More

    ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ

    ತುಮಕೂರು : ರಾಜ್ಯದ ನೆಲ, ಜಲ ವಿಚಾರ ಬಂದಾಗ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
    ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಿದೆ. ಇದರಲ್ಲಿ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ. ವಿವಾದಕ್ಕೆ ಆಸ್ಪದ ಕೊಡದಂತೆ ಯೋಜನೆಯನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲಾಗುವುದು ಎಂದರು.

    ಮೇಕೆದಾಟು, ಕೃಷ್ಣ, ಮಹಾದಾಯಿ ಯೋಜನೆಗಳಿಗೆ ಸಂಬಂಧಿಸಿದಂತೆ ಅಂತಾರಾಜ್ಯ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಇರುವುದರಿಂದ ಈ ಸಂದರ್ಭದಲ್ಲಿ ಅದರ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ. ಆಂಗ್ಲ ಪತ್ರಿಕೆಯೊಂದರಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ಚೆನ್ನೈನ ಹಸಿರು ಪೀಠವು ಸುಮೋಟೊ ಪ್ರಕರಣ ದಾಖಲಿಸಿಕೊಂಡು ಆ ಪೀಠ ನೀಡಿರುವ ತೀರ್ಪು ರಾಜ್ಯಕ್ಕೆ ಮಾರಕವಾಗಿತ್ತು. ಈ ಸಂಬಂಧ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪ್ರಧಾನ ಪೀಠದಲ್ಲಿ ರಾಜ್ಯ ಸರ್ಕಾರವು ಮನವಿ ಮಾಡಿಕೊಂಡಿದ್ದು ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಲು ಅಧಿಕಾರವಿಲ್ಲವೆಂದು ಚೆನ್ನೈ ಪೀಠಕ್ಕೆ ಸೂಚನೆ ನೀಡಿದೆ ಎಂದು ತಿಳಿಸಿದರು.

    ಮೇಕೆದಾಟು ಯೋಜನೆಯನ್ನು ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ. ಕಾವೇರಿ ಕೊಳ್ಳದ ಈ ಯೋಜನೆಯು ನಮಗೆ ಲಭ್ಯವಿರುವ ನೀರಿನಲ್ಲಿ ಅನುಷ್ಠಾನ ಮಾಡುತ್ತಿದ್ದೇವೆ. ಇದರಿಂದ ಯಾರಿಗೂ ತೊಂದರೆ, ಅನ್ಯಾಯವಾಗುವುದಿಲ್ಲ. ರಾಜ್ಯದ ನೆಲ-ಜಲ ವಿಚಾರ ಬಂದಾಗ ಎಲ್ಲ ರಾಜಕೀಯ ಪಕ್ಷಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.

    ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾ ವಕ್ತಾರ ಕೊಪ್ಪಲ್ ನಾಗರಾಜ್, ಎಪಿಎಂಸಿ ನಿರ್ದೇಶಕ ಹೊನ್ನೇಶ್ ಕುಮಾರ್, ಎಸ್‌ಐಟಿ ಶಿವಕುಮಾರ್, ಡಿ.ಎಸ್.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts