More

    ವಿದ್ಯುತ್ ಪೂರೈಕೆ, ಟಿಸಿ ಅಳವಡಿಕೆಯಲ್ಲಿ ತಾರತಮ್ಯ : ಮಾಗಡಿ ತಾಲೂಕಿನ ಹೊಸಪಾಳ್ಯದಲ್ಲಿ ಬೆಸ್ಕಾಂ ವಿರುದ್ಧ ರೈತರ ಪ್ರತಿಭಟನೆ ವಿಳಂಬ ಕ್ರಮಕ್ಕೆ ವಿರೋಧ

    ಮಾಗಡಿ : ಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಟಿಸಿ ಅಳವಡಿಸುವಲ್ಲಿ ಬೆಸ್ಕಾಂ ಅಧಿಕಾರಿಗಳ ತಾರತಮ್ಯ ನೀತಿ ವಿರೋಧಿಸಿ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು.
    ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ. ಧನಂಜಯ, ಕಾಳಾರಿ ಕಾವಲ್, ಚಿಕ್ಕಮುದಿಗೆರೆ, ಹುತಿದುರ್ಗ ಮತ್ತು ಎಲ್ಲೂರು ಗ್ರಾಪಂ ವ್ಯಾಪ್ತಿಗಳಲ್ಲಿ ವಿದ್ಯುತ್ ಸಮಸ್ಯೆಯಿದ್ದು, ಶಿವನಸಂದ್ರ ಸ್ಟೇಷನ್‌ನಿಂದ ಲಿಂಕ್‌ಲೈನ್ ಹಾಕಬೇಕಿದೆ. ಮೂರು ವರ್ಷಗಳಿಂದ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಮದ್ಯೆ ಹೊಂಗೆ ಮರದ ಕವಡನ್ನು ಕತ್ತರಿಸಿದ್ದು ಏಕೆ ಎಂದು ಗಲಾಟೆ ಮಾಡಿ ವಿದ್ಯುತ್ ಲೈನ್ ಎಳೆಯಲು ಬಿಡದೆ ಶಾಸಕರು, ವಿರೋಧ ಪಕ್ಷದ ಮುಖಂಡರು ತೊಂದರೆ ನೀಡುತ್ತಿದ್ದಾರೆ.

    ಬೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರೆ 50 ಸಾವಿರ ರೂ. ನೀಡಿ ಲೈನ್ ಎಳೆದುಕೊಂಡು ಹೋಗಿ ಎನ್ನುತ್ತಾರೆ. ಆದರೆ ರೈತರ ಬಳಿ ಇಷ್ಟೊಂದು ಹಣವಿಲ್ಲ. ಎಷ್ಟೇ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಮಾತ್ರ ಜಗ್ಗಿಲ್ಲ. ಇಂದು ಕೊನೆಯದಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಎ.1ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

    ತಾಪಂ ಸದಸ್ಯರಾದ ಶಿವರಾಜು, ಸುರೇಶ್, ಚಿಕ್ಕಮುದಿಗೆರೆ ಗ್ರಾಪಂ ಅಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷರಾದ ರವೀಶ್, ಪ್ರಮೀಳ ರಾಜಣ್ಣ, ಚಂದ್ರಣ್ಣ, ನಾಗಣ್ಣ, ಗಂಗರಾಜು, ಅಂಬಿಕಾ ಸ್ವಾಮಿ, ಮಾಜಿ ಸದಸ್ಯರಾದ ಮುತ್ತು ರಾಜು, ಪಾಪಣ್ಣ, ಕಿರಣ್, ಗಂಗಾಧರ್, ವಿಶ್ವನಾಥ್, ರೈತಮುಖಂಡರಾದ ಪಟೇಲ್ ಹನುಮಂತಯ್ಯ, ಸಿ.ಜಿ.ರಾಮಕೃಷ್ಣಯ್ಯ, ಕಾಳಾರಿ ಪುಟ್ಟರಾಜು ಮುಂತಾದವರು ಇದ್ದರು.
    ಸುಮಾರು ಒಂದು ಗಂಟೆ ಪ್ರತಿಭಟನೆ ನಡೆಸಲಾಯಿತು, ರಸ್ತೆ ಸಂಚಾರ ತಡೆಯಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಯಿತು, ಯಾವುದೆ ಅಹಿತಕ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

    2500 ರೈತರಿಂದ ತಲಾ ₹28 ಸಾವಿರ : ಕುದೂರು ಬೆಸ್ಕಾಂ ವ್ಯಾಪ್ತಿಯಲ್ಲಿ 1500 ಟಿಸಿಗಳು ಸುಟ್ಟುಹೋಗಿದ್ದು 2 ತಿಂಗಳು ಕಳೆದರೂ ಹೊಸ ಟಿಸಿಗಳನ್ನು ಅಳವಡಿಸಿಲ್ಲ. 3 ವರ್ಷಗಳ ಹಿಂದೆ 2500 ರೈತರಿಂದ ಟಿಸಿ ಅಳವಡಿಸಲು ತಲಾ 28 ಸಾವಿರ ರೂ. ಕಟ್ಟಿಸಿಕೊಂಡಿದ್ದು, ಇದುವರೆಗೂ ಹೊಸ ಟಿಸಿ ಅಳವಡಿಸಿಲ್ಲ. ಅನುಕೂಲ ಪಡೆಯಲು ರೈತರು ಸಾಲ ಮಾಡಿ ಹಣ ನೀಡಿದ್ದಾರೆ. ಕೊರೆಸಿದ ಕೊಳವೆ ಬಾವಿಗಳು ಬತ್ತಿಹೋಗಿವೆ. ಈ ಬಗ್ಗೆ ಶಾಸಕರು, ಅಧಿಕಾರಿಗಳು ಗಮನ ಹರಿಸುತ್ತಿಲ. ರೈತರ ಐಪಿ ಸೆಟ್‌ಗಳಿಗೆ ವಿದ್ಯುತ್ ಕಡಿತ ಮಾಡದೆ ಸಹಕರಿಸುವಂತೆ ಅಧಿಕಾರಿಗಳಲ್ಲಿ ಎಂ.ಕೆ.ಧನಂಜಯ ಮನವಿ ಮಾಡಿದರು.

    ಎ.1ರ ಒಳಗೆ ಸಮರ್ಪಕ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು, ಐಪಿ ಸೆಟ್‌ಗಳಿಗೆ ಟಿಸಿ ಅಳವಡಿಸುವ ಬಗ್ಗೆ ಆಶ್ವಾಸನೆ ನೀಡಲು ಸಾಧ್ಯವಿಲ್ಲ. ಎರಡು ದಿನಗಳ ಅವಕಾಶ ಬೇಕು.
    ಮಂಜುನಾಥ್ ಇಇ, ಬೆಸ್ಕಾಂ, ಮಾಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts