More

    ಪೊಲೀಸ್ ಸವಲತ್ತಿನಲ್ಲಿ ರಾಜ್ಯ ಮುಂಚೂಣಿ: ಕಾರ್ಕಳದಲ್ಲಿ ವಸತಿಗೃಹ ಲೋಕಾರ್ಪಣೆಗೊಳಿಸಿ ಸಚಿವ ಬೊಮ್ಮಾಯಿ

    ಕಾರ್ಕಳ: ಪೊಲೀಸರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅವರಿಗೆ ವಸತಿ ಸೌಲಭ್ಯ ಸಹಿತ ಅಗತ್ಯ ಸವಲತ್ತು ನೀಡಿರುವಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
    ಕಾರ್ಕಳ ಪೊಲೀಸ್ ಠಾಣಾ ಪರಿಸರದಲ್ಲಿ ನಿರ್ಮಾಣಗೊಂಡ 92.20 ಕೋಟಿ ರೂ. ವೆಚ್ಚದ ನೂತನ ಪೊಲೀಸ್ ವಸತಿಗೃಹ ಲೋಕಾರ್ಪಣೆಗೈದು ಮಾತನಾಡಿದರು.

    ಪೊಲೀಸ್ ಗೃಹ 20-25 ಯೋಜನೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಚಾಲನೆ ನೀಡಿದ್ದು, ರಾಜ್ಯದಲ್ಲಿ ಈ ಯೋಜನೆಯು 5 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಯೋಜನೆಯಲ್ಲಿ 10,400 ವಸತಿಗೃಹ ನಿರ್ಮಾಣವಾಗುವ ಮೂಲಕ ಶೇ.64 ರಷ್ಟು ವಸತಿ ಸೌಲಭ್ಯಗಳನ್ನು ಕಲ್ಪಿಸಿದಂತಾಗುತ್ತದೆ ಎಂದರು.
    ಕಳೆದ 10 ವರ್ಷಗಳಲ್ಲಿ ಮಾಡದಷ್ಟು ಸಾಧನೆಯನ್ನು ಪೊಲೀಸ್ ಇಲಾಖೆ ಕಳೆದ 10 ತಿಂಗಳಿನಲ್ಲಿ ಡ್ರಗ್ಸ್ ಪತ್ತೆ ಹಚ್ಚುವ ಮೂಲಕ ಮಾಡಿದೆ. ಸಿಂಥೆಟಿಕ್ ಡ್ರಗ್ಸ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಗರಿಷ್ಠ ಪ್ರಮಾಣದಲ್ಲಿ ಕೇಸ್ ದಾಖಲಿಸಲಾಗಿದೆ. ವಿದೇಶದಿಂದ ಡ್ರಗ್ಸ್ ರಾಜ್ಯಕ್ಕೆ ಬರುವುದು ನಿಯಂತ್ರಣಕ್ಕೆ ಬಂದಿದ್ದು, ಡ್ರಗ್ಸ್ ಜಾಲದಿಂದ ಸಮಾಜದ ಸ್ವಾಸ್ಥೃ ಕದಡುವ ಪ್ರಯತ್ನ ನಡೆಯುತ್ತಿದೆ. ಡ್ರಗ್ಸ್ ವಿರುದ್ಧ ಹೋರಾಟಕ್ಕೆ ಕಟ್ಟಿಬದ್ಧರಾಗಬೇಕು ಎಂದರು.
    ರಾಜ್ಯದಲ್ಲಿ 1 ಸಾವಿರ ಪೊಲೀಸ್ ಹುದ್ದೆ ನೇಮಕಗೊಳಿಸಲಾಗಿದೆ. ಮುಂದಿನ 3 ವರ್ಷದಲ್ಲಿ 16 ಸಾವಿರ ಪೊಲೀಸರ ನೇಮಕಾತಿ ಆಗಲಿದೆ. ನೇಮಕಾತಿ ಪಾರದರ್ಶಕವಾಗಿ ನಡೆಯಲಿದೆ ಎಂದರು. ಎಲ್ಲ ಜಿಲ್ಲೆಗಳಲ್ಲಿ ಸೈನ್ ಸ್ಟೇಶನ್‌ಗೆ ಸೈಬರ್ ತಜ್ಞರ ನೇಮಕಗೊಳಿಸುವುದು. ನಾಲ್ಕು ಎಫಿಶಿಯಲ್ ಲ್ಯಾಬ್ ಹೊಸದಾಗಿ ರಚನೆ ಮಾಡಲಿದ್ದೇವೆ. ಸೈಬರ್ ನಿಯಂತ್ರಣ ಮತ್ತು ಡ್ರಗ್ಸ್ ಪತ್ತೆಗೆ ಇದರಿಂದ ಅನುಕೂಲವಾಗಲಿದೆ ಎಂದರು.
    ಶಾಸಕ ವಿ.ಸುನೀಲ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

    ಗೇರು ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ತಾಪಂ ಅಧ್ಯಕ್ಷ ಸೌಭಾಗ್ಯ ಮಡಿವಾಳ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಟ್ ಉಪಸ್ಥಿತರಿದ್ದರು. ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ರೇ ಪ್ರಸ್ತಾವಿಸಿದರು. ಉಡುಪಿ ಎಸ್‌ಪಿ ಎನ್.ವಿಷ್ಣುವರ್ಧನ ಸ್ವಾಗತಿಸಿದರು. ವೃತ್ತ ನಿರೀಕ್ಷಕ ಸಂಪತ್‌ಕುಮಾರ್ ವಂದಿಸಿದರು. ನಿರಂಜನ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಂಜನಾ ಯು.ಜೆ. ಪ್ರಾರ್ಥಿಸಿದರು.
    ಡಿವೈಎಸ್ಪಿ ಭರತ್ ರೆಡ್ಡಿ, ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ಹೆಬ್ರಿ ಠಾಣೆ ಎಸ್‌ಐ ಸುಮಾ, ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts