More

    ಮ.ಬೆಟ್ಟದ ರಸ್ತೆ ಬದಿ ಭೂ ಕುಸಿತ

    ಮಹದೇಶ್ವರ ಬೆಟ್ಟ: ಮಹದೇಶ್ವರಬೆಟ್ಟದ ಹಾದಿ ಭಾರಿ ಮಳೆಗೆ ಮತ್ತೆ ದುರ್ಗಮವಾಗಿದ್ದು, ತಾಳುಬೆಟ್ಟದ ಮಾರ್ಗದಲ್ಲಿ ಅಲ್ಲಲ್ಲಿ ರಸ್ತೆ ಬದಿ ಭೂ ಕುಸಿತ ಉಂಟಾಗಿದೆ.


    ತಾಳುಬೆಟ್ಟದಿಂದ ಸುಮಾರು 18 ಕಿ.ಮೀ. ದೂರದಲ್ಲಿರುವ ಮಹದೇಶ್ವರರ ಪುಣ್ಯಕ್ಷೇತ್ರ ಸುಮಾರು 27 ತಿರುವುಗಳನ್ನು ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 3800 ಅಡಿಯಷ್ಟು ಎತ್ತರದ ಪ್ರದೇಶದಲ್ಲಿ ಪ್ರಯಾಣಿಸುವ ಮಾರ್ಗ ಇದಾಗಿದೆ. ಕರೊನಾ ಹಾವಳಿಯ ನಡುವೆಯೂ ಮಾದಪ್ಪನ ದರ್ಶನವನ್ನು ಭಕ್ತರು ಇಂದಿಗೂ ನಿಲ್ಲಿಸಿಲ್ಲ.


    ಮೂರ‌್ನಾಲ್ಕು ದಿನಗಳ ಹಿಂದೆ ಈ ಭಾಗದಲ್ಲಿ ಬಿದ್ದ ಭಾರಿ ಮಳೆಗೆ ತಾಳುಬೆಟ್ಟದಲ್ಲಿ 5 ಮತ್ತು 9ನೇ ತಿರುವಿನಲ್ಲಿ ಭೂ ಕುಸಿತ ಉಂಟಾ ಗಿದೆ. 4 ಮತ್ತು 5 ನೇಯ ತಿರುವಿನಲ್ಲಿ 7 ವರ್ಷದಿಂದ ರಸ್ತೆ ತಡೆಗೋಡೆ ಇಲ್ಲವಾಗಿದ್ದು, ಸುಮಾರು 80ರಿಂದ 90 ಅಡಿಗಳಷ್ಟು ಆಳದ ಪ್ರಪಾತ ಬಾಯ್ದೆರೆದಿರುವ ಈ ಸ್ಥಳ ಮಳೆ ಬಂದಾಗ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

    ನಾಮಫಲಕ ಹಾಕಿಲ್ಲ: ತಾಳುಬೆಟ್ಟದ 4 ಮತ್ತು 5ನೇ ತಿರುವಿನ ಬಳಿಯ ರಸ್ತೆ ಬದಿಯಲ್ಲಿ ಸೃಷ್ಟಿಯಾಗಿರುವ ಕಂದಕ ಮುಂದಿನ ದಿನಗಳಲ್ಲಿ ವಾಹನ ಸವಾರರ ಪ್ರಾಣಕ್ಕೆ ತಂದೊಡ್ಡಲಿರುವ ಅಪಾಯ ತಪ್ಪಿಸುವ ನಾಮಫಲಕವನ್ನು ಹಾಕಿಲ್ಲ.


    ಸಂಬಂಧಪಟ್ಟ ಅಧಿಕಾರಿಗಳು ಒಂದು ದಿನ ಕಳೆದರೂ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷ ಮಳೆ ಬಂದು ಮಲೆಮಹದೇಶ್ವರ ಬೆಟ್ಟದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಮಾರ್ಗಮಧ್ಯೆದಲ್ಲಿ ಭಾರಿ ಭೂ ಕುಸಿತ ಉಂಟಾಗಿ ರಸ್ತೆ ಮಾರ್ಗಗಳು ಬಂದ್ ಆಗಿದ್ದವು. ತಾಳುಬೆಟ್ಟದ 5 ಮತ್ತು 9ನೇ ತಿರುವಿನಲ್ಲಿ ಭೂಕುಸಿತವಾಗಿದ್ದಾಗ ಈ ಹಿಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸ್ಥಳ ಪರೀಶೀಲನೆ ನಡೆಸಿ ಈ ಎರಡು ತಿರುವಿನ ತಡೆಗೂಡೆಯನ್ನು ಮರು ನಿರ್ಮಾಣ ಮಾಡಿಸಲು ಸೂಚನೆ ನೀಡಿದ್ದರು. ಅದರಂತೆ ತಡೆಗೋಡೆ ನಿರ್ಮಿಸುವ ಕಾರ್ಯವೂ ನಡೆದಿತ್ತು. ಆದರೆ ಇದೀಗ ಮತ್ತೆ 5ನೇ ತಿರುವಿನ ಬಳಿ ಮಳೆಗೆ ಭೂಕುಸಿತ ಉಂಟಾಗಿರುವುದು ಈ ಹಿಂದಿನ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿರುವುದನ್ನು ಸ್ಪಷ್ಟವಾಗಿ ತಿಳಿಸಿಕೊಡುತ್ತಿದೆ.


    ಎಚ್ಚರ ತಪ್ಪಿದರೆ ಅನಾಹುತ: ಮಲೆ ಮಹೇಶ್ವರ ಬೆಟ್ಟಕ್ಕೆ ಕೋವಿಡ್ ಹರಡುವಿಕೆಯನ್ನು ಲೆಕ್ಕಿಸದೆ ಭಕ್ತರು ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ದೈಹಿಕ ಅಂತರ ಕಾಯ್ದುಕೊಂಡು ಸೋಂಕು ತಗುಲದಂತೆ ಎಚ್ಚರ ವಹಿಸಿ ಜೀವ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ರಸ್ತೆಯ ತಿರುವಿನಲ್ಲಿ ಉಂಟಾಗಿರುವ ಭೂ ಕುಸಿತ ಮತ್ತು ಕಂದಕ ಭಕ್ತರು ಎಚ್ಚರ ತಪ್ಪಿದರೆ ಅನಾಹುತ ಸಂಭವಿಸಲು ದಾರಿ ಮಾಡಿಕೊಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts