ಕೃಷ್ಣರಾಜ ಕ್ಷೇತ್ರದಲ್ಲಿ ಒಲಿಯದ ಹ್ಯಾಟ್ರಿಕ್ ಗೆಲುವು

6

ಸದೇಶ್ ಕಾರ್ಮಾಡ್ ಮೈಸೂರು

ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಯಾವುದೇ ಅಭ್ಯರ್ಥಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಸಾಧ್ಯವಾಗಲೇ ಇಲ್ಲ. ಯಾವುದೇ ಅಭ್ಯರ್ಥಿಗೆ ಹ್ಯಾಟ್ರಿಕ್ ಗೆಲುವಿನ ಕನಸು ಸಾಕಾರಗೊಳ್ಳಲು ಈ ಕ್ಷೇತ್ರದ ಮತದಾರರು ಅವಕಾಶ ನೀಡಲಿಲ್ಲ.

ಪ್ರಸ್ತುತ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಎಸ್.ಎ. ರಾಮದಾಸ್‌ಗೆ 2004ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಅವಕಾಶ ಇತ್ತು. ಆ ಸಂದರ್ಭ ಸೋಲಿನ ಕಹಿ ಅನುಭವಿಸಿದರು. 1967ರಲ್ಲಿ ಕೆ.ಎಸ್. ಸೂರ್ಯನಾರಾಯಣ ರಾವ್‌ಗೆ ಹ್ಯಾಟ್ರಿಕ್ ಗೆಲುವಿನ ಸಾಧ್ಯತೆ ಇತ್ತು. ಆದರೆ, ಅವರು ಕಣಕ್ಕಿಳಿಯಲಿಲ್ಲ.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಉದಯ

ಕೃಷ್ಣರಾಜ ವಿಧಾನಸಭಾ ಕ್ಷೇತ್ರ 1967ರಲ್ಲಿ ಉದಯವಾಯಿತು. ಅದಕ್ಕೂ ಮುನ್ನ ಈ ಕ್ಷೇತ್ರ ‘ಮೈಸೂರು ಸಿಟಿ’ ಹೆಸರಿನಲ್ಲಿ ಗುರುತಿಸಿ ಕೊಂಡಿತ್ತು. ಮೈಸೂರು ಸಿಟಿ ಕ್ಷೇತ್ರಕ್ಕೆ 1957ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎಸ್. ಸೂರ್ಯನಾರಾಯಣ ರಾವ್ 7366 ಮತಗಳನ್ನು ಪಡೆದು ಪಕ್ಷೇತರ ಅಭ್ಯರ್ಥಿ ಎಲ್. ಶ್ರೀಕಂಠಯ್ಯ ವಿರುದ್ಧ ಗೆಲುವು ಸಾಧಿಸಿದರು. ಎಲ್. ಶ್ರೀಕಂಠಯ್ಯ 5626 ಮತಗಳನ್ನು ಪಡೆದಿದ್ದರು.

1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೆ.ಎಸ್. ಸೂರ್ಯನಾರಾಯಣ ರಾವ್ ಮರು ಆಯ್ಕೆಗೊಂಡರು. ಸೂರ್ಯನಾರಾಯಣ ರಾವ್ 7,571 ಮತಗಳನ್ನು ಪಡೆದರೆ ಎದುರಾಳಿ ಎಸ್‌ಒಸಿ ಪಕ್ಷದ ಶ್ರೀಕಂಠಶರ್ಮ 4007 ಮತಗಳನ್ನು ಪಡೆದು ಪರಾಭವಗೊಂಡರು.

1967ರಲ್ಲಿ ನಡೆದ ಚುನಾವಣೆಯಲ್ಲಿ ಮೈಸೂರು ಸಿಟಿ ಕ್ಷೇತ್ರ ಕೃಷ್ಣರಾಜ ಕ್ಷೇತ್ರವಾಗಿ ಬದಲಾಯಿತು. ಆ ಸಂದರ್ಭ ಪಕ್ಷೇತರ ಅಭ್ಯರ್ಥಿ ಎಸ್. ಚನ್ನಯ್ಯ 9,041 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಬಿ.ಎನ್. ಸ್ವಾಮಿ 6940 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಕೆ.ಎಸ್. ಸೂರ್ಯನಾರಾಯಣ ರಾವ್ ಕೆ.ಆರ್. ಕ್ಷೇತ್ರ ಉದಯವಾದ ಸಂದರ್ಭ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.

1972ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ. ಸೂರ್ಯನಾರಾಯಣ 14150 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಎದುರಾಳಿ ಬಿಜೆಎಸ್ ಅಭ್ಯರ್ಥಿ ಎಚ್. ಗಂಗಾಧರನ್ 5,994 ಮತಗಳನ್ನು ಪಡೆದರು. 1978ರಲ್ಲಿ ನಡೆದ ಚುನಾವಣೆಯಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ ಎಚ್. ಗಂಗಾಧರನ್ 25,091 ಮತಗಳನ್ನು ಪಡೆದು ಐಎನ್‌ಸಿ (ಐ) ಪಕ್ಷದಿಂದ ಸ್ಪರ್ಧಿಸಿದ ಕೆ.ಎಸ್. ಸೂರ್ಯನಾರಾಯಣ ರಾವ್ ಅವರನ್ನು ಮಣಿಸಿದರು. ಸೂರ್ಯನಾರಾಯಣ ರಾವ್ 15,150 ಮತಗಳನ್ನು ಪಡೆದು ಪರಾಭವಗೊಡರು.

1983ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಿತು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ಎಚ್. ಗಂಗಾಧರ 21163 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಎದುರಾಳಿ ಜೆಎನ್‌ಪಿಯ ಟಿ.ವಿ. ಶ್ರೀನಿವಾಸ ರಾವ್ 9,116 ಮತಗಳನ್ನು ಪಡೆದು ಪರಾಭವಗೊಂಡರು.

1985ರಲ್ಲಿ ನಡೆದ ಚುನಾವಣೆಯಲ್ಲಿ ಜೆಎನ್‌ಪಿ ಪಕ್ಷದ ವೇದಾಂತ ಹೆಮ್ಮಿಗೆ 20,657 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಐಎನ್‌ಸಿ ಅಭ್ಯರ್ಥಿ ಶ್ರೀಕಂಠಶರ್ಮ 13,965 ಮತಗಳನ್ನು ಪಡೆದು ಪರಾಭವಗೊಂಡರು. 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿ ಕೆ.ಎನ್. ಸೋಮಸುಂದರಂ 28,722 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಜನತಾದಳದ ಅಭ್ಯರ್ಥಿ ವೇದಾಂತ ಹೆಮ್ಮಿಗೆ 18,990 ಮತಗಳನ್ನು ಪಡೆದು ಪರಾಭವಗೊಂಡರು.

ಮೊದಲ ಬಾರಿಗೆ ಅರಳಿದ ಕಮಲ

1994ರಲ್ಲಿ ನಡೆದ ಚುನಾವಣೆಯಲ್ಲಿ ಎಸ್.ಎ. ರಾಮದಾಸ್ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಮಲವನ್ನು ಅರಳಿಸಿದರು. 28,190 ಮತಗಳನ್ನು ಪಡೆದು ಎಸ್.ಎ. ರಾಮದಾಸ್ ಗೆಲುವು ಸಾಧಿಸಿದರೆ 18,827 ಮತಗಳನ್ನು ಪಡೆದ ಜನತಾದಳದ ಎಂ. ವೇದಾಂತ ಹೆಮ್ಮಿಗೆ ಪರಾಭವಗೊಂಡರು.

1999ರ ಚುನಾವಣೆಯಲ್ಲಿ ಎಸ್.ಎ. ರಾಮದಾಸ್ ಎರಡನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 29,813 ಮತಗಳನ್ನು ಪಡೆದು ಜೆಡಿಎಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ ಅವರನ್ನು ಸೋಲಿಸಿದರು. ಎಂ.ಕೆ. ಸೋಮಶೇಖರ್ 20,061 ಮತಗಳನ್ನು ಪಡೆದರು. 2004ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಯ ಎಸ್.ಎ. ರಾಮದಾಸ್‌ಗೆ ಜೆಡಿಎಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ ಆಘಾತ ನೀಡಿದರು. ಎಂ.ಕೆ.ಸೋಮಶೇಖರ್ 25,439 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ರಾಮದಾಸ್ 22,045 ಮತಗಳನ್ನು ಪಡೆದು ಪರಾಭವಗೊಂಡರು.

2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಎ. ರಾಮದಾಸ್ 63,314 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ 43,892 ಮತಗಳನ್ನು ಪಡೆದು ಸೋಲಿನ ಕಹಿ ಅನುಭವಿಸಿದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ಕೆ. ಸೋಮಶೇಖರ್ 52,611 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಬಿಜೆಪಿಯ ಎಸ್.ಎ. ರಾಮದಾಸ್ 46,546 ಮತಗಳನ್ನು ಪಡೆದು ಸೋಲು ಕಂಡರು. 2018ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ಎ. ರಾಮದಾಸ್ 78,573 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ. ಸೋಮಶೇಖರ್ 52,226 ಮತಗಳನ್ನು ಪಡೆದು ಪರಾಭವಗೊಂಡರು. ಕ್ಷೇತ್ರದಲ್ಲಿ ಹೆಚ್ಚು ಬಾರಿ ಗೆಲುವು ಸಾಧಿಸಿದ ಹೆಗ್ಗಳಿಕೆ ಹೊಂದಿರುವ ಎಸ್.ಎ. ರಾಮದಾಸ್‌ಗೆ ಈ ಬಾರಿ ಬಿಜೆಪಿಯ ಟಿಕೆಟ್ ಕೈತಪ್ಪಿದ್ದು, ಪಕ್ಷದ ಅಭ್ಯರ್ಥಿಯಾಗಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಕಣಕ್ಕಿಳಿದ್ದಾರೆ.