More

    ಅಧಿಕಾರಕ್ಕಾಗಿ ಅಲ್ಪಸಂಖ್ಯಾತರ ಅವಹೇಳನ, ಕುರ್ಚಿಗಾಗಿ ಅಶಾಂತಿ ಸೃಷ್ಠಿ, ಶಾಸಕ ಯತ್ನಾಳ ಮೇಲೆ ಸುಮೊಟೊ ದಾಖಲಿಸಿ….!

    ವಿಜಯಪುರ: ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗ ಮುಸ್ಲಿಂ ಟೋಪಿ ಧರಿಸಿ, ನಮಾಜ್ ಬಿದ್ದು, ಕೆಜಿಗಟ್ಟಲೇ ಬಿರಿಯಾನಿ ತಿಂತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇದೀಗ ಅಧಿಕಾರಕ್ಕೋಸ್ಕರ ಅಲ್ಪಸಂಖ್ಯಾತರ ಅವಹೇಳನ ನಡೆಸಿದ್ದಾರೆ. ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಮುವಾದ ಸೃಷ್ಠಿಸುತ್ತಿದ್ದಾರಲ್ಲದೇ ಗಲಭೆ ಎಬ್ಬಿಸುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕೆಂದು ಅಲ್ಪಸಂಖ್ಯಾತ ಮುಖಂಡ, ಸಾಮಾಜಿಕ ಹೋರಾಟಗಾರ ಎಂ.ಸಿ. ಮುಲ್ಲಾ ಆಗ್ರಹಿಸಿದರು.

    ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚುನಾವಣೆ ಸಮೀಪಿಸುತ್ತಿದ್ದಂತೆ ಸೋಲುವ ಹತಾಶೆಯಿಂದಾಗಿ ಕೋಮು ಗಲಭೆ ಎಬ್ಬಿಸಲು ಹುನ್ನಾರ ನಡೆಸಿದ್ದಾರೆ. ಹಾಗಂತ ಇಂಟಿಲಿಜೆನ್ಸ್ ವರದಿ ಕೂಡ ಇದೆ. ಸಾಬರಿಗೆ ಮತ ಹಾಕಬೇಡಿ ಎನ್ನುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಕೆಲಸ ಮಾಡಿದ್ದಾರೆ. ಪದೇ ಪದೇ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಯತ್ನಾಳರ ಮೇಲೆ ಕೂಡಲೇ ಪ್ರಕರಣ ದಾಖಲಿಸದೇ ಹೋದರೆ ಮುಂದಾಗುವ ಅನಾಹುತಗಳಿಗೆ ಪೊಲೀಸ್ ಇಲಾಖೆಯೇ ಹೊಣೆ ಹೊರಬೇಕಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.

    ಒಂದು ಕೋಮಿನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಯತ್ನಾಳ ಆ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಯತ್ನ ನಡೆಸಿದ್ದಾರೆ. ತಮ್ಮ ಖುರ್ಚಿ ಉಳಿಸಿಕೊಳ್ಳಲು ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ. ದ್ವೇಷ ಭಾಷಣ ಮಾಡುವವರ ಮೇಲೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕೆಂದು ಸುಪ್ರಿಂ ಕೋರ್ಟ್ ಆದೇಶ ಹೊರಡಿಸಿದ್ದರೂ ಪೊಲೀಸ್ ಇಲಾಖೆ ಮೌನವಾಗಿದೆ ಎಂದರು.

    ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಯತ್ನಾಳ, ಸಾಬರಿಗೆ ಮತ ಹಾಕಬೇಡಿ ಎನ್ನುವ ಮೂಲಕ ಒಂದು ಧರ್ಮದ ಭಾವನೆಗೆ ಧಕ್ಕೆ ತಂದಿದ್ದಾರೆ. ಪದೇ ಪದೇ ಸುಳ್ಳು ಹೇಳುವುದು, ಇಲ್ಲ ಸಲ್ಲದ ಹೇಳಿಕೆ ನೀಡುವುದು, ಭೋಗಸ್ ಹೇಳುವುದು ಇವರ ಚಾಳಿ. ಹೀಗಾಗಿ ಇವರು ಬಸನಗೌಡ ಅಲ್ಲ ಭೋಗಸ್ ಗೌಡ ಎಂದ ಮುಲ್ಲಾ, ಹುಲಿ ಎನ್ನಿಕೊಂಡವರು ಹುಲಿಯಾಗಿ ಘರ್ಜಿಸಬೇಕು. ಬೊಗಳುವ ಕೆಲಸ ಮಾಡಬಾರದು ಎಂದರು.

    ಶಿವಾಜಿ ಮಹಾರಾಜರನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ಯತ್ನಾಳ ಮೊದಲು ಶಿವಾಜಿಯ ಇತಿಹಾಸ ಅರಿತುಕೊಳ್ಳಬೇಕು. ಶಿವಾಜಿ ಮಹಾರಾಜರು ಜಾತ್ಯತೀತ ನಾಯಕರಾಗಿದ್ದರು. ಅವರು ಅಫಜಲಖಾನ್‌ಗೆ ಹೊಡೆಯಲು ಬಳಸಿದ ಉಕ್ಕಿನ ಉಗುರಿನ ಆಯುಧವನ್ನು ತಯಾರಿಸಿದ್ದು ರುಸ್ತುಂ ರಜಾಯಿ ಎಂಬ ಮುಸ್ಲಿಂ ಬಲಗೈ ಬಂಟ. ಅಫಜಲ್ ಖಾನ್‌ನ ಸಲಹೆಗಾರ ಶ್ರೀಕೃಷ್ಣಮೂರ್ತಿ ಭಾಸ್ಕರ್ ಕುಲಕರ್ಣಿ ಎಂಬುವರಿದ್ದರು. ಅವರೆಲ್ಲ ಸೌಹಾರ್ದಯುತವಾಗಿದ್ದರು. ಆದರೆ ಇವರು ಕೇವಲ ಜಗಳ ಹಚ್ಚಲು ಮಾತ್ರ ಶಿವಾಜಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.
    ಮುಖಂಡರಾದ ಮಹಾದೇವ ರಾವಜಿ, ಎಚ್.ಎಸ್. ಕಬಾಡೆ, ಬಸವರಾಜ ಬಿ.ಕೆ, ಫಯಾಜ್ ಕಲಾದಗಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts