಿಸಲು ತಾಲೂಕಿನ ಪ್ರತಿ ಗ್ರಾಪಂನಲ್ಲೂ ಪೆಟ್ಟಿಗೆ ಇಟ್ಟಿದ್ದೇವೆ. ಮುಂದಿನ ವಾರದಲ್ಲಿ ಅವುಗಳನ್ನು ತೆಗೆದು ರೈತರ ಕಾಮಗಾರಿ ಬೇಡಿಕೆ ಪಟ್ಟಿಯನ್ನು ತೆಗೆದುಕೊಂಡು ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು.

    | ಟಿ.ಆರ್. ಮಲ್ಲಾಡದ, ತಾಪಂ ಇಒ

    ಈ ಹಿಂದೆ ನರೇಗಾ ಕಾಮಗಾರಿ ಅಧಿಕಾರಿಗಳ ಮನಬಂದಂತೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ರಾಜ್ಯ ಸರ್ಕಾರ ರೈತರ ಬೇಡಿಕೆಗಳನ್ನು ಆಲಿಸಿ ಅದರಂತೆ ಕಾಮಗಾರಿ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಗ್ರಾಪಂ ಪಿಡಿಒಗಳು ಆದಷ್ಟು ಬೇಗ ರೈತರ ಅರ್ಜಿಗಳನ್ನು ತೆಗೆದುಕೊಂಡು ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿ ಆರಂಭಿಸಬೇಕು.

    | ದಿಳ್ಳೆಪ್ಪ ಸತ್ಯಪ್ಪನವರ, ಅಂಕಸಾಪುರ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts