More

    ಅಕ್ರಮ ಕಟ್ಟಡಗಳಿಗೆ ಕಡಿವಾಣವೆಂದು?

    ಬೆಳಗಾವಿ: ಪಾಲಿಕೆಗೆ ಆದಾಯ ತರಬೇಕಿದ್ದ ವಸತಿ, ವಾಣಿಜ್ಯ ಕಟ್ಟಡಗಳೇ ಇದೀಗ ವಾರ್ಷಿಕ ಕೋಟ್ಯಂತರ ರೂ. ತೆರಿಗೆ ನಷ್ಟ ಉಂಟು ಮಾಡುತ್ತಿವೆ. ಅಧಿಕಾರಿಗಳ ನಿರ್ಲಕ್ಷೃದಿಂದ ‘ಉಳ್ಳವರು’ ನಗರದಲ್ಲಿ ಒಂದು ಮಹಡಿ ನಿರ್ಮಾಣ ಅನುಮತಿ ಪಡೆದು ನಾಲ್ಕು ಮಹಡಿ ಕಟ್ಟಿಕೊಂಡಿದ್ದರೂ ಟ್ಯಾಕ್ಸ್‌ನಿಂದ ಬಚಾವ್ ಆಗುತ್ತಿದ್ದಾರೆ. ಇದು ಪಾಲಿಕೆಗೆ ತಲೆನೋವು ತಂದಿದೆ.

    ಪಾಲಿಕೆ ವ್ಯಾಪ್ತಿಯ 58 ವಾರ್ಡ್‌ಗಳಲ್ಲಿ 2008ರಿಂದ 2020ರ ಅವಧಿಯಲ್ಲಿ ಜನವಸತಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಒಂದು ಹಾಗೂ ಎರಡು ಮಹಡಿಯ 45 ಸಾವಿರಕ್ಕೂ ಅಧಿಕ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿದೆ. ಆದರೆ, ವಾಸ್ತವದಲ್ಲಿ ನಗರದಲ್ಲಿ ಅನುಮತಿ
    ಪಡೆದಿದ್ದಕ್ಕಿಂತ ಹೆಚ್ಚು ಮಹಡಿ ನಿರ್ಮಾಣ ಮಾಡಲಾಗಿದೆ. ಇದು ಪಾಲಿಕೆಯ ಆದಾಯಕ್ಕೆ ಹೊಡೆತ ಬೀಳುತ್ತಿದೆ.

    ಹೆಸ್ಕಾಂ, ಜಲಮಂಡಳಿಗೂ ನಷ್ಟ: ನಾಲ್ಕೈದು ವರ್ಷಗಳ ಅವಧಿಯಲ್ಲಿ ವಸತಿ ಪ್ರದೇಶಗಳಲ್ಲಿನ ಜನರು ಒಂದು ಅಥವಾ ಎರಡು ಮಹಡಿ ಕಟ್ಟಡ ನಿರ್ಮಾಣಕ್ಕೆ ತೆರಿಗೆ ಕಟ್ಟಿ ಪರವಾನಗಿ ಪಡೆದುಕೊಳ್ಳುತ್ತಾರೆ. ಆದರೆ, ನಿಯಮ ಮೀರಿ 3 ರಿಂದ 4 ಮಹಡಿ ಕಟ್ಟಡ ನಿರ್ಮಿಸಿಕೊಂಡಿದ್ದರೂ ಹೆಸ್ಕಾಂ, ಜಲಮಂಡಳಿ ಅಧಿಕಾರಿಗಳು ಆ ಮನೆಗಳಿಗೆ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕ ನೀಡುತ್ತಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆಯೊಂದಿಗೆ ಈ ಇಲಾಖೆಗಳಿಗೂ ನಷ್ಟವಾಗುತ್ತಿದೆ.

    ಅಕ್ರಮ ವಾಣಿಜ್ಯ ಚಟುವಟಿಕೆ: ಕೆಲವರು ಪಾಲಿಕೆ, ಬುಡಾ ವ್ಯಾಪ್ತಿಯಲ್ಲಿ ವಸತಿ ಹೆಸರಿನಲ್ಲಿ ಪರವಾನಗಿ ಪಡೆದು ವಾಣಿಜ್ಯ ಮಳಿಗೆ ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಮನೆ ಎಂದು ನಮೂದಿಸಿ ತೆರಿಗೆ ಪಾವತಿಸುತ್ತಿದ್ದಾರೆ. ವಸತಿ ಪ್ರದೇಶಗಳಲ್ಲಿ ಪಿ.ಜಿ., ಹೋಟೆಲ್‌ಗಳು ತಲೆ ಎತ್ತಿವೆ. ಅವುಗಳಿಗೆ ಪರವಾನಗಿ ಸಹ ಇಲ್ಲ. ಅಧಿಕಾರಿಗಳು ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರಾದ ನವೀನ ಎಸ್. ಮಾದರ, ಪ್ರಕಾಶ ಎಸ್. ಅನಗೋಳಕರ ದೂರಿದ್ದಾರೆ.

    ಮಹಾನಗರ ಪಾಲಿಕೆ ಆಸ್ತಿ ಕಾಪಾಡಲು ಅಧಿಕಾರಿಗಳಲ್ಲಿ ಕಾಣದ ಆಸಕ್ತಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1.32 ಲಕ್ಷಕ್ಕೂ ಅಧಿಕ ಆಸ್ತಿಗಳಿದ್ದು, ಅವುಗಳಲ್ಲಿ ಕೆಲ ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದೆ. ಬಾಡಿಗೆ ದರ ಬದಲಾಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಆಸ್ತಿಗಳ ಮರು ಮೌಲ್ಯಮಾಪನ ಮಾಡಿ ವ್ಯತ್ಯಾಸದ ತೆರಿಗೆ ವಸೂಲಿ ಮಾಡುವ ಕೆಲಸ ಅರ್ಧದಲ್ಲಿಯೇ ಮೊಟಕುಗೊಂಡಿದೆ. ಪರಿಣಾಮ ಸದ್ಯ ಪಾಲಿಕೆಗೆ ವಾರ್ಷಿಕ 35-40 ಕೋಟಿ ರೂ. ವಾರ್ಷಿಕ ಆದಾಯ ಸಿಗುತ್ತಿದೆ. ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ದಿನಕಳೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಈಗಾಗಲೇ ನಗರದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ಮತ್ತು ಒತ್ತುವರಿಯಾಗಿರುವ ಪಾಲಿಕೆ ಆಸ್ತಿಗಳ ಪತ್ತೆಗಾಗಿ ಸಮೀಕ್ಷೆ ಆರಂಭವಾಗಿದೆ. ಅಕ್ರಮ ಕಟ್ಟಡಗಳ ತೆರವಿಗೆ ಸರ್ಕಾರ ಸೂಚನೆ ನೀಡಿದೆ.
    | ಕೆ.ಎಚ್. ಜಗದೀಶ, ಪಾಲಿಕೆ ಆಯುಕ್ತ, ಬೆಳಗಾವಿ

    ಈಗಾಗಲೇ ನಗರದಲ್ಲಿ ಪಾಲಿಕೆ ಆಸ್ತಿ ಸಂರಕ್ಷಣೆ, ಒತ್ತುವರಿ ತೆರವಿಗೆ ಸರ್ವೇ ಆರಂಭವಾಗಿದೆ. ನಿಮಯ ಮೀರಿ ನಿರ್ಮಿಸಿಕೊಂಡಿರುವ ಕಟ್ಟಡಗಳು ಮತ್ತು ಆಸ್ತಿಗಳು ಒತ್ತುವರಿ ಆಗಿದ್ದರೆ ತೆರವುಗೊಳಿಸಲಾಗುವುದು. ಪಾಲಿಕೆಯ ಪ್ರತಿ ಆಸ್ತಿಗಳ ವಿಸ್ತೀರ್ಣ ಅಳತೆ ಮಾಡಿ ನಾಮಫಲಕ ಹಾಕುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದಾರೆ.
    | ಎಸ್.ಬಿ.ದೊಡ್ಡಗೌಡರ, ಪಾಲಿಕೆ ಕಂದಾಯ ವಿಭಾಗದ ಆಯುಕ್ತ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts