More

    ಒಕ್ಕಲಿಗರು ಉದ್ಯಮದಲ್ಲಿಯೂ ಸಾಧನೆ ಮಾಡಲಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಶಯ

    ಬೆಂಗಳೂರು: ಕೃಷಿಯಲ್ಲಿ ಬೆವರು ಸುರಿಸಿ ಒಕ್ಕಲುತನ ಮಾಡುತ್ತಿರುವ ಒಕ್ಕಲಿಗ ಸಮುದಾಯ ಉದ್ಯಮದಲ್ಲಿಯೂ ಸಾಧನೆ ಮಾಡುವಂತಾಗಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

    ಫಸ್ಟ್ ಸರ್ಕಲ್ ಸೊಸೈಟಿ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ‘ಉದ್ಯಮಿ ಒಕ್ಕಲಿಗ’ ಸಮಾವೇಶದಲ್ಲಿ ಮಾತನಾಡಿದರು.
    ಒಕ್ಕಲಿಗರು ಜಮೀನು ಮಾರಿ ಚುನಾವಣೆಗೆ ನಿಲ್ಲುವವರು ಹೆಚ್ಚಾಗಿದ್ದಾರೆ. ನಿಮಗೆ ಉದ್ಯಮದ ಕೌಶಲದ ಅಗತ್ಯ ಇದೆ. ಅದಕ್ಕೆ ಆತ್ಮಸ್ತೈರ್ಯ ಮುಖ್ಯ. ಕೆಲ ಸಮುದಾಯಗಳು ದುಡ್ಡನ್ನೇ ನಂಬಿವೆ. ನಾವು ದುಡಿಮೆಯನ್ನು ನಂಬಿದವರು. ನಿಮ್ಮ ಬಳಿ ಜ್ಞಾನ ಇದ್ದರೆ ಬಂಡವಾಳ ಹರಿದು ಬರುತ್ತದೆ. ಕೃಷಿಯಲ್ಲಿ ಬೆವರು ಹಾಕಿ ಉತ್ಪಾದನೆ ಮಾಡಲು ಒಕ್ಕಲಿಗರನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ಹಾಗಾಗಿ, ಒಕ್ಕಲಿಗರು ಉದ್ಯಮದಲ್ಲಿಯೂ ಸಾಧನೆ ಮಾಡಬೇಕು ಎಂದರು.
    ಒಂದು ಕಾಲದಲ್ಲಿ ಯಾರ ಬಳಿ ಭೂಮಿ ಇತ್ತೊ ಅವರು ಜಗತ್ತನ್ನು ಆಳುತ್ತಿದ್ದರು. ಅದಕ್ಕಾಗಿ ರಾಜರು ಭೂಮಿ ಪಡೆಯಲು ಯುದ್ಧಗಳನ್ನು ಮಾಡುತ್ತಿದ್ದರು. ಅಲೆಕ್ಸಾಂಡರ್ ಜಗತ್ತು ಗೆಲ್ಲಲು ಹೋರಾಟ ಮಾಡಿದ. ಅವರ ಗುರು ಅರಿಸ್ಟಾಟಲ್ ಭಾರತವನ್ನು ಗೆದ್ದರೆ ವಿಶ್ವ ಗೆದ್ದಂತೆ ಎಂದು ಹೇಳಿದ್ದನು. ನಂತರ, ವ್ಯಾಪಾರ ಮಾಡುವವರು ಜಗತ್ತು ಆಳಿದರು. ಈಗ ಜ್ಞಾನ ಇರುವವರು ಜಗತ್ತನ್ನು ಆಳುತ್ತಾರೆ ಎಂದು ಮಾಜಿ ಸಿಎಂ ಹೇಳಿದರು.

    ಕೃಷಿಯೂ ಒಂದು ಉದ್ಯಮ:
    ಕೃಷಿಯು ಒಂದು ಉದ್ಯಮ.ಕೃಷಿ ಇಲ್ಲದಿದ್ದರೆ ನಾವು ಬದುಕಲು ಆಗುವುದಿಲ್ಲ. ಕೃಷಿಯಲ್ಲಿ ಶೇ.1 ಬೆಳವಣಿಗೆಯಾದರೆ, ಉದ್ಯಮ ವಲಯ ಶೇ.4, ಸೇವಾ ವಲಯ ಶೇ.10 ಬೆಳೆಯುತ್ತದೆ. ಎಲ್ಲ ಬೆಳವಣಿಗೆಗೂ ಮೂಲ ಕೃಷಿ. ಕೃಷಿ ಉದ್ಯಮವಾಗಿ ಬೆಳವಣಿಗೆಯಾಗಿಲ್ಲ. ಭೂಮಿ ಇದ್ದಷ್ಟೇ ಇದೆ. ಉತ್ಪಾದನೆ ಹೆಚ್ಚಾಗಿದೆ. ಆದರೆ, ರೈತನ ಆದಾಯ ಹೆಚ್ಚಾಗಿಲ್ಲ. ಒಕ್ಕಲಿಗರು ಕೇವಲ ಕೃಷಿ ಮಾಡಿದರೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಕೃಷಿ ಜತೆಗೆ ವ್ಯಾಪಾರ, ಉದ್ಯೋಗ ಮಾಡುವ ಮೂಲಕ ಹೊರ ಜಗತ್ತಿಗೆ ತೆರೆದುಕೊಳ್ಳುವ ಕೆಲಸ ಮಾಡಬೇಕು. ಒಕ್ಕಲಿಗರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಯೋಜನಾ ಬದ್ಧವಾಗಿ ಮುನ್ನಡೆಯಬೇಕು ಎಂದು ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು.ಸ್ಪಟಿಕಪುರಿ ಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಶಾಸಕ ಅಶ್ವತ್ಥ ನಾರಾಯಣ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮತ್ತಿತರರಿದ್ದರು.

    ದಕ್ಷಿಣ ಭಾರತ ಮಟ್ಟದ ಸಮಾವೇಶ ಆಯೋಜಿಸಿ:
    ‘ಉದ್ಯಮಿ’ ಒಕ್ಕಲಿಗ ಸಮಾವೇಶವೂ ಭಾನುವಾರ ಅದ್ದೂರಿಯಾಗಿ ತೆರೆಬಿತ್ತು. ಮೂರು ದಿನಗಳಿಂದ ಕರ್ನಾಟಕ – ತಮಿಳುನಾಡಿನ ಒಕ್ಕಲಿಗ ಉದ್ಯಮಿಗಳು ನಡುವಿನ ಚಿಂತನ-ಮಂಥನ,ಕೃಷಿ,ಆರೋಗ್ಯ, ಶಿಕ್ಷಣ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಗಳು, ಮನರಂಜನೆ, ನವೋದ್ಯಮ, ಆಹಾರ, ಆತಿಥ್ಯ ಸೇರಿ ಎಲ್ಲ ಕ್ಷೇತ್ರಗಳ ಬಗ್ಗೆ ತಜ್ಞರು ವಿಸ್ತೃತ ಚರ್ಚಾಗೋಷ್ಠಿಗಳು ನಡೆದವು. ಹಲವು ತಜ್ಞರು ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಿದರು.ಅಂದಾಜು 20 ಸಾವಿರಕ್ಕೂ ಅಧಿಕ ಮಂದಿ ಸಮಾವೇಶಕ್ಕೆ ಭೇಟಿ ನೀಡಿದರು. ಪುರಾತನ ಶಾಸನಗಳು, ಕೆಂಪೇಗೌಡರ ಕಾಲದ ಪೇಟೆಗಳ ಒಕ್ಕಲಿಗರ ಆಹಾರ ಪದಾರ್ಥಗಳು ಗಮನ ಸೆಳೆದವು.ಅಂದಾಜು 100ಕ್ಕೂ ಅಧಿಕ ಉದ್ಯಮದಾರರು ಮಳಿಗೆ ಪ್ರತಿಷ್ಠಾಪಿಸಿ ಪ್ರಾತ್ಯಕ್ಷಿಕೆಗಳ ಪ್ರದರ್ಶನಕ್ಕೆ ಇಟ್ಟಿದ್ದರು. ಸಮಾವೇಶಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತ ಮಟ್ಟದಲ್ಲಿ ಸಮಾವೇಶವನ್ನು ಆಯೋಜಿಸಬೇಕೆಂದು ಉದ್ಯಮದಾರರಿಂದ ಬೇಡಿಕೆ ಬಂದಿರುವುದು ಗಮನಾರ್ಹ.

    ಕೃಷಿಕರಿಗೆ ಗೌರವ ದೊರೆಯಬೇಕು. ಕೃಷಿ ಉದ್ಯಮವಾಗಬೇಕು. ಒಕ್ಕಲಿಗರು ಹೊರ ರಾಜ್ಯದವರಿಗೆ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣಕ್ಕೆ ಭೂಮಿ ನೀಡದೆ ನೀವೇ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಬೇಕು. ಸಮುದಾಯದ ಹಲವರು ರಾಜಕಾರಣದಲ್ಲಿದ್ದು, ತತ್ವ ಸಿದ್ಧಾಂತದ ಆಧಾರದ ಮೇಲೆ ಹಲವು ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದರಲ್ಲಿ ತಪ್ಪೇನಿಲ್ಲ. ಆದರೆ ಸಮುದಾಯದವರ ವಿರುದ್ಧ ಆರೋಪ ಮಾಡುವಾಗ ವೈಯಕ್ತಿಕ ನಿಂದನೆ ಮಾಡಬಾರದು. ಸಮುದಾಯದವರು ಯಾವುದೇ ಪಕ್ಷದಲ್ಲಿರಲ್ಲಿ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು.
    | ಬಿ.ಎಲ್.ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts