More

    ಪ್ರವಾಹ ನಿರಂತರ ಹಾನಿ ಅಪಾರ

    |ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ರಾಜ್ಯ ಸತತ ಪ್ರವಾಹಕ್ಕೆ ಸಿಲುಕುತ್ತಿದ್ದು ನಾಲ್ಕು ವರ್ಷಗಳಲ್ಲಿ ಸರ್ಕಾರದ ಅಂದಾಜಿನ ಪ್ರಕಾರವೇ ಸುಮಾರು 80 ಸಾವಿರ ಕೋಟಿ ರೂ.ನಷ್ಟವಾಗಿದೆ. ಆದರೆ ವಾಸ್ತವದಲ್ಲಿ ರೈತರಿಗೆ ಆಗಿರುವ ಒಟ್ಟಾರೆ ನಷ್ಟವೇ 2 ಲಕ್ಷ ಕೋಟಿ ರೂ. ದಾಟುತ್ತದೆ ಎಂಬ ಅಂದಾಜು ಆತಂಕಕ್ಕೆ ಕಾರಣವಾಗಿದೆ. ಸರ್ಕಾರದ ಮುಂದೆಯೂ ಪುನರ್ವಸತಿ ದೊಡ್ಡ ಸವಾಲು ಎದುರಾಗಿದೆ.

    ನಾಲ್ಕು ವರ್ಷಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ರಾಜ್ಯ ತತ್ತರಿಸಿ ಹೋಗಿದೆ. ರೈತಾಪಿ ಸಮುದಾಯವಂತೂ ನಿರೀಕ್ಷಿತ ಬೆಳೆ ಸಿಗದೇ ಕೃಷಿಯ ಬಗ್ಗೆ ನಿರಾಸಕ್ತಿ ಮೂಡಿಸಿಕೊಳ್ಳುವಂತಾಗಿದೆ. ಸರ್ಕಾರ ನೀಡುವ ಪರಿಹಾರ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗಿದೆ. 2010ರಿಂದಲೂ ಪ್ರವಾಹ ತಪ್ಪಿದರೆ ಬರ ಎಂಬಂತೆ ಪ್ರಕೃತಿ ವಿಕೋಪ ಸಂಭವಿಸುತ್ತಲೇ ಇದ್ದು, ರಾಜ್ಯವನ್ನು ಜಜ್ಜರಿತಗೊಳಿಸಿದೆ. 2017-18ನೇ ಸಾಲಿನಲ್ಲಿ ಮಾತ್ರ ಯಾವುದೇ ವಿಕೋಪ ಸಂಭವಿಸಿಲ್ಲ.

    ಕೃಷಿಗೆ ಆದ ಹಾನಿಯೇ ಹೆಚ್ಚು: ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿಗೆ ಆದ ಹಾನಿ ಪ್ರಮಾಣವೇ ಹೆಚ್ಚಿನ ಪ್ರಮಾಣದಲ್ಲಿದೆ. ಸರ್ಕಾರ ಮಳೆ ಬಂದು ನಿಂತ ಕೂಡಲೇ ಹಾನಿ ಲೆಕ್ಕ ಹಾಕಿರುತ್ತದೆ. ಆದರೆ ಕೊನೆಗೆ ಬೆಳೆಯೇ ಬಾರದೇ ಬೆಳೆಗಳೆಲ್ಲ ಕೊಳೆತು ಹೋಗಿ ನಷ್ಟ ಹೆಚ್ಚಾಗಿರುತ್ತದೆ. ಕಳೆದ ವರ್ಷ 8 ಲಕ್ಷ ಹೆಕ್ಟೇರ್ ರಾಗಿ ಬೆಳೆಯೊಂದೆ ಹಾನಿಗೆ ಒಳಗಾಗಿದೆ. 60 ಲಕ್ಷ ಟನ್ ಉತ್ಪಾದನೆ ಗುರಿಯಲ್ಲಿ ಆಗಿದ್ದು 14 ಲಕ್ಷ ಟನ್ ಮಾತ್ರ. ಇದೇ ಪ್ರಮಾಣದಲ್ಲಿಯೇ ಕಡ್ಲೆಕಾಯಿ, ತೊಗರಿ, ಜೋಳ, ಉದ್ದು, ಅಲಸಂದೆ, ಎಳ್ಳು ಹಾನಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಬಿತ್ತನೆಯ ಶೇ.40 ಬೆಳೆ ರೈತರಿಗೆ ಸಿಗುತ್ತಿಲ್ಲ. ರಾಜ್ಯದಲ್ಲಿ ಕೃಷಿಯಲ್ಲಿ ಸರಿಯಾಗಿ ಲೆಕ್ಕ ಹಾಕಿದರೆ ರೈತರಿಗೆ ಆಗಿರುವ ನಷ್ಟ ಸುಮಾರು 2 ಲಕ್ಷ ಕೋಟಿ ರೂ.ಗಳನ್ನು ದಾಟುತ್ತದೆ ಎಂಬ ಅಂದಾಜಿದೆ.

    ಸಾಕಾಗುತ್ತಿಲ್ಲ ಪರಿಹಾರ: ಕೇಂದ್ರ ನೀಡುವ ಪರಿಹಾರ ರೈತರಿಗೆ ಸಾಲುತ್ತಿಲ್ಲ. ರಾಜ್ಯ ಸರ್ಕಾರ ತನ್ನ ಸಂಪನ್ಮೂಲದಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡುತ್ತಿದೆ. ಎಸ್​ಡಿಆರ್​ಎಫ್​ನಲ್ಲಿ ಕೇಂದ್ರದಿಂದ ಶೇ.75 ಹಾಗೂ ರಾಜ್ಯದಿಂದ ಶೇ.25 ಮೊತ್ತ ಭರಿಸಲಾಗುತ್ತಿದೆ. ಸಹಜವಾದ ವರ್ಷ ಬಿಟ್ಟು ಅಸಹಜ ವರ್ಷದಲ್ಲಿ ಎನ್​ಡಿಆರ್​ಎಫ್​ನಲ್ಲಿ ಕೇಂದ್ರ ಸರ್ಕಾರ ಪರಿಹಾರ ನೀಡಬೇಕಾಗುತ್ತದೆ. ಶೇ.33ಕ್ಕಿಂತ ಕಡಿಮೆ ಬೆಳೆ ಹಾನಿಯಾಗಿದ್ದರೆ ಪರಿಹಾರ ಸರಿಯಾಗಿ ಸಿಗುವುದಿಲ್ಲವೆಂಬುದು ಸೇರಿ ನಿಯಮಗಳಲ್ಲಿ ಇರುವ ಗೊಂದಲಗಳಿವೆ. ಇದು ದೊಡ್ಡ ಸಮಸ್ಯೆಯಾಗಿದೆ. ಗೊಂದಲಗಳನ್ನು ಪರಿಹರಿಸಲು ಸರ್ಕಾರ ಪ್ರಯತ್ನ ಮಾಡಬೇಕಾಗಿದೆ.

    ಸರ್ಕಾರದ ಮುಂದಿದೆ ಸವಾಲು: ಕೇಂದ್ರದಿಂದ ಪರಿಹಾರ ಪಡೆಯುವುದು ಒಂದೆಡೆಯಾದರೆ ಇನ್ನೊಂದೆಡೆ ಮೂಲ ಸೌಕರ್ಯ ಹಾನಿಗೆ ಪುನರ್ವಸತಿಯ ದೊಡ್ಡ ಸವಾಲು ಸರ್ಕಾರದ ಮುಂದೆ ಎದುರಾಗಿದೆ. ಚುನಾವಣೆಗೆ ಹೋಗುವ ಈ ಸಂದರ್ಭದಲ್ಲಿ ಮೂಲಸೌಕರ್ಯದ ಅಭಿವೃದ್ಧಿ ಸರಿಯಾಗಿ ಆಗಬೇಕಾಗಿದೆ. ಎರಡು ತಿಂಗಳಿನಲ್ಲಿಯೇ 3673.30 ಕೋಟಿ ರೂ.ಗಳಷ್ಟು ಮೂಲಸೌಕರ್ಯ ಹಾನಿಗೆ ಒಳಗಾಗಿದೆ. ನಿಯಮದ ಪ್ರಕಾರ ಕೇಂದ್ರ ನೀಡುವುದು 440.26 ಕೋಟಿ ರೂ.ಗಳು ಮಾತ್ರ. ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಖರ್ಚು ಮಾಡಬೇಕಾಗಿದೆ. ಚುನಾವಣೆ ವರ್ಷದಲ್ಲಿ ಸರ್ಕಾರದ ಮುಂದೆ ಇದೊಂದು ಸವಾಲು ಇದೆ.

    ಕೇಂದ್ರಕ್ಕೆ ಕೇಳಿರುವುದೆಷ್ಟು: ರಾಜ್ಯದಲ್ಲಿ ಎರಡು ತಿಂಗಳಿನಿಂದ ಆಗಿರುವ ಹಾನಿಯ ಪ್ರಮಾಣ 7647.13 ಕೋಟಿ ರೂ.ಗಳಾಗಿದ್ದು, ಕೇಂದ್ರಕ್ಕೆ 1012.50 ಕೋಟಿ ರೂ.ಗಳನ್ನು ನೀಡುವಂತೆ ಮನವಿ ಸಲ್ಲಿಸಲಾಗಿದೆ. ಕೇಂದ್ರದಿಂದ ಅಧ್ಯಯನ ತಂಡ ಬಂದು ಹೋದ ನಂತರ ಕೇಂದ್ರ ಸರ್ಕಾರ ಪರಿಹಾರದ ಬಗ್ಗೆ ನಿರ್ಧಾರ ಮಾಡಲಿದೆ.

    ಶೇ.5 ಹೆಚ್ಚಿನ ಅನುದಾನ: ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಎಸ್​ಡಿಆರ್​ಎಂಎಫ್​ನಡಿ 1054 ಕೋಟಿ ರೂ. ಮಂಜೂರು ಮಾಡಿದೆ. 2021ರಲ್ಲಿ ಎನ್​ಡಿಆರ್​ಎಫ್​ನಡಿ 994 ಕೋಟಿ ರೂ. ಅನುದಾನ ಬಂದಿದೆ. ಈ ಸಾಲಿಗೆ ಶೇ.5 ಹೆಚ್ಚು ಮಾಡಿ 1107 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

    ಮನೆ ಹಾನಿಗೆ ಇಪ್ಪತ್ನಾಲ್ಕು ಗಂಟೆಯೊಳಗೆ ಪರಿಹಾರ

    ಬೆಂಗಳೂರು: ಅತಿವೃಷ್ಟಿ, ಪ್ರವಾಹದಿಂದ ಹಾನಿಗೀಡಾದ ಮನೆಗಳಿಗೆ 24 ತಾಸಿನಲ್ಲೇ ಮೊದಲ ಕಂತಿನ ಪರಿಹಾರ ವಿತರಿಸಿ, ಸಂತ್ರಸ್ತರಿಗೆ ನೆರವಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಭಾರಿ ಮಳೆಯಿಂದ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ವಸ್ತುಸ್ಥಿತಿ ಮಾಹಿತಿ ಪಡೆದು, ಬೆಳೆ ಮತ್ತು ಮನೆ ಹಾನಿ ಬಗ್ಗೆ ನಿಖರ ವರದಿ ಸಲ್ಲಿಸಲು ತಿಳಿಸಿರುವೆ. ಜೂನ್​ನಿಂದ ಜುಲೈವರೆಗೆ ಆಗಿರುವ ಬೆಳೆ ನಾಶಕ್ಕೆ ಬರುವ ವಾರದೊಳಗೆ ಪರಿಹಾರ ವಿತರಣೆ ಪ್ರಾರಂಭವಾಗಲಿದೆ. ಆಗಸ್ಟ್ ಮೊದಲ ವಾರ, ಇದೀಗ ಸುರಿದ ಮಳೆ ಹಾನಿ ಬಗ್ಗೆ ಸಮೀಕ್ಷೆ ಮುಗಿದ ಕೂಡಲೇ ಪರಿಹಾರ ನೀಡಲಾಗುತ್ತದೆ ಎಂದು ವಿವರಿಸಿದರು. ಹಾನಿಯಾದ ಮನೆಗಳಿಗೆ ಮೊದಲ ಕಂತಿನ ಪರಿಹಾರ 24 ತಾಸುಗಳಲ್ಲೇ ನೀಡುವಂತೆ ಯಾದಗಿರಿ, ರಾಯಚೂರು, ಬೆಳಗಾವಿ, ವಿಜಯಪುರ ಮತ್ತು ಮೈಸೂರು ಡಿಸಿಗಳಿಗೆ ನಿರ್ದೇಶಿಸಿರುವೆ ಎಂದು ಸಿಎಂ ಸ್ಪಷ್ಟಪಡಿಸಿದರು.

    900 ಕೋಟಿ ರೂ. ಲಭ್ಯ: ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ತುರ್ತು ತಾತ್ಕಾಲಿಕ ಕಾಮಗಾರಿಗಳಿಗೆ ಈಗಾಗಲೆ ಅನುದಾನ ಬಿಡುಗಡೆಯಾಗಿದೆ. ಎಲ್ಲ ಜಿಲ್ಲಾಧಿಕಾರಿಗಳ ಬಳಿ ಒಟ್ಟು 900 ಕೋಟಿ ರೂ ಲಭ್ಯವಿದ್ದು, ಅಗತ್ಯದ ಕೆಲಸಗಳಿಗೆ ಹಣದ ಕೊರತೆಯಿಲ್ಲವೆಂದರು.

    ರಾಜ್ಯದಲ್ಲಿ ನಾಲ್ಕೈದು ವರ್ಷದಿಂದ ಪ್ರವಾಹ ಹೆಚ್ಚಾಗಿ ಬೆಳೆ ಹಾನಿ ಜಾಸ್ತಿಯಾಗುತ್ತಿದೆ. ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿ ರೈತರ ಬದುಕು ದುಸ್ತರವಾಗಿದೆ. ಪರಿಹಾರ ನೀಡುವ ಮೊತ್ತವನ್ನು ಸರ್ಕಾರ ಹೆಚ್ಚು ಮಾಡಬೇಕು. ವಾಸ್ತವ ವೆಚ್ಚ ಲೆಕ್ಕ ಹಾಕಿ ಪರಿಹಾರ ನೀಡಬೇಕು.

    | ಕುರುಬೂರು ಶಾಂತಕುಮಾರ್, ಅಧ್ಯಕ್ಷ, ಕಬ್ಬು ಬೆಳೆಗಾರರ ಸಂಘ

    ಚಾ.ನಗರದಲ್ಲಿ ಗ್ರಾಮಗಳು ಜಲಾವೃತ:  ಮಳೆಯಾಶ್ರಿತ ಪ್ರದೇಶವಾಗಿರುವ ಗಡಿಜಿಲ್ಲೆ ಚಾಮರಾಜನಗರ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಸುರಿದ ಮಹಾಮಳೆಗೆ ಥಂಡಾ ಹೊಡೆದಿದೆ. ಹನೂರು ತಾಲೂಕು ಹೊರತುಪಡಿಸಿ ವರುಣಾರ್ಭಟಕ್ಕೆ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ ತಾಲೂಕುಗಳಲ್ಲಿ ಅಪಾರ ಪ್ರಮಾಣದ ಆಸ್ತಿ ನಷ್ಟ ಉಂಟಾಗಿದೆ. ಚಾಮರಾಜನಗರ ತಾಲೂಕಿನ ಯಡಿಯೂರು ಗ್ರಾಮ ಜಲಾವೃತಗೊಂಡಿದ್ದು, ತೋಟದ ಮನೆಗಳಲ್ಲಿ ಮುಳುಗಡೆ ಭೀತಿಯಲ್ಲಿಯಲ್ಲಿದ್ದ 10 ಜನರನ್ನು ಅಗ್ನಿಶಾಮಕದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಸಂತೇಮರಹಳ್ಳಿ ಬಳಿಯ ಚುಂಗಡಿಪುರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸೇತುವೆ ಮೇಲೆ ಪ್ರವಾಹದಂತೆ ನೀರು ಹರಿಯುತ್ತಿದೆ. ಭರ್ತಿಯಾಗಿರುವ ಸುವರ್ಣಾವತಿ ಜಲಾಶಯದಿಂದ ಹೊರಬಿಟ್ಟಿರುವ ನೀರು ಅಚ್ಚುಕಟ್ಟು ಪ್ರದೇಶಗಳನ್ನು ಜಲಾವೃತಗೊಳಿಸಿದೆ. 18 ವರ್ಷಗಳ ಬಳಿಕ ಹರದನಹಳ್ಳಿಯ ಕೆರೆ ಕೋಡಿ ಬಿದ್ದಿದೆ. ಬಿಆರ್​ಟಿ ಅರಣ್ಯ ವ್ಯಾಪ್ತಿಯ ಕೃಷ್ಣಯ್ಯನಕಟ್ಟೆಯಲ್ಲಿ ತುಂಬಿದ್ದ ನೀರನ್ನು ಹೊರಬಿಡಲಾಗಿದೆ. ಹೆಬ್ಬಸೂರಿನಲ್ಲಿ ಮಳೆ ನೀರಲ್ಲಿ ಅಪಾರ ಪ್ರಮಾಣದ ತೆಂಗಿನಕಾಯಿಗಳು ಕೊಚ್ಚಿ ಹೋಗಿವೆ. ಮಳೆ ಹಾನಿ ಪ್ರದೇಶಗಳ ಪರಿಶೀಲನೆಗಾಗಿ ಹೋಗಿದ್ದ ಅಧಿಕಾರಿಗಳು ಕಣ್ಣೇಗಾಲ- ಆಲೂರು ರಸ್ತೆಯಲ್ಲಿ ಜಲದಿಗ್ಬಂಧನಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಲ್ಯಾಣ ಮಂಟಪಕ್ಕೆ ನುಗ್ಗಿದ ನೀರು: ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ನುಗ್ಗಿದ ಮಳೆ ನೀರು ಫಜೀತಿ ಸೃಷ್ಟಿಸಿತು. ನಗರದ ನಂದಿಭವನ, ಶ್ರೀಶಿವಕುಮಾರಸ್ವಾಮಿ ಭವನದಲ್ಲಿ ಸೋಮವಾರ ಮದುವೆ ನಡೆಯುತ್ತಿದ್ದವು. ನೆಲ ಮಹಡಿಯಲ್ಲಿದ್ದ ಊಟದ ಹಾಲ್​ಗೆ ನೀರು ನುಗ್ಗಿ ಆಹಾರ ಪದಾರ್ಥಗಳು ಹಾಳಾದವು.

    ಕೆರೆಗಳ ಬಗ್ಗೆ ನಿಗಾ ವಹಿಸಿ:  ಅತಿವೃಷ್ಟಿ ಕಾರಣದಿಂದ ಕೆರೆಗಳಿಗೆ ತೀವ್ರ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಅವುಗಳ ಸುಸ್ಥಿತಿ ಬಗ್ಗೆ ಖುದ್ದು ಪರಿಶೀಲನೆ ಮಾಡಬೇಕು. ಈ ಬಗ್ಗೆ ಕೂಡಲೆ ಕೇಂದ್ರ ಕಚೇರಿಗೆ ವರದಿ ನೀಡುವಂತೆ ಸಣ್ಣ ನೀರಾವರಿ ಇಲಾಖೆ ಸೂಚನೆ ನೀಡಿದೆ.

    ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳ ಬಗ್ಗೆ ಪ್ರತಿ ಜಿಲ್ಲೆಯಿಂದ ವರದಿ ನೀಡಬೇಕು. ಈ ಎಲ್ಲ ವರದಿಗಳನ್ನು ಎರಡೂ ವಲಯದ ಮುಖ್ಯ ಇಂಜಿನೀಯರ್​ಗಳು ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸೂಚಿಸಲಾಗಿದೆ.

    40 ಹೆಕ್ಟೇರ್ ಮೇಲ್ಪಟ್ಟು 2000 ಹೆಕ್ಟೇರ್ ಒಳಪಟ್ಟ ಅಚ್ಚುಕಟ್ಟು ಹೊಂದಿರುವ ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರಲಿವೆ. ರಾಜ್ಯದಲ್ಲಿ ಕೆರೆ, ಬಾಂದಾರ, ಬ್ಯಾರೇಜ್​ಗಳು ಸೇರಿ 9796 ಯೋಜನೆಗಳು ಸಣ್ಣ ನೀರಾವರಿ ಇಲಾಖೆಗೆ ಬರಲಿವೆ. ಇಲಾಖೆ ವ್ಯಾಪ್ತಿಯ ಯಾವುದೇ ಯೋಜನೆಗಳಿಗೆ ಹಾನಿಯಾಗುವ ಸಂಭವ ಇದ್ದರೆ, ಸೋರಿಕೆ ಅಥವಾ ಒಡೆದು ಹೋಗುವ ಸಂಭವ ಇದ್ದರೆ ಕೂಡಲೆ ಅಗತ್ಯ ಕ್ರಮ ಕೈಗಳ್ಳಬೇಕು. ತಕ್ಷಣವೇ ಈ ಬಗ್ಗೆ ಕೇಂದ್ರ ಕಚೇರಿಗೆ ವರದಿ ನೀಡಬೇಕು ಎಂದು ಇಲಾಖೆ ಸೂಚಿಸಿದೆ. ಒಂದು ವೇಳೆ ಕೆರೆಗಳು ಒಡೆದ ವರದಿಗಳು ಬಂದರೆ, ಸಂಬಂಧಿಸಿದ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಲಾಖೆಯ ಸಚಿವ ಜಿ.ಸಿ.ಮಾಧುಸ್ವಾಮಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾ ಪಂಚಾಯಿತಿ ವ್ಯಾಪ್ತಿ: ಸಣ್ಣ ನೀರಾವರಿ ಇಲಾಖೆ ಹೊರತುಪಡಿಸಿದ, ಅಂದರೆ 40 ಹೆಕ್ಟೇರ್ ಅಚ್ಚುಕಟ್ಟುಗಿಂತ ಕಡಿಮೆ ಅಚ್ಚುಕಟ್ಟು ಹೊಂದಿದ ಕೆರೆಗಳನ್ನು ಜಿಲ್ಲಾ ಪಂಚಾಯಿತಿ ನಿಭಾಯಿಸುತ್ತಿದೆ. ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಕೆರೆಗಳು ಜಿಪಂ ವ್ಯಾಪ್ತಿಯಲ್ಲಿವೆ. ಅಲ್ಲದೆ, ಅತಿವೃಷ್ಟಿ ಸಂದರ್ಭದಲ್ಲಿ ಹಾನಿಗೊಳಗಾಗಿರುವುದರಲ್ಲಿ ಈ ಕೆರೆಗಳೇ ಹೆಚ್ಚಾಗಿವೆ. ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕೆರೆಗಳ ಸ್ಥಿತಿಗತಿ ಬಗ್ಗೆ ನಿಗಾ ವಹಿಸಿದ್ದು, ಜಿಲ್ಲಾಡಳಿತದ ಜತೆಗೆ ಸಭೆ ನಡೆಸಿದ್ದಾರೆ. ತುರ್ತಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ.

    ಕೊಡಗಿನಲ್ಲಿ ಮಳೆ ಅಬ್ಬರ

    ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ವ್ಯಾಪಕ ಮಳೆಯಾಗಿದ್ದು ಆತಂಕ ಹೆಚ್ಚಿಸಿದೆ. ಕೊಯನಾಡುವಿನಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿದು 5 ಮನೆಗಳಿಗೆ ನೀರು ನುಗ್ಗಿದೆ. 5 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಕಿಂಡಿ ಚೆಕ್ ಡ್ಯಾಂ ನಿಂದ ಈ ಅನಾಹುತ ಸಂಭವಿಸಿದೆ. ನೀರಿನಲ್ಲಿ ತೇಲಿ ಬಂದ ಬೃಹತ್ ಮರಗಳು ಡ್ಯಾಂಗೆ ಅಡ್ಡಲಾಗಿ ನಿಂತಿದೆ. ಪರಿಣಾಮ ಪ್ರವಾಹ ನಿವಾಸಿಗಳ ಮನೆಗೆ ನುಗ್ಗಿದೆ. ಸಂಚಾಜೆ ಹೋಬಳಿಯ ಚಡಾವು ಗ್ರಾಮದಲ್ಲಿ ಸೇತುವೆವೊಂದು ಕೊಚ್ಚಿ ಹೋಗಿದೆ. ಕರಿಕೆ ಮತ್ತು ಭಾಗಮಂಡಲ ರಸ್ತೆಯಲ್ಲಿ ಬೃಹತ್ ಬರೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತವಾಗಿದೆ.

    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿವಾದ; ಮಹಾನಗರ ಪಾಲಿಕೆಯಿಂದ ಐತಿಹಾಸಿಕ ನಿರ್ಣಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts