More

    ನಾಡಿನೆಲ್ಲೆಡೆ ನವರಾತ್ರಿ; ಗತ ವೈಭವದ ಪ್ರತೀಕ ಮೈಸೂರು ದಸರಾ

    ನಾಡಹಬ್ಬ ‘ಮೈಸೂರು ದಸರಾ’ದ ನವ ದಿನಗಳ ಸಡಗರದಲ್ಲಿ ಕಲೆ, ಸಂಗೀತ, ನೃತ್ಯ, ನಾಟಕ, ಜಾನಪದ ವೈಭವ, ಮನರಂಜನೆ, ದೀಪಾಲಂಕಾರ ಹೀಗೆ ಹತ್ತು ಹಲವು ವೈಶಿಷ್ಟ್ಯಳಿರುತ್ತವೆ. ದಸರೆಯ ‘ರಸಗವಳ’ ಸವಿಯಲು ಬರುವ ಪ್ರವಾಸಿಗರು ಲಕ್ಷಲಕ್ಷ. ಹೊಸತನದ ಗಾಳಿ ಬೀಸಿದರೂ, ಇದಕ್ಕಿರುವ ಧಾರ್ವಿುಕತೆಯ ಸ್ಪರ್ಶ ಮರೆಯಾಗಿಲ್ಲ. ಅ. 7ರಂದು ಬೆಳಗ್ಗೆ 8.15ರಿಂದ 8.45ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಬೆಳ್ಳಿರಥದಲ್ಲಿ ಪ್ರತಿಷ್ಠಾಪಿತ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಮಾಜಿ ಸಿಎಂ ಎಸ್.ಎಂ. ಕೃಷ್ಣ ದಸರಾ ಉದ್ಘಾಟಿಸುವರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಮುಂತಾದವರು ಭಾಗವಹಿಸಲಿದ್ದಾರೆ. ಬಳಿಕವೇ ದಸರೆಯ ರಮ್ಯಲೋಕ ಅನಾವರಣಗೊಳ್ಳುತ್ತದೆ. ಅ. 7ರ ಬೆಳಗ್ಗೆ 4.30ರಿಂದಲೇ ದೇವಿಗೆ ಪೂಜೆಗಳು ಜರುಗಲಿವೆ. 9 ದಿನವೂ ವಿವಿಧ ಧಾರ್ವಿುಕ ಕಾರ್ಯಗಳು ಮೇಳೈಸುತ್ತವೆ. ನಿತ್ಯ ಸಂಜೆ 4.30ರಿಂದ 5.30ರವರೆಗೆ ಮಹಾಬಲೇಶ್ವರ ದೇವಾಲಯ ಮುಂಭಾಗ ಇರುವ ದರ್ಬಾರ್ ಮಂಟಪದಲ್ಲಿ ದೇವಿಗೆ ದರ್ಬಾರ್ ಉತ್ಸವ ನೆರವೇರಲಿದೆ. ದೇವಿಗೆ 9 ದಿನವೂ ವಿಭಿನ್ನ ಅಲಂಕಾರ ಮಾಡಲಾಗುತ್ತದೆ. ಬ್ರಾಹ್ಮೀ ಅಲಂಕಾರ, ಮಹೇಶ್ವರಿ ಅಲಂಕಾರ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಸರಸ್ವತಿ ಅಲಂಕಾರ, ಕಾಳರಾತ್ರಿ ಪೂಜೆ, ದುರ್ಗಾ ಅಲಂಕಾರ, ಗಜಲಕ್ಷ್ಮೀ, ಅಶ್ವಾರೋಹಣ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

    ವರ್ಚುವಲ್ ಪ್ರಸಾರ: ದಸರಾ ಉದ್ಘಾಟನೆ, ಜಂಬೂಸವಾರಿ ಸೇರಿದಂತೆ ಅರಮನೆ ಅಂಗಳದಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಆನ್​ಲೈನ್​ನಲ್ಲಿ ಪ್ರಸಾರವಾಗಲಿವೆ. www.facebook.com/mysorevarthe/live/, tinyurl.com/ mysurudasara2021, mysoredasara.gov.in/ ನಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

    ಅರಮನೆಯಲ್ಲೂ ನವರಾತ್ರಿ ದರ್ಬಾರ್

    ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲೂ ಶಾಸ್ತ್ರೋಕ್ತವಾಗಿ ಧಾರ್ವಿುಕ ಮತ್ತು ಪೂಜಾ ಕಾರ್ಯಗಳು ನಡೆಯುತ್ತವೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಇದು ಅರಸೊತ್ತಿಗೆಯ ಗತವೈಭವವನ್ನು ನೆನಪಿಸುತ್ತದೆ. ಕರೊನಾ ಕಾರಣಕ್ಕೆ ಈ ಸಾಲಿನ ಪೂಜಾ ವಿಧಿಗಳನ್ನು ಸರಳವಾಗಿ ನಡೆಸಲು ರಾಜವಂಶಸ್ಥರು ನಿರ್ಧರಿಸಿದ್ದಾರೆ. ಯದುವೀರ ಅವರಿಗೆ ಎಣ್ಣೆಶಾಸ್ತ್ರ, ಸಿಂಹಾಸನಕ್ಕೆ ವಜ್ರಖಚಿತ ಸಿಂಹದ ತಲೆ ಜೋಡಣೆ, ಕಂಕಣ ಧಾರಣೆ, ಸಿಂಹಾಸನಾರೋಹಣ, ವಿಜಯೋತ್ಸವ, ಕೊನೆಯಲ್ಲಿ ಜಂಬೂಸವಾರಿ, ವಿಜಯದಶಮಿ ಮುಂತಾದ ಕಾರ್ಯಕ್ರಮಗಳು ಅರಮನೆಯಲ್ಲಿ ನಡೆಯಲಿವೆ.

    • ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನದಲ್ಲಿ 7 ದಿನದ ದೇವಿ ಪುರಾಣ ಕಾರ್ಯಕ್ರಮ ಹಾಗೂ ಏಳು ಮಕ್ಕಳ ತಾಯಿ ದೇವಸ್ಥಾನ ಮತ್ತು ತಾಯಮ್ಮ ದೇವಸ್ಥಾನದಲ್ಲಿ 7 ದಿನಗಳ ವಿಶೇಷ ಪೂಜೆ, ಹೋಮ, ಹವನ ನಡೆಯುತ್ತದೆ.
    • ಕೊಪ್ಪಳದ ಗಡಿಯಾರ ಕಂಬ ವೃತ್ತದಲ್ಲಿ ದುರ್ಗಾದೇವಿ ಮಂಡಳಿಯಿಂದ ಪ್ರತಿವರ್ಷ ದೇವಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ವರ್ಷವೂ ತಯಾರಿ ನಡೆದಿದೆ. 9 ದಿನ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.
    • ರಾಯಚೂರು ನಗರದಲ್ಲಿ ಗೌಳಿ ಸಮುದಾಯದಿಂದ ದುರ್ಗಾ ಮೂರ್ತಿ ಪ್ರತಿಷ್ಠಾಪಿಸಿ, ಪ್ರತಿನಿತ್ಯ ಪೂಜೆ ನಡೆಸಲಾಗುತ್ತದೆ.

    ಯಲ್ಲಮ್ಮನ ಸನ್ನಿಧಿಯಲ್ಲಿ ಶ್ರದ್ಧಾ ಭಕ್ತಿಯ ಹಬ್ಬ

    ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇಗುಲದಲ್ಲಿ ಗುರುವಾರ ಸಂಜೆ ಘಟಸ್ಥಾಪನೆ ಜರುಗಲಿದೆ. ನಿತ್ಯವೂ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಜರುಗಲಿವೆ. ದೇವಸ್ಥಾನದಲ್ಲಿನ ದೀಪಕ್ಕೆ ಎಣ್ಣೆ ಹಾಕಿದರೆ, ಬದುಕು ವರ್ಷವಿಡೀ ಪ್ರಜ್ವಲಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ನವರಾತ್ರಿಯ 1, 3, 5 ಹಾಗೂ 7ನೇ ದಿನಗಳಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಗರ್ಭಗುಡಿ, ಪ್ರಾಂಗಣ ಸೇರಿ 6 ಕಡೆ ದೀಪ ಅಳವಡಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾದಿಂದ ಲಕ್ಷಾಂತರ ಭಕ್ತರು ಬರುತ್ತಾರೆ.

    ಕೊಲ್ಹಾಪುರ ಮಹಾಲಕ್ಷ್ಮೀ ದರ್ಶನಕ್ಕೆ ಇ-ಪಾಸ್ ವ್ಯವಸ್ಥೆ

    ಮಹಾರಾಷ್ಟ್ರದ ಕೊಲ್ಹಾಪುರದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ಬಾರಿ ಇ-ಪಾಸ್ ಪಡೆದ ಭಕ್ತರಿಗಷ್ಟೇ ದೇವಿ ದರ್ಶನಕ್ಕೆ ಅವಕಾಶ. ಗುರುವಾರ ಬೆಳಗ್ಗೆ ದೇಗುಲ ತೆರೆಯಲಿದೆ. ನಿತ್ಯವೂ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದಿನಕ್ಕೆ ಐದು ಬಾರಿ ಆರತಿ. ದೇವಸ್ಥಾನದ ವೆಬ್​ಸೈಟ್ ಡಿಡಿಡಿ.ಞಚಜಚ್ಝಚ್ಡಞಜಿkಟ್ಝಜಚಟ್ಠ್ಟ್ಚಞ ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಇ-ಪಾಸ್ ನೀಡಲಾಗುತ್ತಿದೆ. ಪ್ರತಿ ಗಂಟೆಗೆ ಗರಿಷ್ಠ 500 ಭಕ್ತರು ಬೆಳಗ್ಗೆ 5ರಿಂದ ರಾತ್ರಿ 9ರ ಅವಧಿಯಲ್ಲಿ ದರ್ಶನ ಪಡೆಯಬಹುದು.

    ಸಿಗಂದೂರು, ಚಂದ್ರಗುತ್ತಿ ವಿಶೇಷ

    ಶಿವಮೊಗ್ಗ ಜಿಲ್ಲೆಯ ಸಿಗಂದೂರು ಚೌಡೇಶ್ವರಿ, ಚಂದ್ರಗುತ್ತಿ ರೇಣುಕಾಂಬಾ, ಹೊಂಬುಜದ ಪದ್ಮಾವತಿ ಅಮ್ಮನವರಿಗೆ ನವರಾತ್ರಿಯಲ್ಲಿ ವಿಶೇಷ ಪೂಜೆ, ಅಲಂಕಾರ ನೆರವೇರಿಸಲಾಗುತ್ತದೆ. ಶಿವಮೊಗ್ಗದ ಸಾರ್ವಜನಿಕ ದಸರಾಕ್ಕೂ ವಿಶಿಷ್ಟ ಸ್ಥಾನವಿದೆ. ನಗರಪಾಲಿಕೆಯಿಂದ ಆಚರಿಸಲಾಗುವ ದಸರಾ ಕಳೆದ ಎರಡು ವರ್ಷಗಳಿಂದ ಕರೊನಾ ಕಾರಣದಿಂದ ಕಳೆಗುಂದಿತ್ತು. ಈ ವರ್ಷ ಹಳೆಯ ವೈಭವ ಮರುಕಳಿಸುವಂತೆ ದಸರಾ ಆಚರಣೆಗೆ ಸ್ಥಳೀಯ ಆಡಳಿತ ಸಿದ್ಧತೆ ನಡೆಸಿದೆ. ಕುಸ್ತಿ ಸೇರಿದಂತೆ ವಿವಿಧ ಕ್ರೀಡಾಕೂಟ, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ವಿಜಯದಶಮಿಯಂದು ಬನ್ನಿ ಉತ್ಸವಕ್ಕೆ ಅದ್ದೂರಿ ಸಿದ್ಧತೆಗಳು ನಡೆದಿವೆ. ಇಷ್ಟೇ ಅಲ್ಲದೆ ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲೂ ಅಲ್ಲಿನ ಸ್ಥಳೀಯ ಸಂಸ್ಥೆಯಿಂದ ಪ್ರತಿ ವರ್ಷ ವಿಜೃಂಭಣೆಯ ದಸರಾ ಆಚರಿಸಲಾಗುತ್ತದೆ.

    ಧರ್ಮದ ಗುಡ್ಡದಲ್ಲಿ ದೇವರ ಪಲ್ಲಕ್ಕಿ

    ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ನಾಗೇನಹಳ್ಳಿ ಸಮೀಪದ ಧರ್ಮದ ಗುಡ್ಡದಲ್ಲಿ ನವರಾತ್ರಿಗೂ ಒಂದು ದಿನ ಮೊದಲೇ ಬನ್ನಿಮಹಾಂಕಾಳಿಗೆ ಬನ್ನಿ ಮುಡಿಯಲಾಗುತ್ತದೆ. ತಾಲೂಕಿನ 20ಕ್ಕೂ ಹೆಚ್ಚು ದೇವರ ಪಲ್ಲಕ್ಕಿಗಳು ನವರಾತ್ರಿ ಮುನ್ನಾದಿನ ಇಲ್ಲಿಗೆ ಬಂದು ಪ್ರದಕ್ಷಿಣೆ ಹಾಕಿ, ಪೂಜೆ ಸಲ್ಲಿಸಿ ಪುನಃ ಘಟಸ್ಥಾಪನೆ ಸ್ಥಳಕ್ಕೆ ತೆರಳುತ್ತವೆ. ಅಂದು ಸಾವಿರಾರು ಜನರು ಧರ್ಮದ ಗುಡ್ಡಕ್ಕೆ ಬರುತ್ತಾರೆ. ಹೊಸಪೇಟೆಯ ಏಳು ಕೇರಿಗಳಲ್ಲಿ ಅಮಾವಾಸ್ಯೆ ದಿನದಂದು ಶಕ್ತಿ ದೇವತೆಗಳನ್ನು ಪ್ರತಿಷ್ಠಾಪಿಸಿ 9 ದಿನ ಪೂಜಿಸಲಾಗುತ್ತದೆ. ದೇವತೆಗಳ ಪಲ್ಲಕ್ಕಿಗಳು ಸಹ ನವರಾತ್ರಿ ದಿನದ ಹಿಂದಿನ ದಿನ ಧರ್ಮದ ಗುಡ್ಡಕ್ಕೆ ತೆರಳಿ ಬನ್ನಿಮಹಾಂಕಾಳಿ ದೇವತೆಗೆ ಬನ್ನಿ ಮುಡಿಯುತ್ತವೆ. ಕೇರಿಗಳಲ್ಲಿ ಗುಂಡು, ಬಂಡಿ ಎತ್ತುವುದು ಸೇರಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ.

    ಶೃಂಗೇರಿ, ಬಾಳೆಹೊನ್ನೂರಿನಲ್ಲಿ ದಸರಾ ಸಂಭ್ರಮ

    ನಾಡಿನೆಲ್ಲೆಡೆ ನವರಾತ್ರಿ; ಗತ ವೈಭವದ ಪ್ರತೀಕ ಮೈಸೂರು ದಸರಾಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಹೊರನಾಡು, ಬಾಳೆಹೊನ್ನೂರಿನಲ್ಲಿ ದಸರಾವನ್ನು ವಿಶೇಷವಾಗಿ ಆಚರಿಸುತ್ತಾರೆ. ಶೃಂಗೇರಿ ಶಾರದೆ ಸನ್ನಿಧಿಯಲ್ಲಿ 9 ದಿನವೂ ವಿಶೇಷ ಅಲಂಕಾರ ಮಾಡಲಾಗುತ್ತದೆ. ಪ್ರತಿ ದಿನವೂ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳಿಂದ ದಸರಾ ದರ್ಬಾರ್ ನಡೆಯುತ್ತದೆ. ಹೊರನಾಡಿನ ಶ್ರೀ ಅನ್ನಪೂರ್ಣೆಶ್ವರಿ ದೇಗುಲದಲ್ಲಿ ಪ್ರತಿ ದಿನವೂ ಬೇರೆ ಬೇರೆ ಅಲಂಕಾರ ಮಾಡಲಾಗುತ್ತದೆ. ಧರ್ಮಕರ್ತ ಡಾ. ಭೀಮೇಶ್ವರ ಜೋಷಿ ಅವರ ಪಟ್ಟಾಧಿಕಾರ ದಿನ ಚಂಡಿಕಾ ಹೋಮ ನೆರವೇರಿಸಲಾಗುತ್ತದೆ. ಜೀವಭಾವ ಕಾರ್ಯಕ್ರಮದಲ್ಲಿ ‘ಶ್ರೀಮಾತಾ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಿಶೇಷವಾಗಿ ಸಮಾಜಸೇವೆಯಲ್ಲಿ ತೊಡಗಿದವರಿಗೆ ಅಥವಾ ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ 1 ಲಕ್ಷ ರೂ. ಹೊಂದಿದೆ. ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠದಿಂದ ದಸರಾ ಉತ್ಸವವನ್ನು ವೈಭವದಿಂದ ಆಚರಿಸಲಾಗುತ್ತದೆ. ಮಠದಲ್ಲಿ ದಿನವೂ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ವರ್ಷ ಒಂದೊಂದು ಸ್ಥಳದಲ್ಲಿ ದಸರಾ ಉತ್ಸವ ನಡೆಸಲಾಗುತ್ತದೆ. ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಈ ಬಾರಿ ಶಿಕಾರಿಪುರ ತಾಲೂಕು ಕಡೆನಂದಿಹಳ್ಳಿಯಲ್ಲಿ ದಸರಾ ದರ್ಬಾರ್ ನಡೆಸುತ್ತಾರೆ. ದಿನವೂ ಇಷ್ಟಲಿಂಗ ಪೂಜೆ ನೆರವೇರಿಸುತ್ತಾರೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

    ದುರ್ಗಾಂಬಿಕಾ ದೇವಿ ನವರಾತ್ರಿ ಮಹೋತ್ಸವ

    ದಾವಣಗೆರೆ ನಗರದೇವತೆ ದುರ್ಗಾಂಬಿಕಾ ನವರಾತ್ರಿ ಮಹೋತ್ಸವ ಹಲವು ವೈಶಿಷ್ಟ್ಯಳ ಸಂಗಮ. ಗುರುವಾರ ಶ್ರೀ ವಿಘ್ನೇಶ್ವರ ಘಟಸ್ಥಾಪನೆಯೊಂದಿಗೆ ಆಚರಣೆ ಆರಂಭ. ನವದುರ್ಗಾ, ನವಗ್ರಹ, ದ್ವಾರಪಾಲ, ಕಾಲಭೈರವ ಹೀಗೆ ಸಾಲು ಸಾಲು ಪೂಜೆಗಳು, ಪ್ರತಿ ದಿನ ಪಂಚಾಮೃತ ಅಭಿಷೇಕ, ಉದಯ ರವಿ ಪಾರಾಯಣ, ಮಹಾ ಮಂಗಳಾರತಿ. ನಿತ್ಯವೂ ಒಂದೊಂದು ಅಲಂಕಾರ. ಹಂಸವಾಹಿನಿ, ವೃಷಭ ವಾಹನ, ಮಯೂರ ವಾಹನ, ಗರುಡ ವಾಹನ, ಮೋಹಿನಿ, ಸರಸ್ವತಿ, ರಾಜರಾಜೇಶ್ವರಿ, ಸಿಂಹವಾಹನ, ಗಜಲಕ್ಷ್ಮಿ ಹಾಗೂ ಲಕ್ಷ್ಮಿ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ.

    ಹಳಿಯಾಳದಲ್ಲಿ ದುರ್ಗಾ ದೌಡ್

    ಹಿಂದು ಧಾರ್ವಿುಕ ಭಾವನೆಯನ್ನು ಬೆಳೆಸುವ ಉದ್ದೇಶದಿಂದ 32 ವರ್ಷಗಳ ಹಿಂದೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಪ್ರಾರಂಭವಾದ ದುರ್ಗಾ ದೌಡ್ ಎಂಬ ಆಚರಣೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪ್ರಸಿದ್ಧಿ ಪಡೆದಿದೆ. ಪ್ರತಿ ಬಡಾವಣೆ ತಳಿರು ತೋರಣ ಕೇಸರಿ ಪತಾಕೆಗಳು, ಚಿಣ್ಣರ ಛದ್ಮವೇಷಗಳೊಂದಿಗೆ ಜಾತ್ರೆಯ ವಾತಾವರಣ ಸೃಷ್ಟಿಯಾಗಿರುತ್ತದೆ. ಪ್ರತಿದಿನ ತ್ರಿಶೂಲಧಾರಿ ಕೇಸರಿ ಭಗವಾಧ್ವಜ ಹಿಡಿದು ಒಂದು ದೇವಸ್ಥಾನದಿಂದ ಮತ್ತೊಂದು ದೇವಸ್ಥಾನಕ್ಕೆ ದೇವರ ನಾಮಸ್ಮರಣೆ, ಮಹಾಪುರುಷರ ಘೊಷಣೆಗಳೊಂದಿಗೆ ಮೆರವಣಿಗೆ ತೆರಳುತ್ತದೆ.

    ಬಾದಾಮಿ ಬನಶಂಕರಿಯಲ್ಲಿ ಶರನ್ನವರಾತ್ರಿ ಸಡಗರ

    ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಅ. 6 ರಂದು ಘಟಸ್ಥಾಪನೆಯೊಂದಿಗೆ ನವರಾತ್ರಿ ಆರಂಭವಾಗಿದೆ. ಅ.10ರಂದು ಲಲಿತಾ ಪಂಚಮಿ, 13ರಂದು ದುರ್ಗಾಷ್ಟಮಿ, 14ರಂದು ಮಹಾನವಮಿ, ಖಂಡೆಪೂಜೆ ಹಾಗೂ ಆಯುಧ ಪೂಜೆ ನೆರವೇರಲಿವೆ. 15ರಂದು ವಿಜಯ ದಶಮಿ ನಡೆಯಲಿದ್ದು, 20ರಂದು ಶೀಗಿ ಹುಣ್ಣಿಮೆ ಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ನವರಾತ್ರಿಯಂದು ಧರ್ಮದರ್ಶನ ಮತ್ತು ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ.

    ಆದಿಚುಂಚನಗಿರಿಯಲ್ಲಿ ಶರನ್ನವರಾತ್ರಿ ಉತ್ಸವ

    ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಕಾಲಭೈರವೇಶ್ವರಸ್ವಾಮಿ ಸನ್ನಿಧಿಯಲ್ಲಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಕ್ಷೇತ್ರಾದಿ ದೇವತೆಗಳಿಗೆ ವಿಶೇಷ ಪೂಜೆ, ಹೋಮ, ಅಭಿಷೇಕ ಸೇರಿದಂತೆ ಹಲವು ಧಾರ್ವಿುಕ ಕೈಂಕರ್ಯ ನಡೆಯಲಿವೆ. ಪ್ರತಿದಿನ ಒಂದೊಂದು ಶಾಖಾಮಠದ ಶ್ರೀಗಳು ಶರನ್ನವರಾತ್ರಿ ಪೂಜೆಗಳನ್ನು ನೆರವೇರಿಸಲಿದ್ದು, ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತದೆ.

    ಮಂಗಳೂರು ದಸರಾದಲ್ಲಿ ಶೋಭಾಯಾತ್ರೆ ಇಲ್ಲ

    ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ‘ಮಂಗಳೂರು ದಸರಾ’ ಈ ಬಾರಿಯೂ ಸರಳವಾಗಿ ಜರುಗಲಿದೆ. ರಾತ್ರಿಯಿಂದ ಬೆಳಗ್ಗಿನವರೆಗೂ ನಡೆಯುತ್ತಿದ್ದ ಶೋಭಾಯಾತ್ರೆ ವೈಭವ ಕರೊನಾದಿಂದಾಗಿ ಈ ಬಾರಿಯೂ ಇರುವುದಿಲ್ಲ. ದೇವಳದ ನವೀಕರಣ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶದಂತೆ, ‘ನಮ್ಮ ದಸರಾ ನಮ್ಮ ಸುರಕ್ಷೆ’ ಎಂಬ ಘೊಷವಾಕ್ಯದಡಿ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಮಹೋತ್ಸವ ಆಯೋಜಿಸಲಾಗಿದೆ.

    ಮಂಗಳಾದೇವಿ ಸರಳ ಆಚರಣೆ

    ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿಯೂ ಸರಳ ನವರಾತ್ರಿ ಆಚರಣೆ ಇರುತ್ತದೆ. ಎಲ್ಲ ದಿನಗಳಲ್ಲೂ ದೇವಿಯನ್ನು ನವವಿಧಗಳಲ್ಲಿ ಅಲಂಕರಿಸ ಲಾಗುವುದು. 10ರಂದು ಲಲಿತಾ ಪಂಚಮಿ, 14ರಂದು ಮಹಾನವಮಿ, ಸಣ್ಣ ರಥೋತ್ಸವ, ವಿಜಯದಶಮಿಯಂದು ವಿದ್ಯಾರಂಭ, ತುಲಾಭಾರ, ರಥೋತ್ಸವ ನೆರವೇರಲಿದೆ. ಸಂತೆ ಏಲಂ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ.

    ಕೊಲ್ಲೂರು ರಥೋತ್ಸವಕ್ಕೆ ಭಕ್ತರಿಗಿಲ್ಲ ಅವಕಾಶ

    ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅ. 7ರಿಂದ 15ರವರೆಗೆ ಮಹಾ ನವರಾತ್ರಿ ಸರಳವಾಗಿ ನೆರವೇರಲಿದೆ. ಧಾರ್ವಿುಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಉಪಸ್ಥಿತಿಗೆ ಅವಕಾಶವಿಲ್ಲ. ದೇವಸ್ಥಾನದೊಳಗೆ ಅರ್ಚಕರು, ಸಿಬ್ಬಂದಿ ಸಾಂಪ್ರದಾಯಿಕವಾಗಿ ನಡೆಸುತ್ತಾರೆ. 14ರಂದು ನವಮಿ ರಥೋತ್ಸವಕ್ಕೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಕ್ಷೇತ್ರದಲ್ಲಿ ಭಕ್ತರಿಗೆ ಅಕ್ಷರಾಭ್ಯಾಸ ಸಹಿತ ಇತರ ಸೇವೆಗಳಿಗೆ ಅವಕಾಶವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts