More

    ಮನ ಗೆದ್ದ ಮಾನವ ಗ್ರಂಥಾಲಯ: ಮುಡಿಪು ಜನಶಿಕ್ಷಣ ಟ್ರಸ್ಟ್ ವಿಶಿಷ್ಟ ಪರಿಕಲ್ಪನೆ

    ಅನ್ಸಾರ್ ಇನೋಳಿ ಉಳ್ಳಾಲ
    ಇಲ್ಲಿ ಪುಸ್ತಕಗಳ ರಾಶಿಯಿಲ್ಲ, ಕಪಾಟು, ಅಲ್ಮಾರಗಳಿಲ್ಲ. ಪುಸ್ತಕದ ಮಾದರಿಯಲ್ಲಿ ಜೀವನಗಾಥೆ ಹೇಳಲಾಗುತ್ತದೆ. ಆಲಿಸಲು ಜನರು ಸೇರುತ್ತಾರೆ. ಒಂದೆರೆಡು ಗಂಟೆಯ ಈ ಜೀವನಗಾಥೆಗೆ ನೆರೆದವರ ಇಡೀ ಶರೀರ ಕಿವಿಯಾತ್ತದೆ. ಇದು ಮುಡಿಪುವಿನ ಮಾನವ ಗ್ರಂಥಾಲಯ.

    ಸಮಾಜದಲ್ಲಿ ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರು ತಮ್ಮ ಜೀವನ ಅನುಭವವನ್ನು ಇಲ್ಲಿ ಬಿಚ್ಚಿಡುತ್ತಾರೆ. ಜೀವನಗಾಥೆ ಹೇಳಲು ಬೇಕಿರುವುದು ಸಾಧನೆಯ ಅರ್ಹತೆ, ಕೇಳುಗರಿಗೆ ಬೇಕಿರುವುದು ಮುಕ್ತ ಮನಸ್ಸು, ಹೃದಯ ಶ್ರೀಮಂತಿಕೆ ಮಾತ್ರ.

    ಈ ವಿಶಿಷ್ಟ ಪರಿಕಲ್ಪನೆ ಈ ಭಾಗದ ಜನರ ವಿಶೇಷ ಆಕರ್ಷಣೆಗೆ ಪಾತ್ರವಾಗಿದೆ. ಮದ್ಯವ್ಯಸನಿಗಳಿಗೆ ಹೊಸ ಜೀವನ, ಸಮಾಜದಲ್ಲಿ ಕೀಳರಿಮೆಯಿಂದ ಬಳಲುತ್ತಿದ್ದವರಿಗೆ ಜೀವನೋತ್ಸಾಹ, ವಿದ್ಯೆ, ಉದ್ಯೋಗರಹಿತರಿಗೆ ಸ್ವಉದ್ಯೋಗದ ಮೂಲಕ ಜೀವನಕ್ಕೊಂದು ದಾರಿ, ಸ್ವಚ್ಛನಾಡಿನ ನಿರ್ಮಾಣಕ್ಕಾಗಿ ನಿರಂತರ ಜಾಗೃತಿ… ಹೀಗೆ ಸತತ ಪ್ರಯತ್ನದ ಮೂಲಕ ನಾಡಿಗೆ ಒಂದಲ್ಲ ಒಂದು ರೀತಿಯ ಕೊಡುಗೆ ನೀಡುತ್ತಿರುವ ಜನಶಿಕ್ಷಣ ಟ್ರಸ್ಟ್‌ನ ವಿಶಿಷ್ಟ ಪರಿಕಲ್ಪನೆ ಇದು.

    ವೇದಿಕೆಯಲ್ಲೇ ಕೂರದ, ಅಂಥ ಅರ್ಹತೆ ತಮ್ಮಲ್ಲಿದೆ ಎಂಬ ಪರಿಕಲ್ಪನೆಯೇ ಇಲ್ಲದವರಲ್ಲೂ ಮನೋಸ್ಥೈರ್ಯ ತುಂಬಿ ವೇದಿಕೆಯೇರಿಸುವಲ್ಲಿ ಜನಶಿಕ್ಷಣ ಟ್ರಸ್ಟ್ ಯಶಸ್ಸು ಕಂಡಿದೆ. ಈ ಕಾರಣದಿಂದಲೇ ಇಲ್ಲಿ ಕೂಲಿ ಕಾರ್ಮಿಕೆಯೂ, ಅನಕ್ಷರಸ್ಥರೂ, ಅಧಿಕಾರಿಗಳು, ಮಂತ್ರಿಗಳ ಮುಂದೆ ನಿರರ್ಗಳವಾಗಿ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ.

    ಯಶಸ್ವಿಯಾದ ಸಂಚಿಕೆ: ಇತ್ತೀಚಿನ ಕೆಲವರ್ಷಗಳಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಡಿಜಿಟಲ್ ಪುಸ್ತಕಗಳಿದ್ದರೂ ಓದುವವರು ಮಾತ್ರ ವಿರಳ. ಈ ಗ್ರಂಥಾಲಯ ಪುಸ್ತಕ ರಹಿತ. ಇಲ್ಲಿ ಮಾತೇ ಓದುವಿಕೆ, ಮನುಷ್ಯನೇ ಗ್ರಂಥ. ಸಾಧಕರು ತಮ್ಮ ಜೀವನಗಾಥೆಯನ್ನು ಎಳೆಎಳೆಯಾಗಿ ಜನರ ಮುಂದೆ ಪುಸ್ತಕದ ಪುಟದಂತೆ ತಿರುವಿಡುತ್ತಾರೆ. ತಮ್ಮ ಬದುಕಿನ ಕತೆಗೆ ಅಕ್ಷರ ರೂಪ ಕೊಡುವಷ್ಟು ಸಾಮರ್ಥ್ಯ ಎಲ್ಲರಲ್ಲೂ ಇಲ್ಲ. ಇದ್ದರೂ ಅದನ್ನು ಓದುವವರಾರು ಎನ್ನುವ ಪ್ರಶ್ನೆ. ಆದರೆ ಇಲ್ಲಿ ತಮ್ಮ ಜೀವನವನ್ನೇ ಕತೆಯಾಗಿ ರೂಪಿಸಲು ಅವಕಾಶವಿದೆ. ಇಲ್ಲಿ ಕೇಳುವವರಿಗೆ ಬರವಿಲ್ಲ. ಈಗಾಗಲೇ ಇಲ್ಲಿ ಏಳು ಮಂದಿ ಸಾಧಕರು ತಮ್ಮ ಜೀವನಗಾಥೆ ಹೇಳಿದ್ದಾರೆ. ಇವರಿಂದ ಹಲವರು ಪ್ರೇರಣೆ ಪಡೆದಿದ್ದಾರೆ, ಪ್ರತಿಯೊಂದು ಸಂಚಿಕೆಯೂ ಹೆಚ್ಚೆಚ್ಚು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜೀವನಗಾಥೆ ಹೇಳಲು ಅಂಜುತ್ತಿದ್ದವರೂ ನಾಮುಂದು, ತಾಮುಂದು ಎಂದು ಧಾವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪರಿಕಲ್ಪನೆ ಮುಡಿಪುವಿನಿಂದ ಇಡೀ ಜಿಲ್ಲೆ, ರಾಜ್ಯಕ್ಕೂ ವಿಸ್ತರಿಸಿದರೆ ಅಚ್ಚರಿಯಿಲ್ಲ.


    ಜನಜೀವನ ಹೆಸರಲ್ಲಿ ನಾವೆಲ್ಲ ಸಂಘಟಿಕರಾಗಿ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ಇಲ್ಲಿ ಜಾತಿ, ಧರ್ಮದ ಯಾವುದೇ ಹಂಗಿಲ್ಲದೆ ಒಗ್ಗಟ್ಟಾಗಿದ್ದೇವೆ. ಪರಸ್ಪರ ಕಷ್ಟ, ಸುಃಖಗಳನ್ನು ಅರಿತುಕೊಳ್ಳಲು, ಸಹಾಯ, ಸಹಕಾರ ನೀಡಲು ನಮಗೊಂದು ಅವಕಾಶ ಸಿಕ್ಕಿದೆ.
    -ರಾಧಾಕೃಷ್ಣ ರೈ ಉಮಿಯ, ಲಯನ್ಸ್ ಪ್ರಾಂತೀಯ ಸಲಹೆಗಾರ


    ಮನುಷ್ಯರ ಜೀವನಗಾಥೆ ಪುಸ್ತಕದಂತ ಓದಲು ಪ್ರೇರೇಪಿಸುವ ಮಾನವ ಗ್ರಂಥಾಲಯ ಎರಡು ದಶಕಗಳ ಹಿಂದೆ ಡೆನ್ಮಾರ್ಕ್‌ನಲ್ಲಿ ಆರಂಭಗೊಂಡು ಭಾರತ ಸಹಿತ 80 ದೇಶಗಳಲ್ಲಿ ಹಬ್ಬಿದೆ. ಇಂಥ ಕಾರ್ಯಕ್ರಮ ಮಾನವೀಯತೆ, ಪರಸ್ಪರ ಸಹಕಾರ ಭಾವನೆ ಬೆಳೆಸಲು ಪ್ರೇರೇಪಿಸುತ್ತದೆ.
    -ಶೀನ ಶೆಟ್ಟಿ, ಮಾಜಿ ಒಂಬುಡ್ಸ್‌ಮನ್, ನರೇಗಾ


    ಬಾಲ್ಯದ ದಿನಗಳಲ್ಲಿ ನಾವು ಎದುರಿಸಿದ್ದ ಕಷ್ಟಗಳು ಇಂದಿನ ಮಕ್ಕಳಿಗಿಲ್ಲ, ಆದರೂ ಅಂದಿನ ದಿನಗಳ ಬಗ್ಗೆ ಯುವಪೀಳಿಗೆಗೆ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಮಾನವ ಗ್ರಂಥಾಲಯ ಸೂಕ್ತ ವೇದಿಕೆ. ನಾವು ಅನುಭವಿಸಿದ ಸಂಕಷ್ಟ, ಸವಾಲುಗಳನ್ನು ಯಾವುದೇ ಅಳುಕಿಲ್ಲದೆ ಹೇಳಿ ಮನದಲ್ಲಿರುವ ಭಾರ ಕಡಿಮೆ ಮಾಡಲು ಸಾಧ್ಯವಾಗುತ್ತದೆ.
    -ಇಸ್ಮಾಯಿಲ್ ಬಾಳೆಪುಣಿ, ಮಾನವ ಗ್ರಂಥಾಲಯ ಫಲಾನುಭವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts