More

    ಸರ್ಕಾರದ ಯೋಜನೆಗಳು ನೇರವಾಗಿ ಜನರ ತಲುಪಲಿ

    ಚಿಕ್ಕಮಗಳೂರು: ಸರ್ಕಾರದ ಯೋಜನೆಗಳು ನೇರವಾಗಿ ಜನರಿಗೆ ತಲುಪಬೇಕು. ಜತೆಗೆ ಜನರ ಸಮಸ್ಯೆಗಳಿಗೆ ಅವರ ಮನೆ ಬಾಗಿಲಿನಲ್ಲೇ ಪರಿಹಾರವಾಗಬೇಕು. ಇದಕ್ಕೆ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಜನತಾ ದರ್ಶನ ವೇದಿಕೆಯಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
    ಕಳಸಾಪುರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರು ತಮ್ಮ ಕೆಲಸಗಳಿಗಾಗಿ ಕಚೇರಿ ಹಾಗೂ ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಲು ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನ ಇದರ ಸದುಪಯೋಗಪಡೆಯಬೇಕು ಎಂದರು.
    ಅಧಿಕಾರಿಗಳು ತಮ್ಮ ವೃತ್ತಿಯನ್ನು ಪ್ರೀತಿಯಿಂದ ಮಾಡಬೇಕು. ನಾವು ಮಾಡುವ ವೃತ್ತಿಯನ್ನು ಪ್ರೀತಿಸಿದಾಗ ಮಾತ್ರ ಆ ವೃತ್ತಿಗೆ ನ್ಯಾಯ ಕೊಡಲು ಸಾಧ್ಯ. ಸಾಮಾನ್ಯ ಜನರಿಗೆ ಸರ್ಕಾರದ ಯೋಜನೆಗಳು ನೇರವಾಗಿ ತಲುಪಬೇಕು ಎಂಬ ಕಾರಣಕ್ಕೆ ಸರ್ಕಾರ ಐದು ಗ್ಯಾರಂಟಿಗಳನ್ನೂ ಜಾರಿ ಮಾಡಿದೆ ಎಂದು ಹೇಳಿದರು.
    60 ವರ್ಷ ಮೇಲ್ಪಟ್ಟ ಪಿಂಚಣಿ, ವಿಧವಾ ವೇತನ ಮತ್ತು ಖಾತೆ ಬದಲಾವಣೆಗೆ ಕಚೇರಿಗಳಿಗೆ ಅಲೆಯುವಂತಾಗಬಾರದು. ಪಿಂಚಣಿಗೆ ಸಂಬಂಧಿಸಿದಂತೆ ಬಂದ ದೂರು ಅರ್ಜಿಗಳಿಗೆ ಜನತಾ ದರ್ಶನ ಕಾರ್ಯಕ್ರಮದಲ್ಲಿಯೇ ಪರಿಹಾರ ನೀಡಿ ನ್ಯಾಯ ಕೊಡಿಸಲು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
    ತಹಸೀಲ್ದಾರ್ ಸುಮಂತ್ ಮಾತನಾಡಿ, ಜನ ಸಾಮಾನ್ಯರು ತಮ್ಮ ಸಮಸ್ಯೆ ಪರಿಹಾರಕ್ಕೆ ಪ್ರತಿ ಬಾರಿ ಜಿಲ್ಲೆಗೆ ಬರಲು ಸಾಧ್ಯವಾಗದ ಕಾರಣ, ಅವರ ಕುಂದು ಕೊರತೆ ತಿಳಿಯಲು ಹೋಬಳಿ ಮತ್ತು ತಾಲೂಕು ಮಟ್ಟದ ಜನತಾ ದರ್ಶನ ಆಯೋಜನೆ ಮಾಡಲಾಗಿದೆ. ಜನರು ತಮ್ಮ ಸಮಸ್ಯೆಗಳನ್ನು ಅರ್ಜಿಗಳ ಮೂಲಕ ತಿಳಿಸಬಹುದು. ಅವುಗಳನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಎಂದರು.
    ಕಂದಾಯ ಭೂಮಿ ಸಮಸ್ಯೆ, ಮನೆ, ನಿವೇಶನಕ್ಕೆ ಸಂಬಂಧಿಸಿದ ಸಮಸ್ಯೆಗಳೇ ಜನತಾ ದರ್ಶನದಲ್ಲಿ ಕಂಡು ಬಂದಿದ್ದು ವಿಶೇಷವಾಗಿತ್ತು. ತಾಪಂ ಇಒ ತಾರಾನಾಥ, ಕಳಸಾಪುರ ಗ್ರಾಪಂ ಅಧ್ಯಕ್ಷ ನಾಗೇಗೌಡ, ಬಿಳೆಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಗೋಪಿ, ಊರಿನ ಮುಖಂಡರಾದ ಕೆಂಗೇಗೌಡ, ಅಮೀರ್, ಚಂದ್ರೇಗೌಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts