ಮದ್ವೆ ವೇಷ, 120 ಕಾರು, ಹಿಂದಿ ಚಿತ್ರದ ಡೈಲಾಗ್: ಐಟಿ ಅಧಿಕಾರಿಗಳ ಮಹಾಬೇಟೆ ಹಿಂದಿತ್ತು ರೋಚಕ ಪ್ಲಾನ್!
ಮುಂಬೈ: ಮಹಾರಾಷ್ಟ್ರದ ಜಲ್ನಾದಲ್ಲಿರುವ ಕೆಲ ಉದ್ಯಮ ಸಮೂಹಕ್ಕೆ ಸೇರಿದ ಅನೇಕ ಪ್ರದೇಶಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಬೇನಾಮಿ ಅಥವಾ ಲೆಕ್ಕಕ್ಕೆ ಸಿಗದ 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದ ಪ್ರಕರಣವು ಯಾವ ಸಿನಿಮಾ ದೃಶ್ಯಕ್ಕಿಂತ ಕಡಿಮೆ ಏನಿಲ್ಲ. ಯಾಕೆಂದರೆ, ಸುಮ್ಮನೇ ಹೋಗಿ ದಾಳಿ, ಮಾಡಿದ್ದಲ್ಲ. ದಾಳಿಯ ಹಿಂದಿತ್ತು ರೋಚಕ ಪ್ಲಾನ್.
ಹೌದು, ಆಗಸ್ಟ್ 3ರಂದು ಐಟಿ ಅಧಿಕಾರಿಗಳು ನಡೆಸಿದ ದಾಳಿಯು ಥೇಟ್ ಸಿನಿಮಾ ಶೈಲಿಯಲ್ಲಿಯೇ ಇತ್ತು. ಮದುವೆ ಪಾರ್ಟಿಗೆ ಹೋಗುವ ರೀತಿಯಲ್ಲಿ ವೇಷಭೂಷಣ ಧರಿಸಿ, ದಾಳಿ ನಡೆಸಿದ ಫಲಿತಾಂಶವಾಗಿ 56 ಕೋಟಿ ರೂಪಾಯಿ ನಗದು, 14 ಕೋಟಿ ರೂಪಾಯಿ ಮೌಲ್ಯದ 32 ಕೆಜಿ ಚಿನ್ನ, ಹರಳು ಮತ್ತು ಡೈಮಂಡ್ ಹಾಗೂ ಕೆಲ ಆಸ್ತಿ ದಾಖಲೆಗಳು ಸೇರಿದಂತೆ ಒಟ್ಟು 390 ಕೋಟಿ ರೂಪಾಯಿ ಬೇನಾಮಿ ಆಸ್ತಿಯನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ತಮ್ಮ ಪ್ಲಾನ್ ಅನ್ನು ಕಾರ್ಯಗತಗೊಳಿಸಲು ಐಟಿ ಇಲಾಖೆ 120 ಕಾರುಗಳನ್ನು ಬಳಸಿಕೊಂಡಿತು. ಆದರೆ, ದಾಳಿಯ ಬಗ್ಗೆ ಯಾರು ಮಾಹಿತಿ ನೀಡಬಾರದು ಅಂತಾ ವಾಹನಗಳು ಬೇರೆ ಬೇರೆಯಾಗಿ ಹೊರಟವು. ಮದುವೆ ದಿಬ್ಬಣಕ್ಕೆ ಹೊರಟಿರುವಂತೆಯೇ ವಾಹನಗಳನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಕೆಲವೊಂದು ಕಾರುಗಳ ಮೇಲೆ "ದುಲಾನ್ ಹಮ್ ಲೇ ಜಾಯೆಂಗೆ" (ನಾನು ಅವಳನ್ನು ಮದುವೆಯಾಗುತ್ತೇನೆ) ಎಂಬ ಪ್ರಖ್ಯಾತ ಹಿಂದಿ ಸಿನಿಮಾದ ಸಾಲುಗಳನ್ನು ಸಹ ಬರೆಯಲಾಗಿತ್ತು.
ಸುಮಾರು 250 ಆದಾಯ ತೆರಿಗೆ ಮತ್ತು ಪೊಲೀಸ್ ಅಧಿಕಾರಿಗಳು ಚೆನ್ನಾಗಿ ಉಡುಗೆ ಧರಿಸಿಕೊಂಡು ಪೇಟೆ ಹಾಕಿಕೊಂಡು ಮದುವೆಗೆ ಹೋಗುವ ವೇಷದಲ್ಲಿ ದಾಳಿ ನಡೆಸಿದ್ದಾರೆ. ಉಕ್ಕು, ಬಟ್ಟೆ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ವ್ಯವಹರಿಸುವ ಎರಡು ವ್ಯಾಪಾರ ಗುಂಪುಗಳಿಗೆ ಸಂಬಂಧಿಸಿದ ಆವರಣಗಳು, ಗೋದಾಮುಗಳು ಮತ್ತು ಫಾರ್ಮ್‌ಹೌಸ್‌ಗಳಲ್ಲಿ ಅಧಿಕಾರಿಗಳ ತಂಡಗಳು ದಾಳಿ ನಡೆಸಿವೆ.
ದಾಳಿ ವೇಳೆ ಸಿಕ್ಕ ನಗದು ಎಣಿಸಲು ಅಧಿಕಾರಿಗಳಿಗೆ ಸುಮಾರು 13 ತಾಸುಗಳ ಸಮಯ ತೆಗೆದುಕೊಂಡಿದೆ. ಜಿಲ್ಲೆಯ ಕೆಲವು ಉದ್ಯಮಿಗಳು ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಮಾಹಿತಿ ಪಡೆದ ನಂತರ, ಆದಾಯ ತೆರಿಗೆ ಇಲಾಖೆಯು 260 ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಿತ್ತು. ಬಳಿಕ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತು. (ಏಜೆನ್ಸೀಸ್)
