More

    ದೇಶವಾಸಿಗಳೆಲ್ಲರಿಗೂ ಭಾರತೀಯತೆಯೇ ಮುಖ್ಯ

    ಮಡಿಕೇರಿ: ದೇಶದಲ್ಲಿರುವ ಎಲ್ಲರಿಗೂ ಭಾರತೀಯತೆಯೇ ಮುಖ್ಯವಾಗಬೇಕು ಎಂದು ಏರ್‌ಮಾರ್ಷಲ್ ಕೆ.ಸಿ.ಕಾರ್ಯಪ್ಪ(ನಿವೃತ್ತ) ಹೇಳಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಜಿಲ್ಲಾಡಳಿತ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಸಹಕಾರದಲ್ಲಿ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಂಗಳವಾರ ಏರ್ಪಡಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 121ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ತಮ್ಮ ತಂದೆಯ ರಾಷ್ಟಪ್ರೇಮ, ಎಲ್ಲಕ್ಕಿಂತಲೂ ದೇಶ ಮೊದಲು ಎನ್ನುವ ಮನೋಭಾವ ನೆನಪಿಸಿಕೊಂಡ ಅವರು, ಸಹೋದರಿ ಜತೆ ತನ್ನನ್ನು ನವದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಗಾಂಧಿ ಸಮಾಧಿ ಬಳಿಗೆ ಕರೆದುಕೊಂಡು ಹೋಗಿ ಮಹಾತ್ಮನ ಎದುರಿನಲ್ಲಿ ದೇಶಭಕ್ತಿಯ ಮಹತ್ವದ ಪಾಠ ಮಾಡಿದ್ದರು. ಭಾರತೀಯತೆಯ ಮುಂದೆ ದೇಹದ ಬಣ್ಣ, ಜಾತಿ, ಧರ್ಮ, ಅಂತಸ್ತು ಯಾವುದು ಕೂಡ ಮುಖ್ಯವಾಗುವುದಿಲ್ಲ. ಭಾರತಕ್ಕಾಗಿ ಭಾರತೀಯನಾಗಿ ಇರುವುದರ ಕಡೆಗೆ ನಮ್ಮ ತುಡಿತ ಇರಬೇಕು ಎಂದು ಹೇಳಿದರು.

    ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಕೊಡಗು ಜಿಲ್ಲೆಯನ್ನು ಪ್ರವಾಸಿಗರ ಸ್ವರ್ಗ ಎಂದೇ ಗುರುತಿಸಲಾಗುತ್ತಿದ್ದರೂ ಜಿಲ್ಲೆಯ ಹೆಸರು ಹೇಳಿದ ಕೂಡಲೇ ನೆನಪಾಗುವುದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ. ಅವರಿಂದಾಗಿಯೇ ದೇಶಾದ್ಯಂತ ಕೊಡಗಿನ ಹೆಸರು ಪ್ರಸಿದ್ಧವಾಗಿದೆ. ಭಾರತ ದೇಶ ಇರುವ ತನಕವೂ ಕಾರ್ಯಪ್ಪ ಹೆಸರು ಚಿರಸ್ಥಾಯಿಯಾಗಿ ಇರುತ್ತದೆ. ಕಾರ್ಯಪ್ಪ ಜನಿಸಿದ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಹೆಮ್ಮೆಯಾಗುತ್ತಿದೆ ಎಂದರು.

    ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಹ್ಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಸಚಿವ ಎಂ.ಸಿ.ನಾಣಯ್ಯ, ಜಿಪಂ ಸಿಇಒ ಕೆ.ಲಕ್ಷ್ಮೀಪ್ರಿಯಾ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕೆ.ಸಿ.ಸುಬ್ಬಯ್ಯ(ನಿವೃತ್ತ), ಸಂಚಾಲಕ ಮೇಜರ್ ಬಿ.ಎ.ನಂಜಪ್ಪ(ನಿವೃತ್ತ), ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ರಿಜಿಸ್ಟಾರ್ ಎ.ಸಿ.ಗಿರೀಶ್ ಮತ್ತಿತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts