More

    ಜನರ ಜೀವ ಉಳಿಸಲು ಶ್ರಮಿಸಿ: ಜಿಲ್ಲಾಡಳಿತಕ್ಕೆ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಸೂಚನೆ

    ರಾಮನಗರ: ಕರೊನಾದಿಂದಾಗಿ ಜಿಲ್ಲೆಯಲ್ಲಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಜನರ ಜೀವ ಉಳಿಸಲು ಶ್ರಮಿಸುವಂತೆ ಸೂಚಿಸಿದರು.

    ಜಿಲ್ಲಾಡಳಿತದ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳವಾರ ಬೆಂಗಳೂರಿನಿಂದ ಮಾತನಾಡಿದ ಅವರು, ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಪ್ರತಿದಿನ ಒಂದು ಇಲ್ಲ ಎರಡು ಸಾವು ದಾಖಲಾಗುತ್ತಿದೆ. ಶೆ.0.60ರಷ್ಟಿದ್ದ ಮರಣ ಪ್ರಮಾಣ ಇಂದು ಶೇ.1.24ಕ್ಕೆ ಏರಿದೆ. ಮರಣ ಪ್ರಮಾಣ ತಗ್ಗಿಸಲು ಆದ್ಯತೆ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

    ಜಿಲ್ಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯ ಸೌಲಭ್ಯ ಒದಗಿಸಲಾಗಿದೆ. ಹೀಗಿದ್ದರೂ ಸಾವಿನ ಪ್ರಮಾಣ ಏರುತ್ತಿದೆ. ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಡಿಸಿಎಂ ನಿರ್ದೇಶನ ನೀಡಿದರು.

    ಸಾವಿನ ಮಾಹಿತಿ: ಜಿಲ್ಲೆಯಲ್ಲಿ ಮೃತಪಡುತ್ತಿರುವವರ ಪೈಕಿ ಹೆಚ್ಚಿನವರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ರಾಮನಗರ ಜಿಲ್ಲೆಯ ಕೆಲವರು ಬೆಂಗಳೂರಿನಲ್ಲೇ ಕರೊನಾ ಪರೀಕ್ಷೆ ಮಾಡಿಸಿಕೊಂಡು ಖಾಸಗಿ ಆಸ್ಪತ್ರೆಗೆ ಸೇರಿದ್ದು, ಪರಿಸ್ಥಿತಿ ಕೈಮೀರಿದಾಗ ಖಾಸಗಿ ಆಸ್ಪತ್ರೆಯವರು ಅನಿವಾರ್ಯವಾಗಿ ಜಿಲ್ಲೆಗೆ ಕಳಿಸುತ್ತಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 75 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದವರು ನಿಧನರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣ ತಾಲೂಕಿನಲ್ಲಿ 11, ಕನಕಪುರ ತಾಲೂಕಿನಲ್ಲಿ 11, ಮಾಗಡಿ ತಾಲೂಕಿನಲ್ಲಿ 13 ಹಾಗೂ ರಾಮನಗರ ತಾಲೂಕಿನಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 50 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಮಾಹಿತಿ ನೀಡಿದರು.

    ಕರೊನಾ ಪರೀಕ್ಷೆ: ಜಿಲ್ಲೆಯಲ್ಲಿ ಪ್ರತಿದಿನವೂ 950ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ರೋಗ ಲಕ್ಷಣ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆ ಇರುವವರಿಗೆ ಆದ್ಯತೆ ಮೇರೆಗೆ ಪರೀಕ್ಷೆ ನಡೆಸಲಾಗುತ್ತಿದೆ. ಇಡೀ ರಾಜ್ಯದಲ್ಲೇ ನಿಗದಿಪಡಿಸಿರುವ ಸಂಖ್ಯೆಗಿಂತಲೂ ಅಧಿಕ ಪ್ರಮಾಣದ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಜಿಲ್ಲೆ ಎನ್ನುವ ಹಿರಿಮೆ ರಾಮನಗರ ಹೊಂದಿದೆ ಎಂದು ಅರ್ಚನಾ ತಿಳಿಸಿದರು.

    ಜಿಲ್ಲೆಯಲ್ಲಿ ವೈದ್ಯರ ಕೊರತೆ: ಜಿಲ್ಲೆಯಲ್ಲಿ 10 ವೈದ್ಯರ ಕೊರತೆ ಇದ್ದು, ಭರ್ತಿಗೆ ಕ್ರಮವಹಿಸಲಾಗಿದೆ. ಎಂಬಿಬಿಎಸ್ ವೈದ್ಯರು ಕೋವಿಡ್ ಕೇರ್‌ನಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಅದೇ ರೀತಿ 20 ನರ್ಸ್‌ಗಳ ಪೈಕಿ ಆರು ಜನರು ಮಾತ್ರ ಸೇರ್ಪಡೆಯಾಗಿದ್ದಾರೆ. ಇನ್ನೂ 14 ಮಂದಿ ಅವಶ್ಯಕತೆ ಇದೆ. ಹಾಗೆಯೇ 12 ಮಂದಿ ಲ್ಯಾಬ್ ಟೆಕ್ನಿಷಿಯನ್ ಕೊರತೆ ಇರುವುದಾಗಿ ಜಿಲ್ಲಾಧಿಕಾರಿಗಳು ಉಪ ಮುಖ್ಯಮಂತ್ರಿಗಳಿಗೆ ತಿಳಿಸಿದರು.

    ಕಲಾ ಗ್ರಾಮ ತೆರೆಯಲು ಚಿಂತನೆ: ಚನ್ನಪಟ್ಟಣದ ಗೊಂಬೆಗಳು, ರೇಷ್ಮೆ, ಕರಕುಶಲ ವಸ್ತುಗಳನ್ನು ಒಂದೆಡೆ ತಯಾರಿಸುವ ಮತ್ತು ಮಾರಾಟ ಮಾಡುವಂತಹ ಒಂದು ’ಕಲಾಗ್ರಾಮ’ವನ್ನು ಜಿಲ್ಲೆಯಲ್ಲಿ ತೆರೆಯುವ ಉದ್ದೇಶವಿದೆ. ಇದಕ್ಕಾಗಿ 50 ಎಕರೆ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಸಮೀಪ ಗುರುತಿಸುವಂತೆ ಉಪಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts