More

    ನಾಳೆ ಮಂಗಳೂರು ವಿವಿ ಘಟಿಕೋತ್ಸವ, 117 ಮಂದಿಗೆ ಪಿಎಚ್‌ಡಿ, 10 ಚಿನ್ನದ ಪದಕ ಪ್ರದಾನ

    ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ 39ನೇ ವಾರ್ಷಿಕ ಘಟಿಕೋತ್ಸವ ಏ.10ರಂದು ಬೆಳಗ್ಗೆ 11ಕ್ಕೆ ವಿವಿ ಕ್ಯಾಂಪಸ್‌ನ ಮಂಗಳಾ ಸಭಾಂಗಣದಲ್ಲಿ ಜರುಗಲಿದೆ. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಆನ್‌ಲೈನ್‌ನಲ್ಲಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಈ ಬಾರಿ 117 ಮಂದಿ ಪಿಎಚ್‌ಡಿ ಪದವಿ(ಕಲೆ-27, ವಿಜ್ಞಾನ 63, ವಾಣಿಜ್ಯ 14, ಶಿಕ್ಷಣ 13) ಪಡೆಯಲಿದ್ದು, ಇದರಲ್ಲಿ 14 ವಿದೇಶಿ ವಿದ್ಯಾರ್ಥಿಗಳು. 10 ಮಂದಿಗೆ ಚಿನ್ನದ ಪದಕ ಮತ್ತು ವಿವಿಧ ಕೋರ್ಸ್‌ಗಳ 188 ರ‌್ಯಾಂಕ್‌ಗಳಲ್ಲಿ ಪ್ರಥಮ ರ‌್ಯಾಂಕ್ ಪಡೆದ 69( ಸ್ನಾತಕೋತ್ತರ ಪದವಿ-52, ಪದವಿ 17) ಮಂದಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು. 101 ಮಂದಿ ನಗದು ಬಹುಮಾನ ಪಡೆಯಲಿದ್ದಾರೆ. ಕೋವಿಡ್ ಮಾರ್ಗಸೂಚಿ ಮತ್ತು ಜಿಲ್ಲಾಡಳಿತದ ನಿರ್ದೇಶನದಂತೆ ಸೀಮಿತ ಸಂಖ್ಯೆಯ ಸಭಿಕರು ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.

    ಶೇ.77 ಫಲಿತಾಂಶ: 2019-20ನೇ ಸಾಲಿನಲ್ಲಿ ಒಟ್ಟು 43,743 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 33,806 ಮಂದಿ (ಶೇ.77.28) ಉತ್ತೀರ್ಣರಾಗಿದ್ದಾರೆ. ಪಿಎಚ್‌ಡಿಯಲ್ಲಿ ಎಲ್ಲ 117(ಶೇ.100), ಸ್ನಾತಕೋತ್ತರ ಪದವಿ ಶೇ.96.09, ಪದವಿ ಶೇ.73.80, ಸ್ನಾತಕೋತ್ತರ ಡಿಪ್ಲೊಮಾ ಶೇ.100 ಫಲಿತಾಂಶ ಪಡೆದಿದೆ. ಶೇ.37.38 ಹುಡುಗರು ಮತ್ತು ಶೇ.62.62 ಹುಡುಗಿಯರು ಉತ್ತೀರ್ಣರಾಗಿದ್ದಾರೆ ಎಂದು ಕುಲಸಚಿವ(ಪ್ರಭಾರ) ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.

    ಹಣಕಾಸು ಅಧಿಕಾರಿ ಪ್ರೊ.ನಾರಾಯಣ್, ವಿವಿ ಕಾಲೇಜು ಪ್ರಾಂಶುಪಾಲೆ ಡಾ.ಅನಸೂಯ ರೈ, ಪ್ರೊ.ಜಯಪ್ಪ, ಪ್ರೀತಿ ಕೀರ್ತಿ ಡಿಸೋಜ ಮೊದಲಾದವರಿದ್ದರು.

    ಗೌರವ ಡಾಕ್ಟರೆಟ್ ಇಲ್ಲ: ರಾಜ್ಯಪಾಲರಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಈ ಬಾರಿ ಗೌರವ ಡಾಕ್ಟರೆಟ್ ನೀಡಲಾಗುತ್ತಿಲ್ಲ ಎಂದು ಯಡಪಡಿತ್ತಾಯ ತಿಳಿಸಿದರು. ಈ ಬಾರಿ ಹೆಸರಿನ ಪಟ್ಟಿ ರಾಜ್ಯಪಾಲರಿಗೆ ಕಳುಹಿಸುವಾಗ ತಡವಾಗಿತ್ತು. 45 ದಿನ ಮುಂಚಿತವಾಗಿ ಕಳುಹಿಸಬೇಕಾಗಿದೆ. ಈ ಬಾರಿ, ಡಿಎಸ್ಸಿ ಮತ್ತು ಡಿಲಿಟಿ ಪದವಿಯೂ ಪ್ರದಾನಿಸಲ್ಪಡುವುದಿಲ್ಲ ಎಂದರು.

    ರಾಜ್ಯಪಾಲರು ಗೈರು: ವಿವಿ ಕುಲಾಧಿಪತಿಯಾಗಿರುವ ರಾಜ್ಯಪಾಲ ರೂಢಾಭಾಯಿ ವಜೂಭಾಯಿ ವಾಲಾ ಮತ್ತು ಸಹಕುಲಾಧಿಪತಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಘಟಿಕೋತ್ಸವಕ್ಕೆ ಗೈರುಹಾಜರಾಗಲಿದ್ದಾರೆ. ಆ ಹಿನ್ನೆಲೆಯಲ್ಲಿ ನಿಯಮಾವಳಿಯಂತೆ ಸಹಕುಲಾಧಿಪತಿಯ ಜವಾಬ್ದಾರಿ ನಾನು ವಹಿಸಲಿದ್ದು, ಕುಲಪತಿಯ ಜವಾಬ್ದಾರಿಯನ್ನು ಕುಲಸಚಿವ(ಪ್ರಭಾರ) ಪ್ರೊ.ಪಿ.ಎಲ್ ಧರ್ಮ ವಹಿಸಿ ಘಟಿಕೋತ್ಸವ ನಿರ್ವಹಿಸಲಿದ್ದಾರೆ ಎಂದು ಯಡಪಡಿತ್ತಾಯ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts