More

    ಸಂಸ್ಕೃತಿ, ಸಂಪ್ರದಾಯ ಪುನರುಜ್ಜೀವನದ ಕೆಲಸವಾಗಲಿ

    ಮೈಸೂರು; ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಎತ್ತಿ ಹಿಡಿಯವ ಕೆಲಸವನ್ನು ಮಹಿಳೆಯರು ಮಾಡಬೇಕು ಎಂದು ನಟಿ ತಾರಾ ಅನುರಾಧಾ ಹೇಳಿದರು.


    ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ವಾಸವಿ ಮಹಿಳಾ ಸಮಾಜದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಆಧುನಿಕತೆ ಸೋಗಿನಲ್ಲಿ ಮಹಿಳೆಯರು ಕಳೆದುಹೋಗಬಾರದು. ಬದಲಿಗೆ ಭಾರತೀಯ ಸಂಸ್ಕೃತಿ ಪುನರುಜ್ಜೀವನಕ್ಕೆ ಕೈ ಜೋಡಿಸಬೇಕು. ಈ ನಿಟ್ಟಿಯಲ್ಲಿ ಆರ್ಯವೈಶ್ಯ ಸಮಾಜದ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದರು.


    ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲೇ ಆರ್ಯವೈಶ್ಯರು ಹೆಚ್ಚಿದ್ದಾರೆ. ಇವರ ಕುಲಕಸುಬು ವ್ಯಾಪಾರ. ಆದಾಗ್ಯೂ, ಈ ಸಮುದಾಯದ ಪೂಜೆ, ಸಂಪ್ರದಾಯ, ಧಾರ್ಮಿಕ ಆಚರಣೆ ಮಾದರಿಯಾಗಿದ್ದು, ಈ ಸಂಪ್ರದಾಯವನ್ನು ಮರೆಯಬೇಡಿ. ಇದುವೇ ನಿಮ್ಮ ಸಮುದಾಯದ ಹೆಗ್ಗುರುತು. ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.


    ಒಟ್ಟಿಗೆ ಬಾಳಿ:


    ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಬಾಳುವುದು ಸಾಮರಸ್ಯದ ಸಂಕೇತ. ಆ ಸಂಭ್ರಮ ಈಗ ಸಿಗುತ್ತಿಲ್ಲ. ಒಬ್ಬ ಮಗ ಅಮೆರಿಕದಲ್ಲಿ, ಇನ್ನೊಬ್ಬ ಮಗ ಇಂಗ್ಲೆಂಡ್‌ನಲ್ಲಿ. ತಂದೆ-ತಾಯಿ ಭಾರತದಲ್ಲಿ. ಇಂತಹ ಸಂದಿಗ್ಧ ಪರಿಸ್ಥಿತಿ ಎಲ್ಲ ಮನೆಯಲ್ಲೂ ನಿರ್ಮಾಣವಾಗುತ್ತಿದೆ. ಇದು ಆಗಬಾರದು. ಸಾಧ್ಯವಾದಷ್ಟು ಮಟ್ಟಿಗೆ ಕುಟುಂಬದ ಸದಸ್ಯರು ಒಂದೆಡೆ ಬಾಳಬೇಕು. ಇದರಿಂದ ದೊರೆಯುವ ಸಮೃದ್ಧಿ, ಸಂತೋಷ, ನೆಮ್ಮದಿ ಬೇರೆ ಯಾವುದರಿಂದಲೂ ದೊರೆಯಲ್ಲ ಎಂದರು.


    ಹಿಂದೆ ಅತ್ತೆ-ಸೊಸೆ ನಡುವೆ ಸಾಮರಸ್ಯ ಇತ್ತು. ಅದು ಈಗ ಕಾಣಸಿಗುತ್ತಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಂಬಂಧದ ನಡುವಿನ ಬಾಂಧವ್ಯದ ಬೆಸುಗೆ ಕ್ಷೀಣವಾಗಿದೆ. ಹೀಗಾಗಿ, ಅತ್ತೆ, ಸೊಸೆ, ಮಗ, ಮೊಮ್ಮಕ್ಕಳು ಪ್ರತ್ಯೇಕ ಕಿಟ್ಟಿ ಪಾರ್ಟಿ ಮಾಡುವ ಕಾಲ ಬಂದಿದೆ. ಇದು ಸರಿಯಲ್ಲ. ಎಲ್ಲರೂ ಸೇರಿ ಪಾರ್ಟಿ ಮಾಡಿ ಎಂದು ಸಲಹೆ ನೀಡಿದರು.


    ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಬಹುದಿನದ ಕನಸು. ರಾಮ ಹುಟ್ಟಿದ ಭೂಮಿಯಲ್ಲೇ ರಾಮನಿಗೆ ಮನೆ ಇರಲಿಲ್ಲ. ಆದರೀಗ ಅದು ಸಾಕಾರಾಗೊಳ್ಳುತ್ತಿದೆ. ಶ್ರೀರಾಮನಿಗಾಗಿ ದೇಗುಲ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.


    ಕೃತಕ ಕಾಲು ವಿತರಣೆ :

    10 ಜನ ಅಂಗವಿಕಲರಿಗೆ ಕೃತಕ ಕಾಲು ವಿತರಣೆ ಮಾಡಲಾಯಿತು. ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಎಸ್.ಕೆ.ದಿನೇಶ್, ಶ್ರೀ ಕನ್ಯಕಾಪರಮೇಶ್ವರಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಸಂದೀಪ್, ವಾಸವಿ ಮಹಿಳಾ ಸಮಾಜದ ಅಧ್ಯಕ್ಷ ಲಕ್ಷ್ಮೀ ದಿನೇಶ್, ಉಪಾಧ್ಯಕ್ಷೆ ಪ್ರತಿಭಾ ಶಾಂತಾರಾಮ್, ಕಾರ್ಯದರ್ಶಿ ರಾಧಾ ಗೋಪಿನಾಥ್, ಖಜಾಂಚಿ ಸಿ.ಎಸ್.ಅನಿತಾ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts