More

    ಮಾಗಡಿ ಬಳಿ ಮತ್ತೆರಡು ಚಿರತೆ ಸೆರೆ

    ಮಾಗಡಿ: ತಾಲೂಕಿನ ಬೋಡಗನಪಾಳ್ಯ ಹಾಗೂ ತಗ್ಗೀಕುಪ್ಪೆಯಲ್ಲಿ ಮಂಗಳವಾರ ಎರಡು ಚಿರತೆಗಳು ಸೆರೆಸಿಕ್ಕ ಬೆನ್ನಲ್ಲೇ ಬುಧವಾರ ತೊರೆಚೇನಹಳ್ಳಿ, ಹೊಸಪಾಳ್ಯದಲ್ಲಿ ಮತ್ತೆರಡು ಚಿರತೆ ಸೆರೆಯಾಗಿವೆ.

    ತೊರೆಚೇನಹಳ್ಳಿ ಗ್ರಾಮದ ಬೈಲನರಸಯ್ಯ, ಸುಮಲತಾ ಎಂಬುವವರು ಮಂಗಳವಾರ ಹಸು, ಕುರಿಗಳನ್ನು ಮೇಯಿಸುತ್ತಿದ್ದಾಗ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ದಾಳಿ ನಡೆದ ಸ್ಥಳದ ಸಮೀಪವೇ ಮಂಗಳವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿನಲ್ಲಿ ಬುಧವಾರ ಬೆಳಗ್ಗೆ 4 ವರ್ಷದ ಚಿರತೆ ಸೆರೆಯಾಗಿದ್ದು, ಹೊಸಪಾಳ್ಯ ಬಳಿ ಬೋನಿಗೆ 3 ವರ್ಷದ ಮತ್ತೊಂದು ಚಿರತೆ ಸೆರೆಸಿಕ್ಕಿದೆ.

    ಕೊತ್ತಗಾನಹಳ್ಳಿಯಲ್ಲಿ ವೃದ್ಧೆಯನ್ನು ಬಲಿಪಡೆದಿದ್ದ ಸ್ಥಳದಿಂದ ತೊರೆಚೇನಹಳ್ಳಿ ಅರ್ಧ ಕಿಲೋಮೀಟರ್ ದೂರದಲ್ಲಿದೆ.
    ಕೊತ್ತಗಾನಹಳ್ಳಿ ಮತ್ತು ಹೊಸಪಾಳ್ಯ ವ್ಯಾಪ್ತಿಯಲ್ಲಿ ಮೇ 9ರಿಂದ ಇದುವರೆಗೂ 10 ಚಿರತೆ ಹಾಗೂ ಎರಡು ಮರಿ ಚಿರತೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

    ಮೇ 26ರಂದು ಬೋಡಗನಪಾಳ್ಯದ ಬಳಿ ತಪ್ಪಿಸಿಕೊಂಡ ಹೆಣ್ಣು ಚಿರತೆ ಈ ಭಾಗದಲ್ಲಿ ಭೀತಿ ಉಂಟುಮಾಡಿದೆ. ಈ ಚಿರತೆ ವೀರಲಿಂಗಯ್ಯ ಎಂಬುವರ ತೋಟದ ಬಳಿ ಬೆಳಗಿನ ಹೊತ್ತು ಕಾಣಿಸಿಕೊಳ್ಳುತ್ತಿದೆ. ಸಂಜೆ ನಂತರ ಗ್ರಾಮಗಳ ಬಳಿ ಪ್ರತ್ಯಕ್ಷವಾಗುತ್ತಿದೆ. ಇದರಿಂದ ಗ್ರಾಮಸ್ಥರು ಜಮೀನುಗಳ ಬಳಿ ತೆರಳಲು ಭಯಪಡುತ್ತಿದ್ದಾರೆ.

    20 ಸಿಬ್ಬಂದಿ ಚಿರತೆ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದು, ಬೋನುಗಳನ್ನಿಟ್ಟು ಸೆರೆಗೆ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ 5 ಚಿರತೆಗಳಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

    ಚಿರತೆಗಳು ಬೋನಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ವಲಯರಣ್ಯಾಧಿಕಾರಿ ಪುಷ್ವಲತಾ, ಉಪವಲಯ ಅರಣ್ಯಾಧಿಕಾರಿ ಚಿದಾನಂದ್, ಸಿಬ್ಬಂದಿಗಳಾ ಆನಂದ್, ಅಂಜನಮೂರ್ತಿ, ಗಂಗಾಧರ್ ಬೇಟಿ ನೀಡಿ ಚಿರತೆಯನ್ನು ಕೊಂಡೊಯ್ದರು. ಚಿರತೆ ನೋಡಲು ಸಾವಿರಾರು ಮಂದಿ ಮುಗಿಬಿದ್ದಿದ್ದರು.

    ತನಿಖೆಗೆ ಒತ್ತಾಯ: ತೊರೆಚೇನಹಳ್ಳಿ, ಬೋಡಗನಪಾಳ್ಯ, ಕೊತ್ತಗಾನಹಳ್ಳಿ, ಕದರಯ್ಯನಪಾಳ್ಯ, ದಾಸೇಗೌಡನ ಪಾಳ್ಯ, ಹೊಸಪಾಳ್ಯ ಗ್ರಾಮಗಳು ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿದ್ದು, ಇಲ್ಲಿಂದ ಸ್ವಲ್ಪ ದೂರದಲ್ಲೇ ಬಂಟರಗುಪ್ಪೆ ಅರಣ್ಯ ಪ್ರದೇಶವಿದೆ. ಅರಣ್ಯದಲ್ಲಿ ನೀರು, ಆಹಾರ ಸಿಗದ ಕಾರಣ ಚಿರತೆಗಳು ಗ್ರಾಮಗಳಿಗೆ ಬಂದು ಮನುಷ್ಯರನ್ನು ಬಲಿ ಪಡೆಯುತ್ತಿವೆ ಎನ್ನಲಾಗಿದೆ. ಕಾಡು ಮತ್ತು ಕಾಡುಪ್ರಾಣಿಗಳ ಸಂರಕ್ಷಣೆಗಾಗಿ ಅಹಾರ, ನೀರು ಒದಗಿಸಲು ಇಂಗುಗುಂಡಿ, ಕೃಷಿ ಹೊಂಡ ನಿರ್ಮಾಣದಂತಹ ಕಾಮಗಾರಿಗಳಿಗೆ ಸರ್ಕಾರ ಪ್ರತಿವರ್ಷ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದ್ದರೂ ಕಾಡುಪ್ರಾಣಿಗಳಿಗೆ ಅನುಕೂಲವಾಗುತ್ತಿಲ್ಲ ಎನ್ನುವುದಾದರೆ ಕಾಡುಗಳನ್ನು ರಕ್ಷಿಸಲು ಸರ್ಕಾರವೇಕೆ ಹಣ ನೀಡಬೇಕು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಮುತ್ತರಾಯಗುಡಿಪಾಳ್ಯದ ಲಕ್ಷ್ಮೀಕಾಂತ್ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts