More

    ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್ ತಂಡ ಸಜ್ಜು

    ಆದರ್ಶ್ ಅದ್ಕಲೇಗಾರ್ ಮಡಿಕೇರಿ
    ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್ ಸಜ್ಜುಗೊಂಡಿದೆ. ಕಳೆದೆರಡು ವರ್ಷಗಳಿಂದ ಭೀಕರ ಜಲಪ್ರಳಯ, ಪ್ರಾಕೃತಿಕ ವಿಕೋಪದಲ್ಲಿ ಸಿಲುಕಿರುವ ಕೊಡಗು ಜಿಲ್ಲೆಗೆ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಬಂದಿಳಿದಿದ್ದು. ಇವರೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರೋಪಕರಣ ಹಾಗೂ ಸಲಕರಣೆಗಳು ಕೂಡ ಇದೆ.

    ಮಿಂಚಿನ ವೇಗದಲ್ಲಿ ಪ್ರಯಾಣ ಬೆಳೆಸುವ ಬೋಟ್, ಪ್ರವಾಹದಲ್ಲಿ ಸಿಲುಕಿದರೆ ರಕ್ಷಣೆಗೆ ಬೇಕಾದ ಸಲಕರಣೆ, ಕಟ್ಟಡ ಅಪಾಯಗಳು ಸಂಭವಿಸಿದರೆ ಕ್ಷಿಪ್ರಗತಿ ಕಾರ್ಯಾಚರಣೆ, ಬೆಟ್ಟ, ಗುಡ್ಡದ ಮೇಲೇರಲು ಅಗತ್ಯ ಸಲಕರಣೆಗಳ ದಾಸ್ತಾನು ಮಾಡಲಾಗಿದೆ. ಎನ್‌ಎಆರ್‌ಎಫ್ ಜತೆಗೆ ಗೃಹ ರಕ್ಷಕ ಪಡೆಗಳು ಕೂಡ ಸಾಥ್ ನೀಡಿದೆ.

    2018 ಹಾಗೂ 2019 ರಲ್ಲಿ ಎಂದೆಂದೂ ಕಾಣದ ಮಹಾಮಳೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿತ್ತು. 2018ರಲ್ಲಂತೂ ಯಾರು ಊಹಿಸಲಾಗದ ರೀತಿಯಲ್ಲಿ ಮಳೆ ಸುರಿಯಿತು. ಮಡಿಕೇರಿ, ಸೋಮವಾರಪೇಟೆ ತಾಲೂಕಿನ ಹಲವು ಭಾಗಗಳಲ್ಲಿ ಭೂಕುಸಿತಗೊಂಡಿತ್ತು. ಗುಡ್ಡಗಳು ಜಾರಿತ್ತು. ಸೇತುವೆ ನೆಲಸಮಗೊಂಡರೆ, ರಸ್ತೆ ಸಂಪೂರ್ಣ ಹಾನಿಯಾಯಿತು. ಇದರೊಂದಿಗೆ ಅದೆಷ್ಟೋ ಮನೆಗಳು ಮಳೆಯ ಅಬ್ಬರಕ್ಕೆ ಸಿಲುಕಿ ಕುಸಿಯಿತು. ಮೇಲಿಂದ ಮೇಲೆ ಸಮಸ್ಯೆ ಸೃಷ್ಟಿಯಾಗಿ ಗ್ರಾಮೀಣ ಪ್ರದೇಶಗಳು ಜಲಾವೃತಗೊಂಡು ದೊಡ್ಡ ಮಟ್ಟದ ಅನಾಹುತ ಸಂಭವಿಸಿತ್ತು.

    ನಂತರ 2019ರಲ್ಲೂ ಕೂಡ ಭೀಕರ ಮಳೆಗೆ ಉತ್ತರ, ದಕ್ಷಿಣ ಕೊಡಗಿನ ಹಲವು ಭಾಗಗಳು ಸಿಲುಕಿತು. ವಿರಾಜಪೇಟೆ ತಾಲೂಕು ರಕ್ಕಸ ಮಳೆಗೆ ಬುಡಮೇಲಾಗಿತ್ತು. ಅಪಾರ ಕೃಷಿ ಭೂಮಿ, ತೋಟಗಳು ನಷ್ಟಕ್ಕೆ ತುತ್ತಾಯಿತು. ಇದೀಗ ಮತ್ತೊಂದು ಮಳೆಗಾಲ ಆರಂಭಗೊಂಡಿದ್ದು ಮುಂಜಾಗ್ರತ ಕ್ರಮ ವಹಿಸಿ ಜಿಲ್ಲಾಡಳಿತ ಮನವಿ ಮೇರೆಗೆ ಕೊಡಗಿಗೆ ಎನ್‌ಡಿಆರ್‌ಎಫ್ ಪಡೆಯನ್ನು ಕರೆಸಿಕೊಳ್ಳಲಾಗಿದೆ.

    21 ಯೋಧರು ವಾಸ್ತವ್ಯ: ಕರ್ನಾಟಕಕ್ಕೆ ನಿಯೋಜಿಸಿರುವ ನಾಲ್ಕು ತಂಡಗಳ ಪೈಕಿ ಕೊಡಗಿಗೆ ಅಂಧ್ರಪ್ರದೇಶ ವಿಜಯವಾಡದ ಆರ್.ಕೆ.ಉಪಾಧ್ಯಾಯ ನೇತೃತ್ವದ 10ನೇ ಬೆಟಾಲಿಯನ್‌ನ ಪಡೆಯ 21 ಯೋಧರು ಮಡಿಕೇರಿಗೆ ಆಗಮಿಸಿದ್ದು ಮೈತ್ರಿ ಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿರುವ ಪಡೆ ಕೆಲವು ದಿನಗಳ ಹಿಂದೆ ಒಡಿಸ್ಸಾದಲ್ಲಿ ಸಂಭವಿಸಿದ ಚಂಡಮಾರುತ ವೇಳೆ ರಕ್ಷಣಾ ಕೆಲಸ ಮಾಡಿ ಕೊಡಗಿಗೆ ಆಗಮಿಸಿದ್ದಾರೆ.

    ಅಗತ್ಯ ಪರಿಕರ: ಈಗಾಗಲೇ ಜಿಲ್ಲೆಗೆ ಬಂದಿರುವ ಎನ್‌ಡಿಆರ್‌ಎಫ್ ಪಡೆ ಪ್ರವಾಹ ಎದುರಿಸಲು ಬೇಕಾದ ಅಗತ್ಯ ಸಲಕರಣೆಗಳು ತಂದಿದ್ದಾರೆ. ಪ್ರವಾಹ, ಭೂಕುಸಿತ, ಕಟ್ಟಡ ಧ್ವಂಸ ಸೇರಿದಂತೆ ಇನ್ನಿತರ ರಕ್ಷಣಾ ಕಾರ್ಯಕ್ಕೆ ಬೇಕಾದ ಅಗತ್ಯ ಪರಿಕರಗಳು ಕೂಡ ದಾಸ್ತಾನು ಮಾಡಲಾಗಿದೆ. ಯಂತ್ರದ ಮೂಲಕ ಪ್ರಯಾಣಿಸುವ ಬೋಟ್, ಲೈಫ್‌ಬಾಯ್(ಟ್ಯೂಬ್), ಲೈಫ್ ಜಾಕೆಟ್, ಅಂಡರ್ ವಾಟರ್ ಸರ್ಚಿಂಗ್ ನಡೆಸಲು ಬೇಕಾದ ಪರಿಕರ, ಕಟ್ಟಡ ಧ್ವಂಸಗೊಂಡರೆ ರಕ್ಷಣೆ ಮಾಡಲು ಬೇಕಾದ ಸಿಎಸ್‌ಆರ್ ಏರ್ ಬ್ಯಾಗ್‌ಗಳನ್ನು ಕೂಡ ತರಿಸಿಕೊಳ್ಳಲಾಗಿದೆ. ಕಟ್ಟಡ ಧ್ವಂಸ ಘಟನೆ ನಡೆದರೆ 200 ಟನ್‌ಗಳ ಅವಶೇಷಗಳನ್ನು ಏಕಕಾಲದಲ್ಲಿ ಸಿಎಸ್‌ಆರ್ ಬ್ಯಾಗ್ ಮೂಲಕ ಮೇಲೆತ್ತಬಹುದಾಗಿದೆ. ಇದರಿಂದ ಸಿಲುಕಿದವರನ್ನು ರಕ್ಷಣೆ ನಡೆಸಬಹುದಾಗಿದೆ. ಇದರೊಂದಿಗೆ ಭೂಕುಸಿತಗೊಂಡ ಪ್ರದೇಶ, ಪ್ರವಾಹದ ವೇಳೆ ತೆರಳಲು ಗಟ್ಟಿಮುಟ್ಟಾದ ಹಗ್ಗ ಸೇರಿದಂತೆ ಗುದ್ದಲ್ಲಿ, ಹ್ಯಾಮರ್, ಹಾರೆ ಇನ್ನಿತರ ಪರಿಕರಗಳು ಯೋಧರೊಂದಿಗೆ ಇರಲಿದೆ.

    ರಕ್ಷಣಾ ಪಡೆಗೆ ಸಾಥ್: ಅಂಧ್ರಪ್ರದೇಶದ ಎನ್‌ಡಿಆರ್‌ಎಫ್ ರಕ್ಷಣಾ ಪಡೆಯೊಂದಿಗೆ ಕೊಡಗಿನ ಪೊಲೀಸ್, ಹೋಂ ಗಾರ್ಡ್, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಕ್ಕೆ ಸಾಥ್ ನೀಡಲಿದ್ದಾರೆ. ಎನ್‌ಡಿಆರ್‌ಎಫ್ ತಂಡವನ್ನು ಮೂರು ಗುಂಪುಗಳಾಗಿ ರಚಿಸಿ, ಪ್ರತಿ ತಾಲೂಕಿಗೆ ಕಳುಹಿಸಿಕೊಡಲಾಗುವುದು. ವಿಪತ್ತು ಸಂಭವಿಸಿದರೆ ಈ ತಂಡಗಳು ಕಾರ್ಯೋನ್ಮುಖಗೊಳ್ಳಲಿದೆ.

    ಕರ್ನಾಟಕಕ್ಕೆ ನಿಯೋಜಿಸಿರುವ ನಾಲ್ಕು ತಂಡಗಳ ಪೈಕಿ ಕೊಡಗಿಗೆ ಅಂಧ್ರಪ್ರದೇಶ ವಿಜಯವಾಡದ ಆರ್.ಕೆ.ಉಪಾಧ್ಯಯ ನೇತೃತ್ವದ 10ನೇ ಬೆಟಾಲಿಯನ್ ಪಡೆ ಮಡಿಕೇರಿಗೆ ಆಗಮಿಸಿದೆ. ಸದ್ಯ ಮೈತ್ರಿ ಭವನದಲ್ಲಿ ವಾಸ್ತವ್ಯ ಹೂಡಿದೆ. 21 ಯೋಧರು ಹೊಂದಿರುವ ಈ ತಂಡ ಭೂ ಕುಸಿತ, ಪ್ರವಾಹ, ಕಟ್ಟಡ ಧ್ವಂಸ ಕಂಡ ತಕ್ಷಣ ಕಾರ್ಯೋನ್ಮುಖಗೊಳ್ಳಲಿದೆ.
    ಅನನ್ಯ ವಾಸುದೇವ್, ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ

    ಕೆಲವು ದಿನಗಳ ಹಿಂದೆ ಒಡಿಸ್ಸಾದಲ್ಲಿ ಸಂಭವಿಸಿದ ಚಂಡಮಾರುತ ವೇಳೆ ರಕ್ಷಣಾ ಕೆಲಸ ಮಾಡಿ ಕೊಡಗಿಗೆ ಆಗಮಿಸಿದ್ದೇವೆ. ರಕ್ಷಣಾ ಕಾರ್ಯಕ್ಕೆ ಬೇಕಾದ ಅಗತ್ಯ ಸಲಕರಣೆಗಳೊಂದಿಗೆ ಪಡೆ ಆಗಮಿಸಿದ್ದು, ಯಾವುದೇ ಸಮಯದಲ್ಲಾದರು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದೇವೆ.
    ಆರ್.ಕೆ.ಉಪಾಧ್ಯಾಯ, ಮುಖ್ಯಸ್ಥರು, ಎನ್‌ಡಿಆರ್‌ಎಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts