More

    ಪ್ರೊ.ಮುಜಾಫರ್ ಅಸ್ಸಾದಿ ವರದಿ ಜಾರಿಯಾಗಲಿ

    ಹುಣಸೂರು: ಪ್ರೊ.ಮುಜಾಫರ್ ಅಸ್ಸಾದಿ ವರದಿ ಜಾರಿಗೊಳಿಸಲು ಸರ್ಕಾರ ಮೀನಮೇಷ ಎಣಿಸುವ ಮೂಲಕ ಆದಿವಾಸಿಗಳಿಗೆ ಅನ್ಯಾಯವೆಸಗುತ್ತಿದೆ ಎಂದು ಆದಿವಾಸಿ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ ಬೇಸರ ವ್ಯಕ್ತಪಡಿಸಿದರು.

    ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಲ್ಕನೇ ಆದಿವಾಸಿ ಪಾರ್ಲಿಮೆಂಟ್ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. ನಾಲ್ಕು ವರ್ಷಗಳಿಂದ ಆದಿವಾಸಿ ಪಾರ್ಲಿಮೆಂಟ್ ಕೈಗೊಂಡ ನಿರ್ಣಯಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿ ಜಾರಿಗೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಪ್ರೊ.ಮುಜಾಫರ್ ಅಸ್ಸಾದಿ ನೇತೃತ್ವದ ಹೈಕೋರ್ಟ್ ರಚಿತ ಸಮಿತಿ ಹೈಕೋರ್ಟ್‌ಗೆ ತನ್ನ ವರದಿ ಸಲ್ಲಿಸಿ ವರ್ಷಗಳೇ ಸಂದಿವೆ. ಕಾಡಿನಿಂದ ಹೊರದೂಡಲ್ಪಟ್ಟ 3418 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಕೋರ್ಟ್ ಸೂಚಿಸಿದ್ದರೂ ಸರ್ಕಾರ ಈ ಕುರಿತು ಒಂದಡಿ ಹೆಜ್ಜೆಯನ್ನೂ ಇಟ್ಟಿಲ್ಲ. ಇದು ಈ ನೆಲದ ಮೂಲನಿವಾಸಿಗಳಿಗೆ ಮಾಡುತ್ತಿರುವ ಅನ್ಯಾಯವಲ್ಲದೆ ಮತ್ತೇನು? ಆದಿವಾಸಿ ಕುಟುಂಬಗಳು ಬೆಂಕಿಯಿಂದ ಬಾಣಲೆಗೆ ಬಿದ್ದು ಒದ್ದಾಡುವಂತಾಗಿದೆ ಎಂದು ಬೇಸರಿಸಿದರು.

    ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತನಾಡಿ, ಸರ್ಕಾರ ತನ್ನ ಕರ್ತವ್ಯ ಪಾಲಿಸದೆ ಲೋಪವೆಸಗಿದರೆ ನ್ಯಾಯ ಕೊಡುವವರು ಯಾರು? ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಕಾಪಾಡುವವರು ಯಾರು?ಎಂದು ಪ್ರಶ್ನಿಸಿದರು.

    ಜೇನುಕುರುಬ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಲಿಂಗಾಪುರದ ಬಸಪ್ಪ ಮಾತನಾಡಿ, ಸಂವಿಧಾನದ ಆಶಯದಂತೆ ಆದಿವಾಸಿಗಳನ್ನು ಸಮಾನತೆಯಿಂದ ಕಂಡು ಗೌರವದ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿದರು.

    ಅಧಿವೇಶನದಲ್ಲಿ 18 ನಿರ್ಣಯಗಳನ್ನು ಅಂಗೀಕರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳುಹಿಸುವ ತೀರ್ಮಾನ ಕೈಗೊಳ್ಳಲಾಯಿತು. ಕೇಂದ್ರ ಸರ್ಕಾರದಿಂದ ನೀಡುವ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಆದಿವಾಸಿ ಹೋರಾಟಗಾರ ಸೋಮಣ್ಣ ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು.
    ಅಧಿವೇಶನದಲ್ಲಿ ಡೀಡ್ ಸಂಸ್ಥೆ ನಿರ್ದೇಶಕ ಡಾ.ಶ್ರೀಕಾಂತ್, ಸಂಯೋಜಕರಾದ ಎ.ಪ್ರಕಾಶ್, ಆದಿವಾಸಿ ಗ್ರಾಪಂ ಸದಸ್ಯರು, ಯಜಮಾನರು, ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts