More

    ಅದ್ಭುತ ಕಲ್ಪನಾಲೋಕಕ್ಕೆ ಕರೆದೊಯ್ಯುವ ಕಥೆಗಳು

    ಅದ್ಭುತ ಕಲ್ಪನಾಲೋಕಕ್ಕೆ ಕರೆದೊಯ್ಯುವ ಕಥೆಗಳುಯಾರನ್ನು ಬೇಕಾದರೂ ಕೇಳುವಂತೆ ಮಾಡುವ ಶಕ್ತಿ ಕಾಂತಾ ಸಂಹಿತೆಗೆ ಇದೆ. ಅದು ಗೆಳೆಯನ ತರಹ ಹೆಗಲ ಮೇಲೆ ಕೈಹಾಕಿ ಬುದ್ಧಿಮಾತು ಹೇಳುತ್ತದೆ. ಅದು ಬುದ್ಧಿವಾದವಾದರೂ ಕೇಳುಗನಿಗೆ ಅರಿವಿಲ್ಲದಂತೆ ಆತನ ಮನದಾಳಕ್ಕೆ ಇಳಿಯಲಾರಂಭಿಸುತ್ತದೆ. ಇಂತಹ ಕಾಂತಾ ಸಂಹಿತೆಯಲ್ಲಿ ಅದೆಷೊ್ಟೕ ಕತೆಗಳಿವೆ, ಕಾದಂಬರಿಗಳಿವೆ. ಆದರೆ ಎಲ್ಲದಕ್ಕೂ ಪುರಾತನವಾದದ್ದು ಎಂದರೆ, ಅರೇಬಿಯನ್ ನೈಟ್ಸ್.

    ಹೌದು. ಇದನ್ನು ಎಲ್ಲೋ ಕೇಳಿದ್ದೇವೆ ಎನಿಸುತ್ತದೆ. ನಾವಿಕ ಸಿಂದಾಬಾದ್, ಅಲಿಬಾಬಾ ಮತ್ತು ನಲ್ವತ್ತು ಜನ ಕಳ್ಳರು, ಅಲ್ಲಾವುದ್ದೀನ್ ಮತ್ತು ಅವನ ಅದ್ಭುತ ದ್ವೀಪ… ಹೀಗೆ ಸಾಲು ಸಾಲು ಕತೆಗಳು ನೆನಪಾಗುತ್ತವೆ. ಇಂತಹ ಸಾವಿರದ ಒಂದು ಕತೆಗಳುಳ್ಳ ಕಥಾಗುಚ್ಛವೇ ಅರೇಬಿಯನ್ ನೈಟ್ಸ್ ಪುಸ್ತಕ. ಸರ್ ರಿಚರ್ಡ್ ಬರ್ಟನ್ ಇಂಗ್ಲಿಷ್​ನಲ್ಲಿ ಬರೆದ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಜಿ. ಶರಣಪ್ಪ.

    ಅದ್ಭುತ ಕಲ್ಪನಾಲೋಕಕ್ಕೆ ಕರೆದೊಯ್ಯುವ ಕಥೆಗಳುಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶರಣಪ್ಪ ಅವರು ಇದನ್ನು ಕನ್ನಡಕ್ಕಿಳಿಸುವಾಗ ಕನ್ನಡತನವನ್ನು ಬಿಟ್ಟುಕೊಟ್ಟಿಲ್ಲ, ಓದುವಾಗ ಇದು ಅನುವಾದ ಎನಿಸುವುದಿಲ್ಲ. ಕನ್ನಡದ್ದೇ ಎನಿಸುವಷ್ಟು ಆಪ್ತವಾಗಿವೆ ಕಥೆಗಳು. ಈ ಕಥೆಗಳ ಹುಟ್ಟಿಗೂ ಒಂದು ಕಥೆ ಇದೆ. ರಾಜ ಶಹ್ರಿಯಾದ್ ತನ್ನ ಹೆಂಡತಿಯ ಅವಿಧೇಯತೆ, ಅಕ್ರಮ ಸಂಬಂಧ ಕಂಡು ಬೇಸರಿಸಿಕೊಳ್ಳುತ್ತಾನೆ. ಅದೆಷ್ಟರ ಮಟ್ಟಿಗೆ ಎಂದರೆ ಪ್ರಪಂಚದಲ್ಲಿನ ಎಲ್ಲ ಹೆಣ್ಣುಗಳು ಹೀಗೆಯೇ ಎಂದು ಅವನಿಗೆ ಅನಿಸಿಬಿಡುತ್ತದೆ. ಅದಕ್ಕಾಗಿ ಆತ ಎಲ್ಲ ಹೆಣ್ಣುಗಳನ್ನು ದೈಹಿಕವಾಗಿ ಬಳಸಿಕೊಳ್ಳತೊಡಗುತ್ತಾನೆ.

    ಪ್ರತಿದಿನ ರಾತ್ರಿ ಒಂದು ಹೆಣ್ಣನ್ನು ಮದುವೆಯಾಗುವುದು, ಬೆಳಗ್ಗೆ ಕೊಲ್ಲುವುದು. ಇದು ಹೀಗೇ ಮುಂದುವರಿಯುತ್ತದೆ. ಒಂದು ದಿನ ಆತನಿಗೆ ಅರ್ಹವೆನಿಸುವ ಎಲ್ಲ ಹೆಣ್ಣುಮಕ್ಕಳು ಖಾಲಿಯಾಗುತ್ತಾರೆ. ಅವನ ಮಂತ್ರಿಯ ಮಗಳು ಶಹರ್​ಜಾದ್ ಹೊರತಾಗಿ ಮತ್ತಿನ್ಯಾರೂ ಅವನಿಗೆ ಸರಿ ಹೊಂದುವಂತಹ ಹೆಣ್ಣುಗಳೇ ಇಲ್ಲವಾಗುತ್ತಾರೆ.

    ಶಹರ್​ಜಾದ್ ಅಪ್ರತಿಮ ಸುಂದರಿ, ಮಹಾ ಬುದ್ಧಿವಂತೆ. ರಾಜನಿಗೆ ಮನ ತಣಿಸುವಂತಹ ಕಥೆಗಳನ್ನು ಕೇಳುವ ಆಸಕ್ತಿ ಇದೆ ಎಂದು ತಿಳಿದುಕೊಳ್ಳುತ್ತಾಳೆ. ಆ ಕಾರಣದಿಂದಾಗಿ ಪ್ರತಿ ರಾತ್ರಿ ಅವನಿಗೆ ಒಂದೊಂದು ಕಥೆಯನ್ನು ಹೇಳುತ್ತ, ಅದರ ಅಂತಿಮ ಭಾವೋದ್ರೇಕದ ಘಟ್ಟವನ್ನು ಮಾತ್ರ ಬೆಳಗಾಗುವ ತನಕ ಕಾದು ಹೇಳುತ್ತಿರುತ್ತಾಳೆ. ಕಥೆಯ ಅಂತ್ಯವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ರಾಜ, ಆಕೆಯ ಸಾವನ್ನು ಮುಂದೂಡುತ್ತ ಬರುತ್ತಾನೆ. ಹೀಗೆ ಆರಂಭಿಸಿದ ಕಥೆಗಳು ಬರೋಬ್ಬರಿ 1001 ರಾತ್ರಿಗಳನ್ನು ಕಳೆದವು. ಈ ಕಾಲಾವಧಿಯಲ್ಲಿ ಶಹರ್​ಜಾದ್ ಅವನಿಗೆ ಮೂರು ಮಕ್ಕಳನ್ನು ಹೆತ್ತು ಕೊಡುತ್ತಾಳೆ.

    ಅದ್ಭುತ ಕಲ್ಪನಾಲೋಕಕ್ಕೆ ಕರೆದೊಯ್ಯುವ ಕಥೆಗಳು‘ಅರೇಬಿಯನ್ ನೈಟ್ಸ್’ ಎಂಬ ಕಥೆಗಳು ಹುಟ್ಟಿದ್ದು ಹೀಗೆ. ಇದರ ಹುಟ್ಟಿನ ಹಿಂದೆ ಇಂಥ ಸೊಗಸಾದ ಕಥೆ ಇರಬೇಕಾದರೆ, ಇನ್ನು ಹೂರಣ ಹೇಗಿರಬೇಡ? ಹೌದು! ಒಂದಕ್ಕಿಂತ ಒಂದು ಅದ್ಭುತ ಕತೆಗಳು. ಎಲ್ಲ ಕಥೆಗಳಿಗೂ ಒಂದೊಂದು ರೋಮಾಂಚಕ ಅಂತ್ಯ! ಇಲ್ಲಿ ಇನ್ನೊಂದು ಮಜವಾದ ಸಂಗತಿ ಹೇಳಲೇಬೇಕು. ಅದೆಂದರೆ, ಮಂತ್ರಿ ತನ್ನ ಮಗಳು ‘ರಾಜನ ಬಳಿಗೆ ಹೋಗುತ್ತೇನೆ’ ಎಂದ ಕೂಡಲೇ ಒಬ್ಬ ತಂದೆಯಾಗಿ ಆತನಿಗೆ ಹೇಗಾಗಿರಬೇಡ? ಅದಕ್ಕೆ ಆತ ತನ್ನ ಮಗಳನ್ನು ರಾಜನ ಬಳಿ ಹೋಗದಿರುವಂತೆ ಬುದ್ಧಿಮಾತು ಹೇಳುತ್ತಾನೆ. ಇಲ್ಲಿಯೂ ಆತ ಕಥೆಗಳ ಮೂಲಕವೇ ಮಗಳಿಗೆ ಬುದ್ಧಿ ಹೇಳುತ್ತಾನೆ.

    ಕಥೆಯಲ್ಲಿ ಬರುವ ಪಾತ್ರಗಳ ಮೂಲಕ ಅಂತಿಮ ನಿರ್ಧಾರ ಹೇಗೆ ಮಾಡಬಹುದು ಎಂಬುದನ್ನು ಮಗಳಿಗೆ ಒಪ್ಪಿಸಲು ಯತ್ನಿಸುತ್ತಾನೆ. ಆ ಕಥೆಯ ರಸಾಸ್ವಾದವನ್ನು ಓದಿಯೇ ಅನುಭವಿಸಬೇಕು. ಇಲ್ಲಿ ಬರುವ ಪಾತ್ರಗಳಲ್ಲಿ ಅಣ್ಣ, ತಮ್ಮಂದಿರಿದ್ದಾರೆ. ಅಪ್ಪ ಮಕ್ಕಳಿದ್ದಾರೆ, ಗಂಡ ಹೆಂಡತಿ ಇದ್ದಾರೆ, ಸಂಬಂಧಗಳಿವೆ, ಮಾಟ ಮಂತ್ರ ಇದೆ, ಪ್ರಾಣಿಗಳಿವೆ. ವ್ಯಾಪಾರಿಯೊಬ್ಬ ಊರಿಂದೂರಿಗೆ ಪ್ರಯಾಣಿಸಿ ವ್ಯಾಪಾರ ಮಾಡುತ್ತಾನೆ. ಈ ಮಧ್ಯೆ ಮರದ ನೆರಳಲ್ಲಿ ಊಟ ಮಾಡಿ ಸುಧಾರಿಸಿಕೊಳ್ಳುತ್ತಾನೆ. ಏನೋ ಯೋಚನೆ ಮಾಡುತ್ತ ಅಲ್ಲೇ ಇದ್ದ ಕಲ್ಲನ್ನು ಎತ್ತಿಕೊಂಡು ಸುಮ್ಮನೆ ಎಸೆಯುತ್ತಾನೆ.

    ಅಲ್ಲಿಂದ ಸಮಸ್ಯೆಗಳು ಆರಂಭವಾಗುತ್ತವೆ. ಇದ್ದಕ್ಕಿದ್ದಂತೆ ರಾಕ್ಷಸನೊಬ್ಬ ಪ್ರತ್ಯಕ್ಷನಾಗಿ, ‘ನೀನು ಆ ಕಲ್ಲೆಸೆದು ನನ್ನ ಮಗನ ಕೊಂದೆ. ಹಾಗಾಗಿ ನಾನು ನಿನ್ನನ್ನು ಕೊಲ್ಲುತ್ತೇನೆ’ ಎಂದು ಖಡ್ಗ ಝುಳಪಿಸುತ್ತ ಬರುತ್ತಾನೆ. ಹಾಗೆಯೇ ವ್ಯಾಪಾರಿಯಂತೆ ಇನ್ನು ಮೂವರು ಆ ರಸ್ತೆಯಲ್ಲೇ ಬರುತ್ತಾರೆ. ಹೀಗೆ ಬಂದವರು ಆ ರಾಕ್ಷಸನಿಗೆ ತಮ್ಮ ಕಥೆ ಹೇಳುತ್ತ ಬರುತ್ತಾರೆ. ಮುಂದೆ ಏನಾಯ್ತು? ಆ ವ್ಯಾಪಾರಿಯನ್ನು ರಾಕ್ಷಸ ಬಿಟ್ಟನೆ? ಕಥೆಯ ಕೊನೆಯಲ್ಲಿ ರಾಕ್ಷಸನ ಗತಿ ಏನಾಯಿತು ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಹೀಗೆ ಕಥೆಗಳಲ್ಲೊಂದು ಕಥೆ. ಎಲ್ಲದರಲ್ಲೂ ಕುತೂಹಲ. ಓದಲು ಆರಂಭಿಸಿದರೆ ಪುಸ್ತಕ ಕೆಳಗಿಡಲು ಆಗದೆ ಮುಂದೆ ಏನಾಗಬಹುದು ಎಂಬ ಆಸಕ್ತಿಯಿಂದ ಬಿಡುಗಡೆಯೇ ಇಲ್ಲ. ಅಂತಹ ಅದ್ಭುತ ಓದು ನಿಮ್ಮದಾಗಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts